‘ಲೈಂಗಿಕ ಅಲ್ಪಸಂಖ್ಯಾತರ’ ಬಗ್ಗೆ ಸಂಶೋಧನೆ ನಡೆಸುತ್ತಿರುವ ತೃತೀಯ ಲಿಂಗಿ ದೀಪಾ ಬುದ್ಧೆ

 

ಮೈಸೂರು,ಮೇ,4,2022(www.justkannada.in):  ತೃತೀಯ ಲಿಂಗಿಯಾಗಿ ಓದುವುದು, ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಹೀಗಾಗಿ ತನ್ನವರ ಬಗ್ಗೆಯೇ ಇಲ್ಲೊಬ್ಬ ತೃತೀಯ ಲಿಂಗಿಯೊಬ್ಬರು ಸಂಶೋಧನೆ ನಡೆಸುತ್ತಿದ್ದಾರೆ.

ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ವಿತರಣಾ ಸಂದರ್ಭದಲ್ಲಿ ವಿವಿಯಲ್ಲಿ ಪಿಎಚ್.ಡಿ ಮಾಡುತ್ತಿರುವ ದೀಪಾ ಬುದ್ಧೆ ಲ್ಯಾಪ್‌ ಟಾಪ್ ಪಡೆದುಕೊಂಡಿದ್ದು ವಿಶೇಷವಾಗಿತ್ತು.

ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ಗ್ರಾಮದ ದೀಪಾ ಬುದ್ಧೆ 2015ರಲ್ಲಿ ಬಿಎ ಮುಗಿಸಿ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಆಗ ಅವರು ಗುರುಸ್ವಾಮಿ ಆಗಿದ್ದರು. 8ನೇ ತರಗತಿಯಿಂದಲೇ ದೇಹದಲ್ಲಾದ ಬದಲಾವಣೆ ಅರಿತು ಪದವಿವರೆಗೂ ಗುರುಸ್ವಾಮಿ ಆಗಿಯೇ ಇದ್ದರು. ಹೀಗೆ ಮಾನಸಿಕ ಒತ್ತಡ ಮುಂದುವರಿದಾಗ ತೃತೀಯ ಲಿಂಗಿಗಳ ಸಮುದಾಯ ಸೇರಿದರು. ಮತ್ತೆ ಓದಿನ ಬಗ್ಗೆ ಆಸಕ್ತಿ ಬೆಳೆದು 2018ರಲ್ಲಿ ಚಾಮರಾಜನಗರ ಸ್ನಾತಕೋತ್ತರ ಕೇಂದ್ರದಲ್ಲಿ ಅಂಬೇಡ್ಕರ್ ಸ್ಟಡೀಸ್‌ ನಲ್ಲಿ ಎಂಎ ಮುಗಿಸಿದರು. 2020ರಲ್ಲಿ ಪಿಎಚ್.ಡಿ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದು ಇದೀಗ ‘ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಮತ್ತು ಹೋರಾಟಗಳು-ಒಂದು ವಿಮರ್ಶಾತ್ಮಕ ಅಧ್ಯಯನ’ ಬಗ್ಗೆ ಪಿಎಚ್.ಡಿ ಮಾಡುತ್ತಿದ್ದಾರೆ. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಡಾ.ಸೋಮಶೇಖರ್ ಮಾರ್ಗದರ್ಶಕರಾಗಿದ್ದಾರೆ.

ಇದು ಕೇವಲ ಸಂಶೋಧನೆ ಅಲ್ಲ. ನಮ್ಮ ಸಮುದಾಯವನ್ನು ಅರಿಯುವ ಉದ್ದೇಶವೂ ಹೌದು. ಪಿಎಚ್.ಡಿ ಮಾಡುತ್ತಿರುವ ಮೊದಲ ಲಿಂಗತ್ವ ಅಲ್ಪಸಂಖ್ಯಾತೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಮುಂದೆ ಅಧ್ಯಾಪಕಿ ಆಗುವ ಆಸೆ ಇದೆ. ಅದಕ್ಕೂ ಮುನ್ನ ಉತ್ತಮ ಪ್ರಜೆ ಆಗಬೇಕು. ಅಂಬೇಡ್ಕರ್ ಹಾಗೂ ಬುದ್ಧನ ಚಿಂತನೆ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ,’’ ಎನ್ನುತ್ತಾರೆ ದೀಪಾ ಬುದ್ಧೆ.

Key words:mysore university-Deepa Buddhe- Transgender- researching -sexual minority- model