ಬೆಂಗಳೂರು,ಆಗಸ್ಟ್,8,2026 (www.justkannada.in): ಇಂದಿನ ವಿದ್ಯಾರ್ಥಿಗಳಿಗೆ ನವ ತಂತ್ರಜ್ಞಾನವನ್ನು ಅತಿ ವೇಗವಾಗಿ ಕಲಿಸುವ ಮೂಲಕ ತಂತ್ರಜ್ಞಾನವನ್ನು ಅಭಿವೃದ್ಧಿ ಪೂರಕವಾಗಿ ಬಳಕೆ ಮಾಡುವುದಕ್ಕೆ ತಿಳಿಸಿಕೊಡುವ ಅವಶ್ಯಕತೆ ಇದೆ ಎಂದು ಕೈಗಾರಿಕಾ ಮತ್ತು ಶಿಕ್ಷಣ ಕ್ಷೇತ್ರದ ಪರಿಣಿತರು ಒಮ್ಮತ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು), ಬಿಎಂಎಸ್ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ” ಉನ್ನತ ಶಿಕ್ಷಣದ ಪಠ್ಯಕ್ರಮದ ಪುನರ್ ರಚನೆ: ವಿಕಾಸಗೊಳ್ಳುತ್ತಿರುವ ಉದ್ಯೋಗ ಮಾರುಕಟ್ಟೆ ಮತ್ತು ಕೃತಕ ಬುದ್ಧಿಮತ್ತೆ(ಎಐ) ಸೇರ್ಪಡೆ” ವಿಷಯ ಕುರಿತಾಗಿ ಕೈಗಾರಿಕೋದ್ಯಮಿಗಳು ಮತ್ತು ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದರು.
ವಿಟಿಯು ಡೀನ್ ಫ್ಯಾಕಲ್ಟಿ ಆಫ್ ಎಂಜಿನಿಯರಿಂಗ್ ಡಾ.ಎಚ್.ಎ. ಸಂಜಯ್, ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಎಚ್.ಆರ್.ಸುದರ್ಶನ ರೆಡ್ಡಿ, ಯೂನಿಸೆಸ್ ಇಂಡಿಯಾದ ಉಪಾಧ್ಯಕ್ಷ ಲಲಿತಾನಂದ ಮೋಸೆ, ವೆಸ್ಟ್ ಫಾರ್ಮ ಕಂಪನಿಯ ಹಿರಿಯ ನಿರ್ದೇಶಕ ಸಿ.ವೆಂಕಟ ಶ್ರೀಧರ್, ಇಂಡಿಯ ಕಂಪನಿಯ ಮುಖ್ಯಸ್ಥ ಶ್ರೀನಾಥ್ ನಂದಕರ್ಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.
“ಇಂದು ಹೆಚ್ಚು ಸದ್ದು ಮಾಡುತ್ತಿರುವ ತಂತ್ರಜ್ಞಾನದಲ್ಲಿ ಎಐ ಬಹಳ ಮುಖ್ಯವಾಗಿದೆ. ನಾವು ಇದನ್ನು ದುರ್ಬಳಕೆ ಮಾಡಿಕೊಳ್ಳುವ ಬದಲಾಗಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ಪ್ರಶ್ನೆ ಮಾಡುವ ರೀತಿಯಲ್ಲಿ ಕಲಿಸಬೇಕಿದೆ. ಪಠ್ಯದಲ್ಲೂ ಎಐಗೆ ಹೆಚ್ಚಿನ ಒತ್ತು ನೀಡಿ ಬದಲಾವಣೆ ತರಬೇಕಿದೆ. ಎಐ ಬಂದಾಕ್ಷಣ ಉದ್ಯೋಗ ಕಸಿಯಲಿದೆ ಎಂಬುದಕ್ಕಿಂತ ಇದರೊಟ್ಟಿಗೆ ಕೆಲಸ ಮಾಡುವುದಕ್ಕೆ ಪ್ರಯತ್ನಿಸಬೇಕು” ಎಂಬ ಅಭಿಪ್ರಾಯಗಳನ್ನು ಮಂಡಿಸಿದರು.
ಈ ವೇಳೆ ವಿಟಿಯು ಕಾರ್ಯುಕಾರಿ ಪರಿಷತ್ತಿನ ಸದಸ್ಯರಾದ ಪ್ರೋ.ಕೇಶವಮೂರ್ತಿ, ಡಾ.ಬಿ.ಕರುಣಾಕರ ರೈ, ವಿಶೇಷಾಧಿಕಾರಿ ಡಾ.ಅಜಿತ್ ಪದ್ಯಾಣ ಇತರರು ಇದ್ದರು.
Key words: New technology, development, Opinion, education-industry, experts






