ಮೈಸೂರು,ಅಕ್ಟೋಬರ್,23,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಇ-ಖಾತಾ ಸೇವೆಯನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ, ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಮಾರ್ಗದರ್ಶನದಲ್ಲಿ ಮತ್ತು ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ವಿಶೇಷ ಪ್ರಜಾಸೇವಾ ಇ-ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 28-10-2026ರ ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗುವುದು.
ಪಾಲಿಕೆಯ ಎಲ್ಲಾ ಒಂಬತ್ತು ವಲಯ ಕಛೇರಿಗಳ ವ್ಯಾಪ್ತಿಯಲ್ಲಿರುವ ಮನೆಗಳು ಮತ್ತು ನಿವೇಶನಗಳ ಆಸ್ತಿ ಮಾಲೀಕರು ಈ ಆಂದೋಲನದಲ್ಲಿ ಇ-ಖಾತಾ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾದ ಅರ್ಹ ಅರ್ಜಿಗಳನ್ನು ಮೂರು ದಿನಗಳೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. 
ಇ-ಖಾತಾ ವಿತರಣೆ: ದಿನಾಂಕ 31-10-2026ರ ಶನಿವಾರ ಸಂಜೆ 4.00 ಗಂಟೆಗೆ ಇದೇ ಸ್ಥಳದಲ್ಲಿ ಇ-ಖಾತಾ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ತಿಳಿಸಿದ್ದಾರೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ಕಡ್ಡಾಯ ದಾಖಲೆಗಳು
ಎ-ಖಾತಾ (A-Khata) ಆಸ್ತಿಗಳಿಗೆ
- ನೋಂದಾಯಿತ ಕ್ರಯಪತ್ರ, ದಾನಪತ್ರ ಅಥವಾ ಇತರೆ ನೋಂದಾಯಿತ ಮಾಲೀಕತ್ವದ ದಾಖಲೆ.
- ಪ್ರಸ್ತುತ ಸಾಲಿನ ಋಣಭಾರ ಪ್ರಮಾಣಪತ್ರ (EC).
- ಪ್ರಸ್ತುತ ಸಾಲಿನ ಪೂರ್ಣ ಆಸ್ತಿ ತೆರಿಗೆ ಪಾವತಿ ರಸೀದಿ.
- ಪಾಸ್ಪೋರ್ಟ್ ಸೈಜ್ ನ ಒಂದು ಆಸ್ತಿ ಮಾಲೀಕರ ಭಾವಚಿತ್ರ.
- ಆಸ್ತಿಯ ಒಂದು ಭಾವಚಿತ್ರ.
- ಆಸ್ತಿ ಮಾಲೀಕರ ಆಧಾರ್ ಕಾರ್ಡ್.
ಬಿ-ಖಾತಾ (B-Khata) ಆಸ್ತಿಗಳಿಗೆ
- ದಿನಾಂಕ 10-09-2024ಕ್ಕಿಂತ ಪೂರ್ವದ ನೋಂದಾಯಿತ ಮಾಲೀಕತ್ವದ ದಾಖಲೆಗಳು.
- ಋಣಭಾರ ಪ್ರಮಾಣ ಪತ್ರ (EC).
- ಪ್ರಸ್ತುತ ಸಾಲಿನ ಪೂರ್ಣ ಆಸ್ತಿ ತೆರಿಗೆ ಪಾವತಿ ರಸೀದಿ.
- ಆರ್ಟಿಸಿ (RTC).
- ಒಂದು ಪಾಸ್ಪೋರ್ಟ್ size ನ ಆಸ್ತಿ ಮಾಲೀಕರ ಭಾವಚಿತ್ರ.
- ಒಂದು ಆಸ್ತಿಯ ಭಾವಚಿತ್ರ.
- ಆಸ್ತಿ ಮಾಲೀಕರ ಆಧಾರ್ ಕಾರ್ಡ್.
ಮೇಲಿನ ದಾಖಲೆಗಳನ್ನು ಸಂಬಂಧಪಟ್ಟ ಆಸ್ತಿ ಮಾಲೀಕರು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಮತ್ತು ಅನ್ವಯವಾಗುವ ನಿಯಮಗಳ ಪ್ರಕಾರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು.
ಅರ್ಜಿಯ ವಿಧಾನ, ಅಗತ್ಯ ದಾಖಲೆಗಳು ಹಾಗೂ ಇತರೆ ವಿವರಗಳನ್ನು ದಿನಾಂಕ 24-10-2026ರಿಂದ ಮೈಸೂರು ಮಹಾನಗರ ಪಾಲಿಕೆಯ ಅಧಿಕೃತ ವೆಬ್ ಸೈಟ್ ಹಾಗೂ ಸಾಮಾಜಿಕ ತಾಣದಲ್ಲಿ ವೀಕ್ಷಿಸಬಹುದು ಆದ್ದರಿಂದ, ಸಾರ್ವಜನಿಕರು ಈ ವಿಶೇಷ ಪ್ರಜಾಸೇವಾ ಆಂದೋಲನದ ಸದುಪಯೋಗ ಪಡೆದುಕೊಂಡು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಇ-ಖಾತಾ ಸೇವೆಯನ್ನು ಪಡೆಯಬೇಕೆಂದು ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಮನವಿ ಮಾಡಿದ್ದಾರೆ.







