ಮೈಸೂರು, ಅಕ್ಟೋಬರ್, 24,2026 (www.justkannada.in): ಸ್ವಚ್ಛತೆ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಮೈಸೂರು ನಗರದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಶೌಚಾಲಯ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ನಗರದ ಹೋಟೆಲ್ ಗಳು ಹಾಗೂ ಉಪಾಹಾರ ಗೃಹಗಳಲ್ಲಿ ಲಭ್ಯವಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಉಚಿತವಾಗಿ ಮುಕ್ತಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆಯು ಹೋಟೆಲ್ ಮಾಲೀಕರ ಸಂಘಕ್ಕೆ ಮನವಿ ಮಾಡಿದೆ.
ಮೈಸೂರು ನಗರಕ್ಕೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸಾರ್ವಜನಿಕರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಅಗತ್ಯ ಸಂದರ್ಭಗಳಲ್ಲಿ ಶೌಚಾಲಯ ಸೌಲಭ್ಯ ದೊರೆಯುವುದು ಅತ್ಯಂತ ಅವಶ್ಯಕವಾಗಿದೆ.
ಈ ಹಿನ್ನೆಲೆಯಲ್ಲಿ, ಹೋಟೆಲ್ ಗಳು ಹಾಗೂ ಉಪಾಹಾರ ಗೃಹಗಳಲ್ಲಿ ಈಗಾಗಲೇ ಲಭ್ಯವಿರುವ ಶೌಚಾಲಯಗಳನ್ನು ಕೇವಲ ಗ್ರಾಹಕರಿಗೆ ಮಾತ್ರ ಸೀಮಿತಗೊಳಿಸದೆ, ಇತರೆ ಸಾರ್ವಜನಿಕರಿಗೂ ಯಾವುದೇ ಶುಲ್ಕ ವಿಧಿಸದೆ ಬಳಸಲು ಅವಕಾಶ ಕಲ್ಪಿಸುವಂತೆ ಕೋರಲಾಗಿದೆ.
ಅಲ್ಲದೆ, ಶೌಚಾಲಯಗಳಲ್ಲಿ ಸ್ವಚ್ಛತೆ, ನೀರು ಹಾಗೂ ಅಗತ್ಯ ನೈರ್ಮಲ್ಯ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವುದರೊಂದಿಗೆ, ಶೌಚಾಲಯ ಬಳಸಲು ಆಗಮಿಸುವ ಸಾರ್ವಜನಿಕರಿಗೆ ಹೋಟೆಲ್ ಸಿಬ್ಬಂದಿಯು ಸೂಕ್ತ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.
ನಗರದಲ್ಲಿ ಬಯಲು ಮೂತ್ರ ವಿಸರ್ಜನೆಯನ್ನು ತಡೆಗಟ್ಟುವುದು, ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸುವುದು ಹಾಗೂ ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಮೈಸೂರನ್ನು ಮತ್ತಷ್ಟು ಸ್ವಚ್ಛ, ಸುಂದರ ಹಾಗೂ ಸಾರ್ವಜನಿಕ ಸ್ನೇಹಿ ನಗರವನ್ನಾಗಿಸುವ ನಿಟ್ಟಿನಲ್ಲಿ ಹೋಟೆಲ್ ಮಾಲೀಕರು ಹಾಗೂ ಉಪಾಹಾರ ಗೃಹಗಳ ಮಾಲೀಕರು ಮಹಾನಗರ ಪಾಲಿಕೆಯ ಈ ಉಪಕ್ರಮಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸುವಂತೆ ಹೋಟೆಲ್ ಮಾಲೀಕರ ಸಂಘಸಂಸ್ಥೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೂ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ.ಕೆ ಸವಿತಾ ಅವರು ಮನವಿ ಮಾಡಿದ್ದಾರೆ.






