ನವದೆಹಲಿ,ಅಕ್ಟೋಬರ್,24,2026(www.justkannada.in): ವಾರ್ತಾ ಇಲಾಖೆಯ ಹುದ್ದೆಗಳನ್ನ ನಿರ್ವಹಿಸಲು ತಾಂತ್ರಿಕ ಪರಿಣಿತಿ ಹೊಂದಿರುವ ಅಗತ್ಯವಿದ್ದು ಪತ್ರಿಕೋದ್ಯಮ/ ಸಮೂಹ ಸಂವಹನ ವಿದ್ಯಾರ್ಹತೆ ಹೊಂದಿರಬೇಕು. ಆದರೆ ವಾರ್ತಾ ಇಲಾಖೆಯ ನವದೆಹಲಿ ಕಚೇರಿಯ ಉಪನಿರ್ದೇಶಕ ಹುದ್ದೆಗೆ ದಂತವೈದ್ಯಾಧಿಕಾರಿಯೊಬ್ಬರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಅಭಿಪ್ರಾಯ ಬದಿಗಿಟ್ಟು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹುದ್ದೆ ಹಲವು ತಿಂಗಳುಗಳಿಂದ ಖಾಲಿ ಇತ್ತು. ಕರ್ನಾಟಕ ಭವನದಲ್ಲಿರುವ ಉಪನಿರ್ದೇಶಕರ ಕಚೇರಿಯಲ್ಲಿ ಸದ್ಯ ‘ಸಿ’ ದರ್ಜೆಯ ಒಬ್ಬ ನೌಕರ ಮಾತ್ರ ಇದ್ದಾರೆ. ಈ ಹುದ್ದೆಗೆ ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಾರ್ತಾ ಇಲಾಖೆಯ ಆಯುಕ್ತರಿಗೆ ಕೆಲವು ದಿನಗಳ ಹಿಂದೆ ನಿರ್ದೇಶನ ನೀಡಿದ್ದರು.
ಇದೀಗ, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ದಂತವೈದ್ಯಾಧಿಕಾರಿ ಡಾ. ಲವೀನಾ ಜೆ. ನರೋನ್ಹಾ ಅವರನ್ನು ಉಪನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದ್ದು, ಸಚಿವರೊಬ್ಬರ ಶಿಫಾರಸಿನ ಆಧಾರದಲ್ಲಿ ಈ ನಿಯೋಜನೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಾರ್ತಾ *ಉಪನಿರ್ದೇಶಕ ಹುದ್ದೆಯನ್ನು ಇಲಾಖೆಯ ಅಧಿಕಾರಿ ವೃಂದದಿಂದ ಭರ್ತಿ ಮಾಡಬೇಕು. ಈ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿಯಮಾನುಸಾರ ನಿರ್ದಿಷ್ಟ ವಿದ್ಯಾರ್ಹತೆ (ಪತ್ರಿಕೋದ್ಯಮ/ ಸಮೂಹ ಸಂವಹನ) ಹೊಂದಿರಬೇಕು. ಇದೊಂದು ತಾಂತ್ರಿಕ ಪರಿಣತಿ ಹೊಂದಿರುವ ಹುದ್ದೆ.
ಆದರೆ ಕೋರಿಕೆ ಸಲ್ಲಿಸಿರುವ ಸರ್ಕಾರಿ ನೌಕರರು ದಂತ ವೈದ್ಯಾಧಿಕಾರಿಯಾಗಿರುವ ಕಾರಣ ಈ ಪ್ರಸ್ತಾವವನ್ನು ಇಲಾಖೆ ವತಿಯಿಂದ ಪರಿಗಣಿಸಲು ಸಾಧ್ಯವಿಲ್ಲ’ ಎಂದು ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ (ಆಡಳಿತ) ಸಿ.ಆರ್.ನವೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಆಯುಕ್ತರು ಅನುಮೋದನೆ ನೀಡಿದ್ದರು. ಅಭಿಪ್ರಾಯದ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೂ ಕಳುಹಿಸಿದ್ದರು.






