ಮೈಸೂರು ದಸರಾ: ಮಾವುತರು, ಕಾವಾಡಿಗರಿಗೆ ಉಪಹಾರ ಬಡಿಸಿದ ಸಚಿವ  ಡಾ.ಹೆಚ್.ಸಿ.ಮಹದೇವಪ್ಪ.

ಮೈಸೂರು,ಸೆಪ್ಟಂಬರ್,29,2023(www.justkannada.in):  ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗರ ಕುಟುಂಬದ ಸದಸ್ಯರಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಬೆಳಗ್ಗಿನ ಉಪಹಾರ ಬಡಿಸಿದರು.

ಮೈಸೂರು ಅರಮನೆಯ ಮಂಡಳಿ ವತಿಯಿಂದ ಶುಕ್ರವಾರ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಹೋಳಿಗೆ, ತುಪ್ಪ, ತಟ್ಟೆ ಇಡ್ಲಿ, ಸಾಂಬಾರು ಚಟ್ನಿ, ಮಸಾಲೆ ದೋಸೆ, ಸಾಗು, ಉದ್ದಿನ ವಡೆ, ಟೊಮ್ಯಾಟೋ ಬಾತ್, ಕೇಸರಿ ಬಾತ್ ಬಡಿಸಿದ ಸಚಿವ  ಹೆಚ್.ಸಿ ಮಹದೇವಪ್ಪ, ಬಳಿಕ ಮಾವುತರ ಕುಟುಂಬದವರೊಡನೆ ಕುಳಿತು ತಾವೂ ಉಪಹಾರ ಸೇವಿಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭಾಗವಹಿಸುವ ಮಾವುತ ಮತ್ತು ಕಾವಾಡಿಗರಿಗೆ ಪ್ರತೀ ವರ್ಷದಂತೆ ಸಾಂಪ್ರದಾಯಿಕವಾಗಿ ಉಪಹಾರದ ಕೂಟ ಏರ್ಪಡಿಸಲಾಗಿದೆ. ಅದರಂತೆ ಈ ಬಾರಿಯೂ 250ಕ್ಕೂ ಹೆಚ್ಚು ಮಂದಿ ಮಾವುತ, ಕಾವಾಡಿಗರ ಕುಟುಂಬ ಸದಸ್ಯರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ದಸರಾ ಮಹೋತ್ಸವದ ಸಂದರ್ಭದಲ್ಲಿ ಕಾಡನ್ನು ಬಿಟ್ಟು ನಗರಕ್ಕೆ ಬಂದಿರುವ ಮಾವುತ ಮತ್ತು ಕಾವಾಡಿಗರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯವನ್ನು ನೀಡಲಾಗಿದೆ‌. ಮಕ್ಕಳಿಗೆ ವಿದ್ಯಾಭ್ಯಾಸದ ಸಮಸ್ಯೆ ಉಂಟಾಗಬಾರದೆಂದು ಅರಮನೆ ಆವರಣದಲ್ಲಿ ತಾತ್ಕಾಲಿಕವಾಗಿ ಟೆಂಟ್ ಶಾಲೆಯನ್ನು ತೆರೆದು, ಶಿಕ್ಷಕರನ್ನು ನೇಮಿಸಿ ಓದು, ಬರಹ ಕಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಅವರ ಆರೋಗ್ಯದ ಹಿತದೃಷ್ಟಿಯಿಂದಲೂ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಾವುತರ ಯೋಗಕ್ಷೇಮ ವಿಚಾರಿಸಿದ ಸಚಿವರು

ಉಪಹಾರ ಸೇವಿಸಿದ ಬಳಿಕ ದಸರಾ ಗಜಪಡೆಯನ್ನು ಪೋಷಣೆ ಮಾಡುತ್ತಿರುವ ಮಾವುತರು ಹಾಗೂ ಕಾವಾಡಿಗರ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಮಾತನಾಡಿ, ಕಾಡಿನ ಸಂಪತ್ತೇ ನಾಡಿನ ಸಂಪತ್ತು. ಕಾಡಿನ ಸಂರಕ್ಷಕರಾದ ನೀವು, ಅರಣ್ಯ ಸಂಪತ್ತಿನ ಭಾಗವೇ ಆಗಿದ್ದೀರಿ. ನಿಮಗೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಸರ್ಕಾರದಿಂದ ಒದಗಿಸಿಕೊಡಲಾವುದು ಎಂದು ಭರವಸೆ ನೀಡಿದರು.

ಆರೋಗ್ಯ ಶಿಬಿರಕ್ಕೆ ಚಾಲನೆ

ಇದೇ ಸಂದರ್ಭದಲ್ಲಿ ಮೈಸೂರು ಅರಮನೆ ಮಂಡಳಿ ಹಾಗೂ ಅಪೋಲೋ ಬಿ.ಜಿ.ಎಸ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಮಾವುತರು ಮತ್ತು ಕಾವಾಡಿಗರ ಕುಟುಂಬದವರಿಗೆ ಆಯೋಜಿಸಿದ್ದ ಉಚಿತ ತಪಾಸಣೆ ಶಿಬಿರಕ್ಕೆ ಸಚಿವ ಹೆಚ್.ಸಿ ಮಹದೇವಪ್ಪ ಚಾಲನೆ ನೀಡಿದರು.

ಟೆಂಟ್ ಶಾಲೆ ಉದ್ಘಾಟನೆ

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಮೈಸೂರು ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ತಾತ್ಕಾಲಿಕ ಶಾಲೆಯನ್ನು ಉದ್ಘಾಟನೆ ಮಾಡಿದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ, ಅವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಕಾವಡಿಗರು ಹಾಗೂ ಮಾವುತರಿಗೆ ಆಯೋಜಿಸಿರುವ ಪಂಚಕರ್ಮ ತೆರಿಪಿಗೂ ಚಾಲನೆ ನೀಡಿದರು‌.

ಉಪಹಾರ ಸೇವನೆಗೂ ಮುನ್ನ ಹಸಿರು ಕ್ರಾಂತಿಯ ಪಿತಾಮಹಾ, ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ನಿಧನದ ಹಿನ್ನೆಲೆ ಒಂದು ನಿಮಿಷ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಸಂಸದ ಪ್ರತಾಪ ಸಿಂಹ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಅರಣ್ಯ ಸಂರಕ್ಷಾಣಾಧಿಕಾರಿ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಾಣಾಧಿಕಾರಿ ಸೌರಭ್ ಕುಮಾರ್, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Key words: Mysore Dasara -Minister -Dr. H.C. Mahadevappa- served- breakfast – Mavuta and Kavadigas.