ಕಾಮಗಾರಿಗಳ ಪ್ರಗತಿ ಪರಿಶೀಲನೆ: ರಾಜ್ಯದ ಎಲ್ಲಾ ಎಸ್ ಟಿಪಿ  ಘಟಕಗಳ ಸಮೀಕ್ಷೆge ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ.

ಬೆಂಗಳೂರು,ಜುಲೈ,24,2026 (www.justkannada.in):  ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು  ಇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಂಡಳಿಯ ಯೋಜನೆಗಳ ಪ್ರಗತಿ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಗೆ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು.

ನಗರ ನೀರು ಸರಬರಾಜು ಮಂಡಳಿಯು ಎಲ್ಲಾ ಪ್ರದೇಶಗಳಲ್ಲಿ ಚರಂಡಿ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸರಿಯಾಗಿ ಮ್ಯಾಪ್ ಮಾಡಿ, ಆಯಾ ಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತವಾದ ಸುಧಾರಿತ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.

ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ನಿಗದಿತ ಗುರಿ ಸಾಧಿಸಬೇಕು. ಕಾಮಗಾರಿ ವಿಳಂಬವಾಗುತ್ತಿರುವ ಸ್ಥಳಗಳನ್ನು ಗುರುತಿಸಿ ಗುತ್ತಿಗೆದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಸಕಾರಣವಿಲ್ಲದೆ ಅನಗತ್ಯವಾಗಿ ಹಣ ಬಿಡುಗಡೆ ಮಾಡುವುದನ್ನು ತಡೆಯಬೇಕು. ಗುತ್ತಿಗೆದಾರ ಏಜೆನ್ಸಿಗೆ ಅನುದಾನ ಬಿಡುಗಡೆ ಮಾಡಲು ವಿಶ್ವಬ್ಯಾಂಕ್ ಅನುಸರಿಸುವ ಮಾದರಿಯನ್ನು ಅನುಸರಿಸಿ, ಸೂಕ್ತ ‘ಪಾಲಿಸಿ ಫ್ರೇಮ್‌ ವರ್ಕ್’ ರೂಪಿಸಬೇಕು.

ಸ್ಥಳೀಯ ಸಂಸ್ಥೆಗಳು ಯೋಜನೆಗಳ ಸೂಕ್ತ ನಿರ್ವಹಣೆ ಮಾಡದಿರುವುದು ಹಾಗೂ ಬಾಕಿ ಹಣ ಪಾವತಿಸದಿರುವುದನ್ನು ಗಮನಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಮಂಡಳಿಯೇ ಪ್ರತ್ಯೇಕ ಪಾಲಿಸಿ ರೂಪಿಸಿ ಆದಾಯ ತರಬಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ನೀರು ಪೋಲಾಗುವುದು ಮತ್ತು ಸಿಬ್ಬಂದಿ ದುರುಪಯೋಗ ತಡೆಯಲು ‘ಸ್ಮಾರ್ಟ್ ಮೀಟರ್’ ಅಳವಡಿಸಲು ಸಲಹೆ ನೀಡಿದರು. ಆರಂಭದಲ್ಲಿ ಇದನ್ನು ‘ಪೈಲಟ್ ಪ್ರಾಜೆಕ್ಟ್’ ಆಗಿ ಜಾರಿಗೆ ತಂದು, ಮಂಡಳಿಯೇ ನಿರ್ವಹಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಮಾದರಿಯನ್ನು ಪರಿಶೀಲಿಸಲು ತಿಳಿಸಿದರು.

ಯೋಜನಾ ವರದಿ ತಯಾರಿಸುವಾಗ ಹಾಗೂ ಎಸ್.ಟಿ.ಪಿ. ನಿರ್ಮಾಣಕ್ಕೆ ಜಾಗ ಕಾಯ್ದಿರಿಸುವಾಗ ಸ್ಥಳೀಯ ಸಂಸ್ಥೆಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಚರ್ಚಿಸಬೇಕು. ಒಮ್ಮೆ ಜಾಗ ಅಂತಿಮಗೊಂಡ ಮೇಲೆ ಪದೇ ಪದೇ ಬದಲಾಯಿಸುವುದನ್ನು ತಡೆದು, ತಾಂತ್ರಿಕ ತಂಡ ಪೂರ್ಣ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಸೂಚಿಸಿದರು.

ಮಂಡಳಿಯ ಪ್ರಗತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.  ಗ್ರೇಟರ್ ಬೆಂಗಳೂರು ವ್ಯಾಪ್ತಿಯನ್ನು ಹೊರತುಪಡಿಸಿ, ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಸೌಕರ್ಯ ಒದಗಿಸುವ ಜವಾಬ್ದಾರಿಯನ್ನು ಮಂಡಳಿ ಹೊಂದಿದೆ. ರಾಜ್ಯದಲ್ಲಿ ಈವರೆಗೆ 256 ನಗರ ಪ್ರದೇಶಗಳಿಗೆ ಶಾಶ್ವತ ಮೇಲ್ಮೈ ಮೂಲಗಳಿಂದ ಸುರಕ್ಷಿತ ಕುಡಿಯುವ ನೀರು ಕಲ್ಪಿಸಲಾಗಿದ್ದು, ಉಳಿದ 60 ಪಟ್ಟಣಗಳಿಗೆ ಅಂತರ್ಜಲ ಮೂಲದಿಂದ ನೀರು ಪೂರೈಸಲಾಗುತ್ತಿದೆ.

ಮಾರ್ಚ್ 2026ರವರೆಗಿನ ಸಾಧನೆ:

​ಮಂಡಳಿಯಿಂದ ಇದುವರೆಗೆ 649 ನೀರು ಸರಬರಾಜು ಯೋಜನೆಗಳು ಹಾಗೂ 181 ಒಳಚರಂಡಿ (UGD) ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಒಟ್ಟು ರೂ. 16,887.84 ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ಕುಡಿಯುವ ನೀರಿಗೆ ರೂ. 11,531.91 ಕೋಟಿ ಹಾಗೂ ಒಳಚರಂಡಿ ಯೋಜನೆಗಳಿಗೆ ರೂ. 5,355.93 ಕೋಟಿ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.

2026-27ನೇ ಸಾಲಿನ ಆಯವ್ಯಯ ಹಾಗೂ ಯೋಜನೆಗಳು:

2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಯೋಜನೆಯಡಿ ರೂ. 700.00 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.

ಕಲಬುರಗಿ ನಗರಕ್ಕೆ 24/7 ಶಾಶ್ವತ ಕುಡಿಯುವ ನೀರು ಪೂರೈಸಲು ರೂ. 1,863 ಕೋಟಿ ವೆಚ್ಚದ ಡಿಪಿಆರ್‌ಗೆ ತಾತ್ವಿಕ ಅನುಮೋದನೆ ದೊರೆತಿದೆ.

ಮೈಸೂರು ನಗರಕ್ಕೆ ಕಾವೇರಿ ನದಿಯಿಂದ (ಉಂಡವಾಡಿ) ಸಗಟು ನೀರು ಸರಬರಾಜು ಯೋಜನೆ (ಅಂದಾಜು ವೆಚ್ಚ ರೂ. 595 ಕೋಟಿ) ಸೇರಿದಂತೆ ಹಲವು ಬೃಹತ್ ಯೋಜನೆಗಳ ಕಾಮಗಾರಿ ಚಾಲ್ತಿಯಲ್ಲಿದೆ.

​ಅಮೃತ್ 2.0 (AMRUT 2.0) ಯೋಜನೆ:

​ಅಮೃತ್ 2.0 ಯೋಜನೆಯಡಿ ಒಟ್ಟು 227 ನೀರು ಸರಬರಾಜು ಯೋಜನೆಗಳನ್ನು (ಮೊತ್ತ ರೂ. 9,590 ಕೋಟಿ) ಹಮ್ಮಿಕೊಳ್ಳಲಾಗಿದೆ.

​ಒಟ್ಟು 215 ಯೋಜನೆಗಳಿಗೆ ಗುತ್ತಿಗೆ ವಹಿಸಲಾಗಿದ್ದು, ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಶಿವಲೀಲಾ ವಿನಯ್ ಕುಲಕರ್ಣಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Key words: Progress, review, works, Minister, Yathindra Siddaramaiah