Wednesday, September 9, 2026

BDA Apartments

Home Front Page ಹೊಸ ಪರಿಕಲ್ಪನೆಯೊಂದಿಗೆ ದೀಪಾಲಂಕಾರ ರೂಪಿಸಿ:  ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ

ಹೊಸ ಪರಿಕಲ್ಪನೆಯೊಂದಿಗೆ ದೀಪಾಲಂಕಾರ ರೂಪಿಸಿ:  ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ

ಮೈಸೂರು, ಸೆಪ್ಟಂಬರ್, 9, 2026 (www.justkannada.iin):  ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರಕ್ಕೆ ಈ ಬಾರಿ ಹೊಸ ಮೆರುಗು ನೀಡುವುದರ ಜತೆಗೆ ಆಕರ್ಷಕ ಪರಿಕಲ್ಪನೆಯಲ್ಲಿ ಮೂಡಿಬರಬೇಕು, ಈ ನಿಟ್ಟಿನಲ್ಲಿ ಸಿದ್ಧತೆಕೈಗೊಳ್ಳಬೇಕು ಎಂದು ಶಾಸಕರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಸರಾ ವಿದ್ಯುತ್ ದೀಪಾಲಂಕಾರದ ಸಿದ್ಧತೆಗಳ ಕುರಿತು ಬುಧವಾರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಕಳೆದ ವರ್ಷಕ್ಕಿಂತ ಈ ಬಾರಿ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಕಡಿಮೆ ಅವಧಿಯಲ್ಲಿ ಸಮರೋಪಾದಿಯಲ್ಲಿ ಸಿದ್ಧತೆ ಕೈಗೊಂಡು, ಕಳೆದ ಮೂರು ವರ್ಷಗಳಲ್ಲಿ ಕಾಣದಂತಹ ಹೊಸ ವಿನ್ಯಾಸ ಮತ್ತು ಪರಿಕಲ್ಪನೆಯ ದೀಪಾಲಂಕಾರ ಮಾಡಬೇಕು” ಎಂದರು.

“ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆ ಹಾಗೂ ನಿರೀಕ್ಷೆಗಳಿಗೆ ತಕ್ಕಂತೆ ದೀಪಾಲಂಕಾರ ಮಾಡಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರು ತಮ್ಮಲ್ಲಿರುವ ಹೊಸ ಆಲೋಚನೆಗಳನ್ನು ಪರಸ್ಪರ ಮಾಲೋಚಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ಸೂಚಿಸಿದರು.

“ಈ ಹಿಂದಿನ ವರ್ಷಗಳಲ್ಲಿ ವಿದ್ಯುತ್ ದೀಪಾಲಂಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರ ಸಲಹೆಗಳನ್ನು ಪಡೆದುಕೊಂಡು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಸೆಸ್ಕ್ ವತಿಯಿಂದ ಈ ಬಾರಿ ಹೊಸತನದ ದೀಪಾಲಂಕಾರವನ್ನು ಜನರು ನಿರೀಕ್ಷಿಸುತ್ತಿದ್ದು, ಅದಕ್ಕೆ ಪೂರಕವಾಗಿ ದೀಪಾಲಂಕಾರವನ್ನು ಮತ್ತಷ್ಟು ಆಕರ್ಷಕವಾಗಿ ರೂಪಿಸಬೇಕು” ಎಂದರು.

“ದೀಪಾಲಂಕಾರ ಅಳವಡಿಸುವ ವೇಳೆ ಮರಗಳಿಗೆ ಮೊಳೆ ಹೊಡೆಯದಂತೆ ಎಚ್ಚರಿಕೆ ವಹಿಸಬೇಕು. ಮರಗಳಿಗೆ ಹಾನಿಯಾಗದ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ಮುಖ್ಯವಾಗಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡು ದಸರಾ ದೀಪಾಲಂಕಾರದ ಕಾರ್ಯ ಯಶಸ್ವಿಗೊಳಿಸಬೇಕು” ಎಂದು ಹೇಳಿದರು.

ಸಭೆಯಲ್ಲಿ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಅವರು ದಸರಾ ವಿದ್ಯುತ್ ದೀಪಾಲಂಕಾರಕ್ಕಾಗಿ ಕೈಗೊಂಡಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್ ಸೇರಿದಂತೆ ಅಧಿಕಾರಿಗಳು ಹಾಗೂ ವಿದ್ಯುತ್ ಗುತ್ತಿಗೆದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

Key words: Mysore dasara, new concept, lighting, CESC President, Ramesh Bandisidde Gowda