ಮೈಸೂರು,ಸೆಪ್ಟಂಬರ್,9,2026 (www.justkannada.in): ಮತ್ತೊಂದು ಗಣೇಶ ಚತುರ್ಥಿ ಆಚರಣೆಗೆ ನಾಡು ಸಜ್ಜುಗೊಳ್ಳುತ್ತಿದ್ದು, ಈ ಬಾರಿಯಾದರೂ ಹಬ್ಬದಾಚರಣೆ ಪರಿಸರಕ್ಕೆ ಮಾರಕವಾಗದಂತೆ ಸಾರ್ವಜನಿಕರು ಎಚ್ಚರವಹಿಸಬೇಕಿದೆ. ಪಿಒಪಿ, ಡಿಜೆ ತ್ಯಜಿಸಿ ಸಾಂಪ್ರದಾಯಿಕವಾಗಿ ಗಣೇಶ ಹಬ್ಬ ಆಚರಿಸುವಂತೆ ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷ ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್ ಅವರು, ಪ್ರತಿ ಬಾರಿಯೂ ಗಣೇಶ ಚತುರ್ಥಿಯು ಪರಿಸರ ಸಂರಕ್ಷಣೆಗೆ ಸವಾಲಿನದ್ದಾಗಿದೆ. ಹಬ್ಬ ಆಚರಣೆ ಹೆಸರಲ್ಲಿ ವರ್ಷದಿಂದ ವರ್ಷಕ್ಕೆ ಪರಿಸರ ನಾಶ ಹೆಚ್ಚುತ್ತಲೇ ಇದೆ. ಪಿಒಪಿ ಮೂರ್ತಿಗಳ ಬಳಕೆ, ಅತೀ ಹೆಚ್ಚು ರಾಸಾಯನಿಕ ಮಿಶ್ರಿತ ಬಣ್ಣಗಳ ಬಳಕೆಯು ಜಲಮಾಲಿನ್ಯಕ್ಕೆ ಕಾರಣವಾಗುತ್ತಿದ್ದರೆ, ಹಬ್ಬದ ವೇಳೆ ಬಳಸುವ ದೊಡ್ಡ ದೊಡ್ಡ ಧ್ವನಿವರ್ಧಕಗಳು, ತಮಟೆ, ಡೊಳ್ಳುಗಳು ಶಬ್ಧ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದರಿಂದ ವೃದ್ಧರು, ಮಕ್ಕಳು, ರೋಗಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಹಬ್ಬದ ಹೆಸರಿನಲ್ಲಿ ಮೇರೆ ಮೀರಿರುವ ಅನಾಚಾರಗಳನ್ನು ನಿಯಂತ್ರಿಸಬೇಕಿದೆ ಎಂದು ತಿಳಿಸಿದ್ದಾರೆ.
ಭಾವೈಕ್ಯತೆ ಮೂಡಿಸಲಿ:
ಮನೆ ಮನೆಗಳಿಗೆ ಸೀಮಿತವಾಗಿದ್ದ ಹಬ್ಬವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಗೋಪಾಲಕೃಷ್ಣ ಗೋಕಲೆ ಅವರು ನಾಡು ಕಟ್ಟುವ ಸಲುವಾಗಿ, ಎಲ್ಲರಲ್ಲೂ ಭಾವೈಕ್ಯತೆ ಮೂಡಿಸುವ ಸಲುವಾಗಿ ಬಳಸಿಕೊಂಡರು. ಅಂತಹ ಹಿನ್ನೆಲೆಯ ಹಬ್ಬ ಇಂದು ನಾಡಿನಲ್ಲಿ ಅನೇಕ ಕಹಿ ಘಟನೆಗಳಿಗೆ ಕಾರಣವಾಗುತ್ತಿರುವುದು ಅತ್ಯಂತ ಬೇಸರದ ವಿಷಯ. ಗಣೇಶ ಚತುರ್ಥಿ ಸಾಮರಸ್ಯದ ಬೆಸುಗೆಗೆ ಕಾರಣವಾಗಬೇಕು, ಹಬ್ಬದಿಂದ ನಾಡು ಒಂದುಗೂಡಬೇಕೇ ಹೊರತು ವಿಘಟಿಸಬಾರದು. ಹಬ್ಬದಾಚರಣೆ ಎಲ್ಲರ ಮನಸ್ಸುಗಳನ್ನು ಬೆಸೆಯುವಂತಾಗಬೇಕು. ಹಬ್ಬಗಳು ನಮ್ಮ ಸಂಸ್ಕೃತಿ, ಸಂಪ್ರದಾಯದ ಪ್ರತೀಕ. ಅವುಗಳಿಂದ ನಾಡಿನ ಸಾಮರಸ್ಯ ಹಾಳಾಗದಂತೆ ಎಚ್ಚರವಹಿಸಬೇಕಾದದ್ದು ಎಲ್ಲರ ಕರ್ತವ್ಯ ಎಂದು ಕೆ.ವಿ ಮಲ್ಲೇಶ್ ನುಡಿದಿದ್ದಾರೆ.
ಪಿಒಪಿ ಮೂರ್ತಿ ತ್ಯಜಿಸಿ:
ಗೌರಿ-ಗಣೇಶ ಹಬ್ಬವನ್ನು ಪರಿಸರಕ್ಕೆ ಪೂರಕವಾಗಿ ಆಚರಿಸಲೇಬೇಕಾದ ಕಾಲಘಟ್ಟಕ್ಕೆ ನಾವೀಗ ಬಂದುನಿಂತಿದ್ದೇವೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ರಾಸಾಯನಿಕ ಮಿಶ್ರಿತ ಬಣ್ಣ ಬಳಸಿ ಸಿದ್ಧಪಡಿಸಿದ ಮೂರ್ತಿಗಳನ್ನು ಪೂಜೆಗೆ ಬಳಸಬಾರದು. ಪಿಒಪಿ ಮೂರ್ತಿಗಳು ಸುಲಭವಾಗಿ ನೀರಿನಲ್ಲಿ ಕರಗುವುದಿಲ್ಲ. ನೀರಿನಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗುವುದಕ್ಕೆ ಅದು ಕಾರಣವಾಗುತ್ತದೆ. ರಾಸಾಯನಿಕ ಬಣ್ಣಗಳು ವಿಷಕಾರಿ ಭಾರಿ ಲೋಹಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚಿದ್ದು, ಅದರಿಂದ ನೀರು ಕಲುಷಿತಗೊಂಡು ಜಲಚರಗಳಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸರಕಾರ ಕೂಡ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಅದರ ಸಂಪೂರ್ಣ ಹೊಣೆಗಾರಿಕೆ ಸಾರ್ವಜನಿಕರದ್ದಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಅರಿವು ಮೂಡಿಸಿ:
ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ಅವುಗಳನ್ನು ನೀರಿನಲ್ಲಿ ವಿಸರ್ಜಿಸುವುದನ್ನು ಈ ಹಿಂದೆಯೇ ನಿಷೇಧಿಸಲಾಗಿದೆ. ಈ ನಿಷೇಧಾಜ್ಞೆಯನ್ನು ಕಟ್ಟನಿಟ್ಟಾಗಿ ಜಾರಿಗೊಳಿಸುವಂತೆಯೂ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಅಧಿಕಾರಿಗಳು ಸಹ ಈ ಕಾನೂನು ಜಾರಿಗೆ ಆದ್ಯತೆ ನೀಡುವುದರ ಜತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕೂ ಆದ್ಯತೆ ನೀಡಬೇಕು. ಧಾರ್ಮಿಕ ಭಾವನೆಗಳು, ಆಚರಣೆಗಳು ಪರಿಸರ ಸಂರಕ್ಷಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೆ.ವಿ ಮಲ್ಲೇಶ್ ಸಲಹೆ ನೀಡಿದ್ದಾರೆ.
Key words: Ganesh Chaturthi, traditional, Avoid, POP, DJ, Congress, K.V. Mallesh







