Thursday, August 13, 2026

BDA Apartments

Home Front Page ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ನೀತಿ: ವಿಶ್ವದರ್ಜೆಯ ಸೌಲಭ್ಯ ಕಲ್ಪಿಸಲು ಸಚಿವ ಕೆ.ಜೆ ಜಾರ್ಜ್ ಸೂಚನೆ

ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ನೀತಿ: ವಿಶ್ವದರ್ಜೆಯ ಸೌಲಭ್ಯ ಕಲ್ಪಿಸಲು ಸಚಿವ ಕೆ.ಜೆ ಜಾರ್ಜ್ ಸೂಚನೆ

ಬೆಂಗಳೂರು, ಜುಲೈ ,3,2026 (www.justkannada.in):  ಕರ್ನಾಟಕವನ್ನು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುವ ‘ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ ಯನ್ನು ರೂಪಿಸಲಾಗುತ್ತಿದ್ದು, ಈ ನೀತಿಯಲ್ಲಿ ಕ್ರೂಸ್‌ ಪ್ರವಾಸೋದ್ಯಮ, ಬೀಚ್‌ ಪ್ರವಾಸೋದ್ಯಮ ಹಾಗೂ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಇಂಧನ ಭವನದಲ್ಲಿ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಕೆಜೆ ಜಾರ್ಜ್ , ರಾಜ್ಯದ ಪ್ರವಾಸೋದ್ಯಮವನ್ನು ಮೇಲ್ದರ್ಜೆಗೇರಿಸುವ ದೂರದೃಷ್ಟಿಯ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ರಾಜ್ಯದ ಕರಾವಳಿ ಹಾಗೂ ಮಲೆನಾಡು ವ್ಯಾಪ್ತಿಯ ಆರು ಜಿಲ್ಲೆಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಿದ್ಧವಾಗುತ್ತಿರುವ ಹೊಸ ಪ್ರವಾಸೋದ್ಯಮ ನೀತಿಯಲ್ಲಿ, ವಿಷಯಾಧಾರಿತ (Theme-based) ಪ್ರವಾಸೋದ್ಯಮ ಸರ್ಕೀಟ್‌ ಗಳು, ಕಡಲತೀರ ಪ್ರವಾಸೋದ್ಯಮ, ಕ್ರೂಸ್‌ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು ಹಾಗೂ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಸಚಿವ ಕೆ.ಜೆ ಜಾರ್ಜ್  ತಿಳಿಸಿದರು.

ಅಂತರರಾಷ್ಟ್ರೀಯ ಕ್ರೂಸ್‌ ಹಡಗುಗಳು ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಬಂದರುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಗ್ರ ಕಾರ್ಯತಂತ್ರ ರೂಪಿಸಬೇಕಿದೆ. ಕ್ರೂಸ್‌ ಪ್ರವಾಸಿಗರು ಕರ್ನಾಟಕದಲ್ಲಿ ಹೆಚ್ಚು ದಿನ ಉಳಿಯುವಂತೆ ಆಕರ್ಷಕ ಪ್ರವಾಸೋದ್ಯಮ ಪ್ಯಾಕೇಜ್‌ ಗಳು ಮತ್ತು ಸರ್ಕೀಟ್‌ ಗಳನ್ನು ಅಭಿವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ ಪ್ರಮುಖ ಕ್ರೂಸ್‌ ಆಪರೇಟರ್‌ ಗಳೊಂದಿಗೆ ಸಭೆ ನಡೆಸಿ, ಅವರ ಹಾಗೂ ಪ್ರವಾಸಿಗರ ನಿರೀಕ್ಷೆಗಳನ್ನು ಆಧರಿಸಿ ನೀತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಕೆಜೆ ಜಾರ್ಜ್‌ ಸೂಚಿಸಿದರು.

ಬೀಚ್‌ ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಬ್ಲೂ ಫ್ಲಾಗ್‌ ಬೀಚ್‌ ಗಳ ಅಭಿವೃದ್ಧಿ, ಸ್ವಚ್ಛತೆ, ಸುರಕ್ಷತೆ, ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯ, ಜಲಕ್ರೀಡೆಗಳು (Water Sports), ಸಾಹಸ ಚಟುವಟಿಕೆಗಳು ಹಾಗೂ ಸಮುದ್ರತೀರದಲ್ಲಿ ಗುಣಮಟ್ಟದ ಪ್ರವಾಸಿ ಅನುಭವ ಕಲ್ಪಿಸುವ ಯೋಜನೆಗಳನ್ನು ಹೊಸ ನೀತಿಯಲ್ಲಿ ಸೇರಿಸಬೇಕು ಎಂದು ತಿಳಿಸಿದರು.

ಇದರ ಜೊತೆಗೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮತ್ತು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (JLR) ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಗುಣಮಟ್ಟದ ವಸತಿ, ಮೂಲಭೂತ ಸೌಕರ್ಯ, ಸ್ವಚ್ಛತೆ, ಮಾಹಿತಿ ವ್ಯವಸ್ಥೆ ಹಾಗೂ ಪ್ರವಾಸಿಗರಿಗೆ ಅಗತ್ಯವಾದ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಪ್ರವಾಸಿಗರ ಅನುಭವವನ್ನು ಉತ್ತಮಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

“ಪ್ರವಾಸೋದ್ಯಮ ಎಂದರೆ ಕೇವಲ ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲ. ಪ್ರವಾಸಿಗರಿಗೆ ವಿಶ್ವದರ್ಜೆಯ ಅನುಭವವನ್ನು ನೀಡುವ ಸಮಗ್ರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು. ಉತ್ತಮ ಮೂಲಸೌಕರ್ಯ, ಸುಲಭ ಸಂಪರ್ಕ, ಸುರಕ್ಷತೆ ಮತ್ತು ಗುಣಮಟ್ಟದ ಸೇವೆಗಳ ಮೂಲಕವೇ ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಉತ್ತಮ ಸ್ಥಾನ ಪಡೆಯಬಹುದಾಗಿದೆ,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು .

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಕೆಎಸ್‌ಟಿಡಿಸಿ ಹಾಗೂ ಜೆಎಲ್‌ಆರ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: New policy, coastal, tourism: cruise and beach tourism,  Minister, K.J. George