ಮಹಿಷಾ ದಸರಾ ವಿವಾದ: ಕೋರ್ಟ್ ನಿಂದ ನೋಟಿಸ್ ಕುರಿತು ಸ್ಪಷ್ಟನೆ ನೀಡಿದ ಮಾಜಿ ಮೇಯರ್ ಪುರುಷೋತ್ತಮ್.

ಮೈಸೂರು,ಅಕ್ಟೋಬರ್,9,2023(www.justkannada.in):  ಮಹಿಷಾ ದಸರಾ ವಿವಾದ ಕೋರ್ಟ್ ಮೆಟ್ಟಿಲೇರಿದ್ದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಕೋರ್ಟ್ ನಲ್ಲಿ  ದಾವೆ ಹೂಡಿದ್ದಾರೆ. ಈ ಸಂಬಂಧ ಮಾಜಿ ಮೇಯರ್,ಮಹಿಷಾ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಗೆ ಕೋರ್ಟ್  ನೋಟಿಸ್ ನೀಡಿದೆ ಎನ್ನಲಾಗಿತ್ತು.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮೇಯರ್ ಪುರುಷೋತ್ತಮ್,  ನನಗೆ ಕೋರ್ಟ್ ನಿಂದ ಯಾವುದೇ ನೋಟೀಸ್ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಕೋರ್ಟ್ ನಿಂದ ನೋಟಿಸ್ ಬಂದರೆ ಅದಕ್ಕೆ ಉತ್ತರಿಸಲು  ಸಿದ್ದತೆ ಮಾಡಿಕೊಂಡಿದ್ದೇವೆ. ಸಂಬಂಧಪಟ್ಟ ದಾಖಲೆಗಳನ್ನು ಕೊಟ್ಟು ನಮ್ಮ ಮಹಿಷಾ ಐತಿಹಾಸಿಕ ವ್ಯಕ್ತಿ ಎನ್ನುವುದಕ್ಕೆ ಸಾಕ್ಷ್ಯಾಧಾರಗಳನ್ನು ಸಲ್ಲಿಸುತ್ತೇವೆ. ಕೋರ್ಟ್ ಮೊರೆ ಹೋಗಿರುವುದು ನಮಗೆ ಮತ್ತಷ್ಟು ಅನುಕೂಲವಾದಂತಾಗಿದೆ. ಈಗಾಗಲೇ ನಮಗೆ ರಕ್ಷಣೆ ಕೊಡಿ ಎಂದು ಪೋಲಿಸರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಅನುಮತಿ ಕೊಡುವ ಅಗತ್ಯವಿಲ್ಲ. ನಾವು ಬುದ್ದನ ಅನುಯಾಯಿಗಳು ಯಾರಿಗೂ ತೊಂದರೆ ಕೊಡುವುದಿಲ್ಲ. ಸಂಘರ್ಷಕ್ಕೂ ಸಿದ್ದ ಎಂದಿರುವವರಿಂದ ತೊಂದರೆ ಕೊಡಬಹುದು ಎಂದು ಹೇಳಿದರು.

ನಾವು ನಮ್ಮ ನಂಬಿಕೆ ಆಚರಣೆ ಮಾಡುತ್ತಿದ್ದೇವೆ. ನಾವು ನಮ್ಮ ಪೂರ್ವಜರಿಗೆ ಪಕ್ಷ ಹಬ್ಬ ಮಾಡುತ್ತಿದ್ದೇವೆ. ನಾವು ಚಾಮುಂಡೇಶ್ವರಿ ವಿರೋಧಿಗಳಲ್ಲ. ಶಾಂತಿಯುತವಾಗಿ ಯಾರಿಗೂ ಭಂಗವಾಗದಂತೆ ಅಕ್ಟೋಬರ್ 13 ರಂದು ಮಹಿಷನಿಗೆ ಪುಷ್ಪಾರ್ಚನೆ ಮಾಡಿ ಬರುತ್ತೇವೆ. ಇನ್ನೇನು ಮಾಡುತ್ತಿಲ್ಲ ಅದಕ್ಕೆ ನಮಗೆ ರಕ್ಷಣೆ ಕೊಡಬೇಕು ಎಂದು ಪೋಲಿಸರಿಗೆ ಮನವಿ ಮಾಡಿದ್ದೇವೆ. ಶಾಂತಿ ಕದಡುವ ಕೆಲಸ ಮಾಡುತ್ತಿರುವವರು ಅವರು,  ನಾವಲ್ಲ. ಈ ಮಹಿಷಾ ದಸರಾ ಮುಂದಿಟ್ಟುಕೊಂಡು ಸಂಸದ ಪ್ರತಾಪ್ ಸಿಂಹ ರಾಜಕೀಯ ಮಾಡುತ್ತಿದ್ದಾರೆ. ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನ ಮೊದಲು ಬಂಧಿಸಬೇಕು. ನಾವು ಅ.13 ರಂದು ಮಹಿಷಾ ದಸರಾ ಆಚರಣೆ ಮಾಡೇ ತೀರುತ್ತೇವೆ ಎಂದು ಪುರುಷೋತ್ತಮ್ ತಿಳಿಸಿದರು.

Key words: Mahisha Dasara –controversy – former mayor -Purushottam