ಮೈಸೂರು ದಸರಾ: ಅ.16ರಿಂದ ಚಲನಚಿತ್ರೋತ್ಸವ.

ಮೈಸೂರು,ಅಕ್ಟೋಬರ್,9,2023(www.justkannada.i):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಈ ಬಾರಿಯೂ ದಸರಾ ಚಲನಚಿತ್ರೋತ್ಸವ ಆಯೋಜನೆ ಮಾಡಲಾಗಿದೆ.

ಈ ಸಂಬಂಧ ನಗರದ ಖಾಸಗಿ ಹೋಟೆಲ್ ನಲ್ಲಿ ಚಲನಚಿತ್ರೋತ್ಸವ ಉಪ ಸಮಿತಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತು. ಈ ಕುರಿತು ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ ಸವಿತಾ , ಪ್ರತಿ ವರ್ಷದಂತೆ ಈ ಬಾರಿಯು ದಸರಾ ವೇಳೆ ಚಲನ ಚಿತ್ರೋತ್ಸವ ಇರಲಿದ್ದು, ಅಕ್ಟೊಬರ್ 16ರಿಂದ 22ರವರೆಗೆ ಚಲನ ಚಿತ್ರೋತ್ಸವ ನಡೆಯಲಿದೆ.  ಚಲನ ಚಿತ್ರೋತ್ಸವ ಕಾರ್ಯಕ್ರಮವನ್ನ ಉಸ್ತುವಾರಿ ಸಚಿವ ಹೆಚ್. ಸಿ ಮಹದೇವಪ್ಪ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಸರಾ ಉದ್ಘಾಟಕರಾದ ಹಂಸಲೇಖ, ನಟ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಭಾಗಿಯಾಗಲಿದ್ದಾರೆ. ಮೈಸೂರಿನ ಕಲಾ ಮಂದಿರದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ  ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಜನರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಣೆ ಮಾಡುವುದು ಕಡಿಮೆಯಾಗಿದೆ. ಹಾಗಾಗಿ ಜನರಿಗೆ ಮನರಂಜನೆ ನೀಡುವ ಸಲುವಾಗಿ ಚಲನ ಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಅನೇಕ ಕಿರು ಚಿತ್ರಗಳ ಪ್ರದರ್ಶನ  ಕೂಡ ಇರುತ್ತದೆ. ಚಲನ ಚಿತ್ರೋತ್ಸವಕ್ಕೆ ಆನ್ ಲೈನ್ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ 500 ಮತ್ತು ವಿದ್ಯಾರ್ಥಿಗಳಿಗೆ 300ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Key words: Mysore Dasara- Film festival –oct 16.