10 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ- ಸಚಿವ ಅಶ್ವತ್ ನಾರಾಯಣ್.

ಬೆಂಗಳೂರು,ಆಗಸ್ಟ್,26,2022(www.justkannada.in):  ರಾಜ್ಯದ ಯುವಜನರಿಗೆ ಸೂಕ್ತ ಉದ್ಯೋಗಾವಕಾಶಗಳು ಸಿಗುವಂತಾಗಬೇಕು ಎನ್ನುವ ಗುರಿಯೊಂದಿಗೆ ಈವರಗೆ 10 ಲಕ್ಷಕ್ಕೂ ಹೆಚ್ಚು ಯುವಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಅವರು ಹೇಳಿದ್ದಾರೆ.

ಇಲ್ಲಿನ ಸರಕಾರಿ ರಾಮನಾರಾಯಣ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಏರ್ಪಡಿಸಿದ್ದ ಉದ್ಯೋಗ ಮೇಳ ‘ಪ್ರಗತಿ ಪಥ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಇದರಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಆನ್ ಲೈನ್ ನೋಂದಣಿ ಮಾಡಿಕೊಂಡಿದ್ದು ಪಾಲ್ಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಯುವಜನರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲು ಸರಕಾರ ಸಿದ್ಧವಾಗಿದೆ. ಹೀಗಾಗಿ ಪದವಿ ಕೋರ್ಸುಗಳಲ್ಲಿ ಡಿಜಿಟಲ್, ಹಣಕಾಸು ಮತ್ತು ತಂತ್ರಜ್ಞಾನ ಸಾಕ್ಷರತೆಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ಸೂಕ್ತ ವಿದ್ಯಾಭ್ಯಾಸ, ತಕ್ಕ ಅರ್ಹತೆ ಮತ್ತು ಆಧುನಿಕ ಕೌಶಲ್ಯಗಳು ಇದ್ದರೆ ಅವಕಾಶಗಳಿಗೆ ಬರವಿಲ್ಲ. ವಾಸ್ತವವಾಗಿ ಉದ್ಯಮರಂಗವು ಬಯಸುತ್ತಿರುವಷ್ಟು ನುರಿತ ಮಾನವ ಸಂಪನ್ಮೂಲವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ನುಡಿದರು.

ನೆಪಮಾತ್ರದ ಪದವಿಗಳನ್ನು ಬಿಟ್ಟು ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ಉನ್ನತ ಶಿಕ್ಷಣ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ. ಈಗಾಗಲೇ ವಿನೂತನ ಮತ್ತು ವೈಜ್ಞಾನಿಕ ಮೌಲ್ಯಮಾಪನ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ಮತ್ತು ಕರ್ನಾಟಕ ಇಂದು ಜಗತ್ತಿನಲ್ಲಿ ಮುಂಚೂಣಿಯಲ್ಲಿವೆ. ಇದಕ್ಕೆ ಇಲ್ಲಿರುವ ರಚನಾತ್ಮಕ ವಾತಾವರಣವೇ ಕಾರಣ ಎಂದು ಸಚಿವ ಅಶ್ವಥ್ ನಾರಾಯಣ್ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಮಾತನಾಡಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಎಲ್. ಕೃಷ್ಣಮೂರ್ತಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಎಸ್. ಶೈಲಜಾ, ರೋಟರಿ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಸಂಜಯ್ ಉದಾನಿ ಇದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಚಂದ್ರಶೇಖರ್ ಸ್ವಾಗತಿಸಿದರು.

Key words: Skill -training – 10 lakh- youth- Minister -Ashwath Narayan