ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ: ಭಕ್ತರಿಗಾಗಿ 4 ಲಕ್ಷ ಲಡ್ಡು ತಯಾರಿ.

ಚಾಮರಾಜನಗರ,ಮಾರ್ಚ್,7,2024(www.justkannada.in): ಇಂದಿನಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಮಹೋತ್ಸವ ಆರಂಭವಾಗಿದ್ದು, ಬೆಟ್ಟಕ್ಕೆ ಆಗಮಿಸುವ ಭಕ್ತರಿಗಾಗಿ ಬರೋಬ್ಬರಿ 4 ಲಕ್ಷ ಲಡ್ಡು ತಯಾರಿಸಲಾಗುತ್ತಿದೆ.

ಮಲೇ ಮಹದೇಶ್ವರ ಬೆಟ್ಟಕ್ಕೆ ಈಗಾಗಲೇ ಕನಕಪುರ, ಬೆಂಗಳೂರು, ರಾಮನಗರ, ಚನ್ನಪಟ್ಟಣ ಕಡೆಯಿಂದ ಕಾವೇರಿ ನದಿ ದಾಟಿ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಿದ್ದಾರೆ.  ಚಾಮರಾಜನಗರ, ಮಂಡ್ಯ, ಮೈಸೂರು ಭಾಗದಿಂದಲೂ ಭಕ್ತಸಾಗರ ಹರಿದು ಬರುತ್ತಿದ್ದು, ಶಕ್ತಿಯೋಜನೆಯ ಫ್ರೀ ಬಸ್ ಎಫೆಕ್ಟ್ ನಿಂದಾಗಿ ಈ‌ ಬಾರಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ.

ತಿರುಪತಿಯಂತೇ ಮಲೆ ಮಹದೇಶ್ವರನ ಲಾಡು ಪ್ರಸಾದಕ್ಕೂ ಬಹು ಬೇಡಿಕೆ  ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರವು ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಲಡ್ಡು ತಯಾರಿ ಮಾಡಿದೆ. 5 ಲಕ್ಷಕ್ಕೂ ಹೆಚ್ಚು ಲಡ್ಡು ಪ್ರಸಾದ ಮಾರಾಟವಾಗುವ ಸಾಧ್ಯತೆ ಇದೆ.

ಬರುವ ಭಕ್ತಾಧಿಗಳಿಗೆ ಮಡಕೆ ಮಾತೃ ಕುಟೀರ..

ಬೇಸಿಗೆಯ ಸುಡು ಬಿಸಿಲು, ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆ ಪ್ರಾಧಿಕಾರದ ವತಿಯಿಂದ ಅಲ್ಲಲ್ಲ ಮಡಕೆ ಅಳವಡಿಕೆ ಮಾಡಲಾಗಿದೆ.  ಭಕ್ತರಿಗಾಗಿ ಈ ಬಾರಿ ಕುಡಿಯುವ ನೀರಿನ ಟ್ಯಾಂಕ್ ಜೊತೆಗೆ ಮಡಕೆ ನೀರನ ವ್ಯವಸ್ಥೆ ಮಾಡಲಾಗಿದೆ. ಮಲೇ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ತಾಯಿ ಮಕ್ಕಳು ಬರುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ತೆಂಗಿನ ಗರಿಗಳನ್ನು ಬಳಸಿಕೊಂಡು ಹಾಲುಣಿಸುವ ಕೇಂದ್ರ ಮಾತೃ ಕುಠೀರ ಸ್ಥಾಪನೆ ಮಾಡಲಾಗಿದೆ.

ನಿರಂತರ ದಾಸೋಹದ ವ್ಯವಸ್ಥೆ

ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ತಾಳುಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದವರೆಗೆ ಟ್ಯಾಂಕ್ ಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು 10 ಕಡೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶ್ರೀ ಕ್ಷೇತ್ರದ ಎರಡು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಜನರಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಹಾಗೆಯೇ ದಾಸೋಹ ಭವನದಲ್ಲಿ ವಿಶೇಷ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ಒಂದು ಬಾರಿಗೆ 2 ಸಾವಿರಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕಾರ ಮಾಡಬಹುದಾಗಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಹಳೆ ದಾಸೋಹದ ಮುಂಭಾಗ ನಿರಂತರ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೆಎಸ್ ಆರ್ಟಿಸಿ ವತಿಯಿಂದ 500 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆಟ್ಟ ನಿಂತರೆ ದುರಸ್ತಿ ಪಡಿಸಲು 15 ಜನ ತಾಂತ್ರಿಕ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಗಿದ್ದು, ತಾಳುಬೆಟ್ಟದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚು ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ತಾಳುಬೆಟ್ಟ ಹಾಗೂ ಶಂಕಮ್ಮನ ನಿಲಯ ಸಮೀಪ 100 ಮೊಬೈಲ್ ಶೌಚಾಲಯವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದೆ. ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದೆ.

ಶಿವರಾತ್ರಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದಿನಿಂದ ಮಾರ್ಚ್ 12ರ ಬೆಳಗಿನ ಜಾವ 6 ಗಂಟೆಯವರೆಗೆ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಲು ದ್ವಿಚಕ್ರ ವಾಹನ ಸವಾರರಿಗೆರಿಗೆ ನಿರ್ಬಂಧ ವಿಧಿಸಲಾಗಿದೆ.  ಹಾಗೆಯೇ ಕೌದಳ್ಳಿ ಗ್ರಾಮದ ಖಾಸಗಿ ಲೇಔಟ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ. ಪಾರ್ಕಿಂಗ್ ನಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಲು 10 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಶಿವರಾತ್ರಿ ಜಾತ್ರಾ‌ ಮಹೋತ್ಸವದ ದಿನದ ವಿಶೇಷತೆ:

ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಾರ್ಚ್ 7ರಿಂದ ಪ್ರಾರಂಭವಾಗಿದ್ದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.  ಮಾ.8 ರಂದು ಮಹಾಶಿವರಾತ್ರಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಎಣ್ಣೆ ಮಜ್ಜನ ಸೇವೆ ವಿವಿಧ ಉತ್ಸವಗಳು, 9 ರಂದು ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಉತ್ಸವಗಳು, 10 ರಂದು ಬೆಳಗ್ಗೆ ಮಹಾರಥೋತ್ಸವ ಜರುಗಳಿದ್ದು ಅದೇ ದಿನ ರಾತ್ರಿ ಅಭಿಷೇಕದ ಪೂಜೆ ಮುಗಿದ ನಂತರ ಕೋಂಡೋತ್ಸವ ನಡೆಯಲಿದೆ.

Key words: Maha Shivratri -Jatramahotsava – Male Mahadeshwar hill- 4 lakh- laddus