ಕೃಷ್ಣೆ ಆರ್ಭಟ ಮುಳುಗಡೆ ಸಂಕಟ: ಬೆಳಗಾವಿ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಿಗೆ ಪ್ರವಾಹ ಭೀತಿ

ಬೆಂಗಳೂರು:ಆ-4: ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಭರ್ಜರಿ ಮಳೆಯಾಗುತ್ತಿದ್ದರೆ, ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆಗೆ ರಾಜ್ಯದ ಗಡಿ ಜಿಲ್ಲೆಗಳು ತತ್ತರಿಸಿವೆ. ಮಹಾ ಮಳೆಗೆ ಬೆಳಗಾವಿ ಜಿಲ್ಲೆಯ ಜನತೆ ಅಕ್ಷರಶಃ ನಲುಗಿದ್ದಾರೆ. ಸದ್ಯ ಹಲವು ಗ್ರಾಮಗಳಲ್ಲಿ ಬೋಟ್​ನಲ್ಲಿ ಸಂಚರಿಸುವಂಥ ಸ್ಥಿತಿಯಿದ್ದು, 25 ಬೋಟ್​ಗಳಿಂದ ರಕ್ಷಣಾ ಕಾರ್ಯ ಸಾಗಿದೆ. ನಾಲ್ಕು ತಾಲೂಕುಗಳ 26 ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದ್ದು, 62 ಕುಟುಂಬಗಳ 150 ಜನರನ್ನು ಸ್ಥಳಾಂತರಿಸಲಾಗಿದೆ.

ಬಾಗಲಕೋಟೆಯಲ್ಲಿ ಕೃಷ್ಣಾ ತೀರದ ಜನತೆ ಆತಂಕ ಎದುರಿಸುತ್ತಿದ್ದು, ಮುತ್ತೂರ ಗ್ರಾಮದ 13 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದರೆ, 4 ಗ್ರಾಮಗಳು ನಡುಗಡ್ಡೆಯಾಗಿವೆ. ಇನ್ನೂ 20 ಗ್ರಾಮಗಳು ಮುಳುಗುವ ಹಂತದಲ್ಲಿವೆ. ಮಳೆ ಹೆಚ್ಚಾದರೆ ಇನ್ನಷ್ಟು ಅವಘಡಗಳು ಎದುರಾಗುವ ಸಾಧ್ಯತೆಗಳಿವೆ.

20 ಬೋಟ್ ಕೋರಿಕೆ: ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ 2.05 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾದ್ದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕಿನ ಕೆಲ ಗ್ರಾಮಗಳು ನೆರೆ ಹಾವಳಿ ಎದುರಿಸುತ್ತಿವೆ. ನೀರಿನ ಹೊರಹರಿವು ಹೆಚ್ಚಳ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜನ-ಜಾನುವಾರು ತೆರವು ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ ತೊಡಗಿದೆ. ನದಿಯಲ್ಲಿ 4 ಅಡಿ ನೀರು ಏರಿದೆ. ರಕ್ಷಣಾ ಕಾರ್ಯಾಚರಣೆಗೆ ಮರಾಠ ಲಘು ಪದಾತಿದಳದಿಂದ 10 ಹಾಗೂ ಎನ್​ಡಿಆರ್​ಫ್ನಿಂದ 10 ಹೆಚ್ಚುವರಿ ಬೋಟ್​ಗಳನ್ನು ಪೂರೈಸುವಂತೆ ಜಿಲ್ಲಾಡಳಿತ ಕೋರಿದೆ. ಯಡೂರವಾಡಿ, ಬಲವಾಡ ಹಾಗೂ ಇಂಗಳಿ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸದ್ಯಕ್ಕೆ 25 ಬೋಟ್​ಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

26 ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ: ಚಿಕ್ಕೋಡಿ ತಾಲೂಕಿನ 8, ರಾಯಬಾಗ-2, ಅಥಣಿ-5, ಕಾಗವಾಡ-1, ಖಾನಾಪುರ-3, ಗೋಕಾಕ-3, ಮೂಡಲಗಿ ತಾಲೂಕಿನ 4 ಸೇರಿ ಒಟ್ಟು 26 ಬ್ರಿಡ್ಜ್ ಕಂ ಬ್ಯಾರೇಜ್​ಗಳು ಮುಳುಗಡೆ ಆಗಿವೆ. ಅಥಣಿ ತಾಲೂಕೊಂದರಲ್ಲೇ 62 ಕುಟುಂಬಗಳ 150 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಗತ್ಯ ಬಿದ್ದರೆ ಸೇನೆ ಹಾಗೂ ಹೆಲಿಕಾಪ್ಟರ್ ಬಳಸಲಾಗುವುದು. ಶನಿವಾರ ಸಂಜೆ ಎನ್​ಡಿಆರ್​ಎಫ್ ತಂಡ ಚಿಕ್ಕೋಡಿಗೆ ಆಗಮಿಸಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಒಬ್ಬರ ಸಾವು, ಮತ್ತೊಬ್ಬ ನೀರುಪಾಲು

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರಾ(ಕೆ) ವಾಡಿಯ ಮನೆಯೊಂದರ ಗೋಡೆ ಕುಸಿದು ವೆಂಕಟ ವಗ್ಗೆ(60) ಎಂಬುವರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಶಿವಾನಂದ ಶಂಕರ ನಾಯಕ (25) ಎಂಬುವರು ಶನಿವಾರ ಬಳ್ಳಾರಿ ನಾಲಾ ನೋಡಲು ತೆರಳಿದ್ದಾಗ ಕಾಲು ಜಾರಿ ನೀರು ಪಾಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ನದಿಗೆ ಇಳಿಯದಂತೆ ಡಂಗುರ

ನಾರಾಯಣಪುರ ಜಲಾಶಯದಿಂದ ಶನಿವಾರ ಬೆಳಗ್ಗೆ ಕೃಷ್ಣಾ ನದಿಗೆ 2.58 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದ್ದು, ರಾಯಚೂರು ಜಿಲ್ಲೆಯ ಕೃಷ್ಣೆಯ ನದಿದಂಡೆ ಗ್ರಾಮಗಳ ಅಂದಾಜು 500 ಹೆಕ್ಟೇರ್ ಹೊಲಗಳಿಗೆ ನೀರು ನುಗ್ಗಿದೆ. ನಾಟಿ ಮಾಡಿದ ಭತ್ತ ಕೊಚ್ಚಿ ಹೋಗಿದೆ. ದೇವದುರ್ಗ ತಾಲೂಕಿನ ಹಳ್ಳಿಗಳಲ್ಲಿ ನದಿತೀರಗಳಿಗೆ ತೆರಳದಂತೆ ಪೊಲೀಸರು ಡಂಗುರ ಸಾರಿಸಿದ್ದಾರೆ.

ಒಂದೇ ದಿನದಲ್ಲಿ 1 ಮೀ. ಭರ್ತಿ

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಸೂಪಾ ಅಣೆಕಟ್ಟೆ ಒಂದೇ ದಿನ ಸುಮಾರು 1 ಮೀಟರ್ ಭರ್ತಿಯಾಗಿದೆ. ಜೊಯಿಡಾದ ಚಾಂದೆವಾಡಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಯಲ್ಲಾಪುರ-ಶಿರಸಿ ರಸ್ತೆಯ ಬೇಡ್ತಿ ಘಟ್ಟ ಪ್ರದೇಶದಲ್ಲಿ ಬೃಹತ್ ಮರ ಉರುಳಿದ್ದು, 4 ಗಂಟೆಗೂ ಅಧಿಕ ಕಾಲ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು. ಸಿದ್ದಾಪುರ ತಾಲೂಕಿನ ಅವರಗುಪ್ಪದ ಪುರಾತನ ಈಶ್ವರ ದೇವಸ್ಥಾನದ ಗೋಡೆ ಕುಸಿದಿದೆ. ಅಬ್ಬರದ ಅಲೆಗಳಿಗೆ ಕಾರವಾರದ ದೇವಬಾಗ ಕಡಲ ತೀರದ ತಡೆಗೋಡೆ ಕೊಚ್ಚಿ ಹೋಗಿದೆ. ಚಿತ್ತಾಕುಲಾ, ಮಾಜಾಳಿ ಗ್ರಾಪಂಗಳ ವ್ಯಾಪ್ತಿಯ ಐದಾರು ಗ್ರಾಮಗಳ 5 ಕಿಮೀ ತೀರ ಅಪಾಯಕ್ಕೆ ಒಳಗಾಗಿದ್ದು, ನೂರಾರು ಮನೆಗಳಿಗೆ ಸಮುದ್ರದ ನೀರು ನುಗ್ಗುವ ಆತಂಕ ಎದುರಾಗಿದೆ.

ಮಲೆನಾಡಲ್ಲಿ ಭರ್ಜರಿ ಮಳೆ: ಕೊಡಗಿನ ಹಲವೆಡೆ ಪ್ರವಾಹ ಪರಿಸ್ಥಿತಿ ಇದ್ದು, ಲಕ್ಷ್ಮಣತೀರ್ಥ ನದಿ ಹಿನ್ನೀರಿನಿಂದ ಬಲ್ಯಮಂಡೂರು ಕೊಲ್ಲಿ ತೋಡುವಿನ ಭತ್ತದ ಗದ್ದೆಗಳು ಮುಳುಗಡೆಯಾಗಿವೆ. ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಮಳೆಗೆ ಬರೆ ಕುಸಿದಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ ಸುರಿಯುತ್ತಿದ್ದು, 24 ತಾಸಿನಲ್ಲಿ 417.87 ಮಿಮೀ ಮಳೆಯಾಗಿದೆ. ಹೊಸನಗರದಲ್ಲಿ ಅತ್ಯಧಿಕ 126.80 ಮಿಮೀ ಮಳೆ ಬಿದ್ದಿದೆ.

ಉಕ್ಕಿ ಹರಿವ ಕೃಷ್ಣಾ ನದಿಗೆ ಹಾರಿದ ವ್ಯಕ್ತಿ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಸೇತುವೆ ಮೇಲಿಂದ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಗೆ ಶುಕ್ರವಾರ ಹಾರಿದ್ದು ತಡವಾಗಿ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ನಿವಾಸಿ ಶರಣಪ್ಪ, ದೇವದುರ್ಗ ಸಮೀಪದ ನವಿಗುಡ್ಡದಲ್ಲಿ ದೇವರ ದರ್ಶನಕ್ಕೆ ಕುಟುಂಬ ಸಮೇತ ಆಗಮಿಸಿದ್ದ. ಬಳಿಕ ತಿಂತಿಣಿ ಸೇತುವೆ ಮೇಲಿನಿಂದ ಸುಮಾರು 80 ಅಡಿಗಳಷ್ಟು ಆಳದ ನದಿಗೆ ಹಾರಿದ್ದಾನೆ. ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ 2 ಗಂಟೆ ಈಜಿ ದಡ ಸೇರಿದ್ದು, ಮೌನೇಶ್ವರನೇ ನನ್ನನ್ನು ಕರೆದ ಎಂದಿದ್ದಾನೆ.

ಬೀದರ್ ಜಿಲ್ಲಾದ್ಯಂತ ಶುಕ್ರವಾರ ರಾತ್ರಿ ಶುರುವಾದ ಮಳೆ ಶನಿವಾರ ಮಧ್ಯಾಹ್ನ 1ರವರೆಗೆ ನಿರಂತರ ಬಿದ್ದಿದೆ. ಮಳೆಗಾಲ ಆರಂಭವಾದ 2 ತಿಂಗಳ ಬಳಿಕ ಜಿಲ್ಲೆಯಲ್ಲಿ ಆದ ಮೊದಲ ಉತ್ತಮ ಮಳೆ ಇದಾಗಿದೆ. ಮಧ್ಯಾಹ್ನ ಬಳಿಕವೂ ಜಡಿ ಮಳೆಯಾದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ರೈತರು ಖುಷಿಯಾಗಿದ್ದಾರೆ.

ನಾಲ್ಕು ಗ್ರಾಮಗಳ ಮುಳುಗಡೆ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕೃಷ್ಣಾ ತೀರದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಪ್ರವಾಹ ನಿಯಂತ್ರಣಕ್ಕಾಗಿ ಆಲಮಟ್ಟಿ ಜಲಾಶಯದಲ್ಲಿ 518.50 ಮೀ. ವರೆಗೆ ನೀರು ಕಾಯ್ದುಕೊಳ್ಳಿ ಎಂದು ಮಹಾರಾಷ್ಟ್ರದ ಸಾಂಗಲಿ ಜಿಲ್ಲಾಧಿಕಾರಿ ಕರ್ನಾಟಕ ಸರ್ಕಾರಕ್ಕೆ ತಿಳಿಸಿದ್ದಾರೆ. ಜಮಖಂಡಿ ತಾಲೂಕಿನ 4 ಗ್ರಾಮಗಳು ಸಂಪೂರ್ಣ ನಡುಗಡ್ಡೆ ಆಗಿವೆ. 20ಕ್ಕೂ ಅಧಿಕ ಗ್ರಾಮಗಳು ಭಾಗಶಃ ಮುಳುಗಡೆ ಆಗುವ ಸಾಧ್ಯತೆ ಇದೆ. ನದಿ ತೀರದ ಬೆಳೆಗಳು ಜಲಾವೃತವಾಗಲಿವೆ. ಮುತ್ತೂರ ಗ್ರಾಮದ 13 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಆನಂದ ನ್ಯಾಮಗೌಡ, ಬೇರೆಡೆ ತೆರಳುವಂತೆ ಗ್ರಾಮಸ್ಥರನ್ನು ಕೋರಿದ್ದಾರೆ.

ಕೆಆರ್​ಎಸ್​ನಲ್ಲಿ ಬಿರುಕು

ನವದೆಹಲಿ: ಅಕ್ರಮ ಗಣಿಗಾರಿಕೆ, ನಿರಂತರ ಕಲ್ಲು ಕ್ವಾರಿ ಚಟುವಟಿಕೆಗಳಿಂದಾಗಿ ಕೃಷ್ಣರಾಜಸಾಗರ ಜಲಾಶಯದಲ್ಲಿ ಬಿರುಕು ಬಿಟ್ಟಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಆದರೆ ಇದನ್ನು ತಪ್ಪಿಸಲು ಗಂಭೀರ ಪ್ರಯತ್ನಗಳು ನಡೆದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಸಂಸತ್ತಿನ ಗಮನ ಸೆಳೆದಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಜಲಾಶಯದಿಂದ 20 ಕಿ.ಮೀ. ಸುತ್ತಳತೆಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದ್ದರೂ ಸ್ಥಳೀಯ ರಾಜಕಾರಣಿಗಳು, ಕ್ರಿಮಿನಲ್​ಗಳು ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದಾಗಿ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದರು.

ತ.ನಾಡಿಗೆ 6.5 ಟಿಎಂಸಿ ನೀರು

ಮಂಡ್ಯ: ಕಾವೇರಿ ನೀರು ನಿಯಂತ್ರಣ ಮಂಡಳಿ ಪ್ರಕಾರ ಜುಲೈ ತಿಂಗಳಿನ ಬಾಬ್ತು 12 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದ್ದು, ಈ ತನಕ 6.5 ಟಿಎಂಸಿ ನೀರು ಹರಿದಿದೆ. ಕಬಿನಿ ನೀರು ಸೇರಿ ತಮಿಳುನಾಡಿಗೆ ಈ ತನಕ 10.5 ಟಿಎಂಸಿ ನೀರು ಸೇರಿದ್ದು, ಆ.5ಕ್ಕೆ ಅವರಿಗೆ ಕೊಡಬೇಕಾದ ಲೆಕ್ಕ ಚುಕ್ತಾ ಆಗಲಿದೆ. ಶನಿವಾರ ಅಣೆಕಟ್ಟೆಯಲ್ಲಿದ್ದ 12.392 ಟಿಎಂಸಿ ಪೈಕಿ 4.450 ಟಿಎಂಸಿ ನೀರು ಅನುಪಯುಕ್ತವಾಗಿದ್ದು, 7.942 ಟಿಎಂಸಿ ನೀರು ಬಳಕೆಗೆ ಸಿಗಲಿದೆ. ಆಗಸ್ಟ್ ತಿಂಗಳ ಬಾಬ್ತಿನ ನೀರು ಬಿಡುಗಡೆ ಸಂಬಂಧ ನಿಯಂತ್ರಣ ಮಂಡಳಿ ಆ.8ರಂದು ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದೆ.

ಚಾರ್ವಡಿ ಘಾಟಿಯಲ್ಲಿ ಗುಡ್ಡ ಕುಸಿತ

ಎರಡು ದಿನಗಳಿಂದ ಚಾರ್ವಡಿ ಘಾಟಿ ಅರಣ್ಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದ್ದು, ಚಾರ್ವಡಿ- ಕೊಟ್ಟಿಗೆಹಾರ ಮಧ್ಯೆ ಹಲವೆಡೆ ಗುಡ್ಡ ಕುಸಿದಿದ್ದು, 4 ಕಡೆ ಮರಗಳು ಧರೆಗೆ ಉರುಳಿವೆ. ಎರಡು ಕಡೆ ಹೆದ್ದಾರಿ ಸಮೀಪದ ತಡೆಗೋಡೆ ಕುಸಿದಿದೆ. ಚಾರ್ವಡಿ ಘಾಟಿಯ ಆಲಟ್ಟಿ ಪ್ರದೇಶದಲ್ಲಿ 3 ಬೃಹತ್ ಬಂಡೆಗಳು ರಸ್ತೆಗುರುಳಿದ್ದು, ತೆರವು ಕಾರ್ಯ ನಡೆದಿದೆ. ನಿರಂತರ ಮಳೆಯಿಂದ ಈ ವ್ಯಾಪ್ತಿಯ ಹೊಳೆ, ತೊರೆಗಳೆಲ್ಲ ತುಂಬಿ ಹರಿಯುತ್ತಿವೆ. ಇದರಿಂದ ಕರಾವಳಿಯ ಜೀವನದಿ ನೇತ್ರಾವತಿ ಹರಿವಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ.

ಉತ್ತರದಲ್ಲಿ ಕೊಚ್ಚಿಹೋದ ಬದುಕು

* ಹಲವೆಡೆ ಸಂಪರ್ಕ ಕಡಿದುಕೊಂಡ ಗ್ರಾಮಗಳು
* ಸಾವಿರಾರು ಎಕರೆ ಹೊಲ, ಗದ್ದೆ, ಮನೆಗಳು ಜಲಾವೃತ
* ಊರಿಗೆ ಬಂದ ಮೊಸಳೆ, ಹಾವು, ಆತಂಕದಲ್ಲಿ ಜನರು
* ಕಣ್ಮುಂದೆಯೇ ನೀರುಪಾಲಾಗುತ್ತಿವೆ ಜಾನುವಾರುಗಳು
ಬೆಳಗಾವಿ:

* ಚಿಕ್ಕೋಡಿ, ಅಥಣಿ, ರಾಯಭಾಗ ತಾಲೂಕುಗಳು ತತ್ತರ
* 26 ಬ್ರಿಜ್ ಕಂ ಬ್ಯಾರೇಜ್ ಮುಳುಗಡೆ, 150 ಮಂದಿ ಸ್ಥಳಾಂತರ

ಬಾಗಲಕೋಟೆ:

* ಮುಳುಗುವ ಭೀತಿಯಲ್ಲಿ 20 ಹಳ್ಳಿಗಳು, 5 ಸೇತುವೆ ಗಳು ಜಲಾವೃತ
* ಮುತ್ತೂರ ಗ್ರಾಮದ 13 ಕುಟುಂಬ ಸ್ಥಳಾಂತರ, ನದಿಗೆ ಇಳಿಯದಂತೆ ಡಂಗುರ

ರಾಯಚೂರು:

* 500 ಹೆಕ್ಟೇರ್ ಹೊಲ ಜಲಾವೃತ, ಕೊಚ್ಚಿ ಹೋದ ಬೆಳೆ
* ಸನ್ನದ್ಧ ಸ್ಥಿತಿಯಲ್ಲಿ ಎನ್​ಡಿಆರ್​ಎಫ್​ನ 30 ಜನರ ತಂಡ
ಕೃಪೆ:ವಿಜಯವಾಣಿ

ಕೃಷ್ಣೆ ಆರ್ಭಟ ಮುಳುಗಡೆ ಸಂಕಟ: ಬೆಳಗಾವಿ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಿಗೆ ಪ್ರವಾಹ ಭೀತಿ
krishna-river-heavy-rain-rain-water-flood-north-karnataka-rainfall