ಜೊಮ್ಯಾಟೋ ವಿವಾದದ ಬಳಿಕ ಗ್ರಾಹಕರಿಗೆ ಖಡಕ್ ಸಂದೇಶ ರವಾನಿಸಿದ ತಮಿಳುನಾಡಿನ ರೆಸ್ಟೋರೆಂಟ್

ಚೆನ್ನೈ:ಆ-3:(www.justkannada.in) ಹಿಂದೂವಲ್ಲದ ವ್ಯಕ್ತಿಯೊಬ್ಬ ಜೊಮ್ಯಾಟೋ ಮೂಲಕ ಆಹಾರ ವಿತರಣೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ಮಾಡಿದ ಟ್ವೀಟ್ ಈಗ ಭಾರಿ ವಿವಾದಕ್ಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

ಹಿಂದೂವಲ್ಲದ ವ್ಯಕ್ತಿಯು ಆಹಾರ ಡೆಲಿವರಿ ಮಾಡಿದರೆಂಬ ಕಾರಣಕ್ಕೆ, ಮಧ್ಯಪ್ರದೇಶದ ಜಬಲ್ಪುರದ ಗ್ರಾಹಕನೊಬ್ಬ ಆಹಾರವನ್ನೇ ನಿರಾಕರಿಸಿ ಸುದ್ದಿ ಮಾಡಿದ್ದು, ಆಹಾರಕ್ಕೆ ಧರ್ಮ ಇಲ್ಲ ಎಂದು ಜೊಮ್ಯಾಟೋ ಎಂಬ ಫುಡ್ ಡೆಲಿವರಿ ಆ್ಯಪ್ ಪ್ರತ್ಯುತ್ತರ ನೀಡಿದ್ದು ಕಳೆದೆರಡು ದಿನಗಳಿಂದ ಆನ್‌ಲೈನ್‌ನಲ್ಲಿ ಭಾರಿ ಸುದ್ದಿಮಾಡಿದೆ. ಇದರ ಬೆನ್ನಲ್ಲೇ ತಮಿಳುನಾಡಿನ ರೆಸ್ಟೋರೆಂಟ್ ಮಾಲೀಕರು ತಮ್ಮ ಗ್ರಾಹಕರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಪುದುಕ್ಕೊಟ್ಟೈನ ಐಂಗರನ್ ಕಾಫಿಯ ಮಾಲೀಕ ಅರುಣ್ ಮೊಜೈ, ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಧರ್ಮ ಎಂದು ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ. ಅಲ್ಲದೇ ಅವರು “ಧರ್ಮವನ್ನು ನೋಡುವ ಜನರಿಗೆ ನಾವು ಆಹಾರವನ್ನು ಒದಗಿಸುವುದಿಲ್ಲ” ಎಂದು ಹೋಟೆಲ್ ಮುಂದೆ ಬೋರ್ಡ್ ಕೂಡ ಹಾಕಿದರು. ಅವರ ಸಂದೇಶವು ಪುದುಕ್ಕೊಟ್ಟೈನ ಜನರ ಗಮನ ಸೆಳೆದಿದೆ.

ಅರುಣ್ ಮೊಜೈ ಪುತಿಯಥಲೈಮುರಾಯ್ ಟಿವಿಯೊಂದಿಗಿನ ಸಂವಾದದಲ್ಲಿ, “ನಾವು ಎಲ್ಲದರಲ್ಲೂ ಧರ್ಮವನ್ನು ನೋಡಲಾರಂಭಿಸಿದರೆ, ನಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಲು ಸಹ ಸಾಧ್ಯವಾಗುವುದಿಲ್ಲ, ನಾವು ಯಾವುದೇ ಉಡುಗೆ ಧರಿಸಲು ಸಾಧ್ಯವಿಲ್ಲ ಅಷ್ಟೇ ಏಕೇ ಪ್ರತಿಯೊಂದರಲ್ಲೂ ನಾವು ಧರ್ಮವನ್ನು ನೋಡಲಾರಂಭಿಸಿದರೆಸ್ನಾನ ಮಾಡಲು, ಹಲ್ಲು ಉಜ್ಜಲು ಹೀಗೆ ನಾವು ದಿನನಿತ್ಯದ ಚಟುವಟಿಕೆಗಳನ್ನು ಕೂಡ ಮಾಡಲು ಸಾಧ್ಯವಿಲ್ಲ. ಧರ್ಮವನ್ನು ನೊಡುತ್ತಾ ಹೋದರೆ ಮನುಷ್ಯರು ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅರುಣ್ ಅವರ ಈ ಹೇಳಿಕೆ, ಅಭಿಪ್ರಾಯಕ್ಕೆ ಹಲವು ಗ್ರಾಹಕರು ಬೆಂಬಲ ವ್ಯಕ್ತಪಡಿಸಿದ್ದು, ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಇದರ ಬೆನ್ನಲ್ಲೆ ಜೊಮ್ಯಾಟೋ ಕೂಡ ತನ್ನ ಹಿಂದುಯೇತರ ಆಹಾರ ಸರಬರಾಜುದಾರನನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಜಬಲ್ಪುರ ನಿವಾಸಿ ಅಮಿತ್ ಶುಕ್ಲಾಗೆ ಟ್ವೀಟ್ ಮಾಡಿ ತಿಳಿಸಿದೆ.

ಜೊಮ್ಯಾಟೋ ವಿವಾದದ ಬಳಿಕ ಗ್ರಾಹಕರಿಗೆ ಖಡಕ್ ಸಂದೇಶ ರವಾನಿಸಿದ ತಮಿಳುನಾಡಿನ ರೆಸ್ಟೋರೆಂಟ್
After Zomato, now this Tamil Nadu restaurant has a message for bigots