ಕೆಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಟ್ರೋಫಿ ಮೈಸೂರಿನಲ್ಲಿ ಅನಾವರಣ: ಎಲ್ಲಾ ಆಟಗಾರರಿಗೆ ಶುಭಕೋರಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ..

ಮೈಸೂರು,ಆ,23,2019(www.justkannada.in): `ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20′ ಕ್ರಿಕೆಟ್ ಟೂರ್ನಿಯ 8ನೇ ಆವೃತ್ತಿಯ ಟ್ರೋಫಿಯನ್ನು  ಇಂದು ಮೈಸೂರಿನಲ್ಲಿ ಅನಾವರಣ ಮಾಡಲಾಯಿತು.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದ ರಂಗಿನ ವೇದಿಕೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್  ಅವರು ಕೆಪಿಎಲ್-ಟಿ-20 ಕ್ರಿಕೆಟ್ ಟೂರ್ನಿಯ 8ನೇ ಅವೃತ್ತಿ ಟ್ರೋಫಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಟೂರ್ನಿಯಲ್ಲಿ ಭಾಗವಹಿಸಿರುವ ಎಲ್ಲ ಆಟಗಾರರಿಗೆ ಶುಭ ಕೋರುತ್ತೇನೆ ಎಂದು ಶುಭಹಾರೈಸಿದರು.

ಹಾಗೆಯೇ  ಜತೆಗೆ ತಮ್ಮ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕ್ರಿಕೆಟ್ ಪ್ರೀತಿಯನ್ನು ಹಂಚಿಕೊಂಡ ಪ್ರಮೋದಾ ದೇವಿ ಒಡೆಯರ್. ನನ್ನ ಪತಿಗೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಪ್ರೀತಿಯಿತ್ತು. ಅವರ ಹೆಸರಿನಲ್ಲಿ ಟೂರ್ನಿಯನ್ನು ನಡೆಸುತ್ತಿರುವುದು ನನಗೆ ಖುಷಿಕೊಟ್ಟ ಸಂಗತಿ. ಕ್ರಿಕೆಟ್ ಬಗ್ಗೆ ಇದ್ದ ಅತಿಯಾದ ಪ್ರೀತಿ ಮತ್ತು ಕಾಳಜಿಯೇ ಅವರು ಎರಡನೇ ಬಾರಿಗೆ ಕೆಎಸ್ಸಿಎ  ಅಧ್ಯಕ್ಷರಾಗಲು ಕಾರಣವಾಯಿತು. ಅತ್ಯಂತ ಹತ್ತಿರದಿಂದ ಈ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇನೆ. ಕೆಎಸ್ಸಿಎಯ ಕಾರ್ಯವೈಖರಿ ಖುಷಿ ಕೊಟ್ಟಿದೆ. ಕೆಎಸ್ಸಿಎಗಾಗಿ ನಾವು ಯಾವುದೇ ರೀತಿಯ ನೆರವು ನೀಡಲು ಸಿದ್ಧವಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ  ಮಾತನಾಡಿದ ಕೆಎಸ್ಸಿಎ ಕಾರ್ಯದರ್ಶಿ ಸುಧಾಕರ್ ರಾವ್, ಇದುವರೆಗೂ ಟೂರ್ನಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಬೆಂಗಳೂರಿನಲ್ಲಿ ಪಂದ್ಯಗಳನ್ನು ವೀಕ್ಷಿಸಲು ಬೃಹತ್ ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿದ್ದರು. ಅದೇ ರೀತಿ ಟಿವಿಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಮೈಸೂರಿನಲ್ಲೂ ನಾವು ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ನಿರೀಕ್ಷಿಸಿದ್ದೇವೆ. ಇಲ್ಲಿಯ ಜನ ಕ್ರಿಕೆಟನ್ನು ಅತಿಯಾಗಿ ಪ್ರೀತಿಸುತ್ತಾರೆ. ಆದ್ದರಿಂದ ನಾವು ಇಲ್ಲಿ ಪಂದ್ಯಗಳನ್ನು ಆರಂಭಿಸಲು ಉತ್ಸುಕರಾಗಿದ್ದೇವೆ ಎಂದರು.

ಶ್ರೀಕಂಠದತ್ತ ನರಸಿಂಹ ರಾಜ ಒಡೆಯರು 2013ರಲ್ಲಿ ನಿಧನರಾದ ನಂತರ ಅವರ ಗೌರವಾರ್ಥವಾಗಿ ಕೆಪಿಎಲ್ ಟೂರ್ನಿಮೆಂಟ್ ನಡೆಯುತ್ತಿದೆ.  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2007ರಿಂದ 2010ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು,

ಇದೇ ವೇಳೆ ಕಲಾವಿದೆ ಶಬರಿ ಗಾಣಿಗ 10 ನಿಮಿಷದಲ್ಲೇ  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಮೈಸೂರು ಅರಮನೆ ಹಾಗೂ ಕೆಪಿಎಲ್ ಲೋಗೋ ಚಿತ್ರ ಬಿಡಿಸಿ ಗಮನ ಸೆಳೆದರು. ಕೆಪಿಎಲ್ ರಾಯಭಾರಿ ರಾಗಿಣಿ ದ್ವಿವೇದಿ ಮತ್ತು ಮೈಸೂರು ವಾರಿಯರ್ಸ್ ತಂಡದ ನಾಯಕ ಅಮಿತ್ ವರ್ಮಾ, ಉಪ ನಾಯಕ ಜೆ.ಸುಚಿತ್ ನೃತ್ಯ ಮಾಡಿ ಆಕರ್ಷಿಸಿದರು. ಕೆಎಸ್ಸಿಇ ಮೈಸೂರು ವಲಯದ ಸಂಚಾಲಕ ಚಾಲಚಂದರ್, ಅಧ್ಯಕ್ಷ ಸುಧಾಕರ್ ರೈ ಇದ್ದರು.

Key words: KPL T-20- Cricket Tournament -Trophy –Mysore- Pramodadevi Wodeyar