ಕಾಡುಗೊಲ್ಲ ಸಮುದಾಯ ST ಗೆ ಸೇರಿಸುವಂತೆ ಒತ್ತಾಯಿಸಿದ್ದರೂ ಏಕೆ ಸ್ಪಂದನೆ ಇಲ್ಲ ಮೋದಿಯವರೇ..? ಸಿ.ಎಂ.ಸಿದ್ದರಾಮಯ್ಯ ಕಿಡಿ.

ಚಿತ್ರದುರ್ಗ ಏಪ್ರಿಲ್, 23,2024 (www.justkannada.in):  ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲಿಂದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಇಲ್ಲಿ ನಡೆದ ಪ್ರಜಾಧ್ವನಿ-2 ಯಾತ್ರೆಯಲ್ಲಿ ಬೃಹತ್ ಜನಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಕಾಡುಗೊಲ್ಲ ಸಮುದಾಯವನ್ನು ST ಪಟ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆಗೆ ನಾವು ಸಂಪೂರ್ಣವಾಗಿ ಸ್ಪಂದಿಸಿದ್ದೇವೆ. ಈ ಬಗ್ಗೆ ಕೇಂದ್ರಕ್ಕೂ ಶಿಫಾರಸ್ಸು ಮಾಡಿದ್ದಾಗಿದೆ. ಆದರೆ ಈವರೆಗೂ ಇದಕ್ಕೆ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ. ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ-ಪ್ರಿಯಾಂಕ ಗಾಂಧಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಆಗ್ರಹಕ್ಕೆ ಧ್ವನಿಗೂಡಿಸಿ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ತಮ್ಮ ಭಾಷಣದಲ್ಲೂ ಇದೇ ಮಾತನ್ನು ಪುನರುಚ್ಛರಿಸಿದರು.  ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿದರು.

ಹಾಗೆಯೇ ಪ್ರಧಾನಿ ಮೋದಿ ವಿರುದ್ದ ಗುಡುಗಿದ ಪ್ರಿಯಾಂಕ್ ಗಾಂಧಿ, ಮೋದಿ ದೇಶದ ಕೆಲ ಬಂಡವಾಳಶಾಹಿ ಜೊತೆ ಇದ್ದಾರೆ. ಬಂಡವಾಳ ಶಾಹಿಗಳ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ.  ಮೋದಿ ತಮ್ಮ ಗೆಳೆಯರಗಾಗಿ ಎಲ್ಲವನ್ನು ಕೊಡುತ್ತಿದ್ದಾರೆ. ದೇಶದ ಆಸ್ತಿ ತಮ್ಮ ಸ್ನೇಹಿತರಿಗೆ ಮಾರಾಟ ಮಾಡಿದ್ದಾರೆ . ಉದ್ಯೋಗಪತಿಗಳ ಸಾಲ ಮಾತ್ರ ಮನ್ನಾ ಮಾಡಲಾಗುತ್ತಿದೆ . ರೈತರು ಕಾರ್ಮಿಕರು ಸಾಲಮನ್ನಾ ಇಲ್ಲ ಎಂದು ಕಿಡಿಕಾರಿದರು.

Key words: Kadugolla, community ,ST, CM Siddaramaiah