5ನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ವಿರುದ್ದ ಭಾರತಕ್ಕೆ ಭರ್ಜರಿ ಜಯ: ಸರಣಿ ವಶ..

ಧರ್ಮಶಾಲಾ,ಮಾರ್ಚ್,9,2024(www.justkannada.in):  ಇಂಗ್ಲೆಂಡ್ ವಿರುದ್ದದ 5ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಭರ್ಜರಿ ಜಯ ಸಾಧಿಸಿದ್ದು ಈ ಮೂಲಕ 4-1 ಅಂತರದಿಂದ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ.

ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್  ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 64 ರನ್ ಗಳಿಂದ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಝಾಕ್ ಕ್ರಾಲಿ (79) ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ 218 ರನ್​ಗಳಿಗೆ ಆಲ್ ಔಟ್ ಆದರು. ಭಾರತದ ಪರ  ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿದರೆ, ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು.

ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 104 ರನ್ ಪೇರಿಸಿ ಜೈಸ್ವಾಲ್ (57) ಔಟಾದರು. ಇನ್ನು ರೋಹಿತ್ ಶರ್ಮಾ (103) ಹಾಗೂ ಶುಭ್​ಮನ್ ಗಿಲ್ (110) ಭರ್ಜರಿ ಶತಕ ಸಿಡಿಸಿದರು.

ಆ ಬಳಿಕ ಬಂದ ದೇವದತ್ ಪಡಿಕ್ಕಲ್ (65) ಹಾಗೂ ಸರ್ಫರಾಝ್ ಖಾನ್ (56) ಅರ್ಧಶತಕ ಬಾರಿಸಿ ಮಿಂಚಿದರು. ಪರಿಣಾಮ 2ನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಸ್ಕೋರ್ 450 ರನ್​ಗಳ ಗಡಿ ದಾಟಿತು. ಮೊದಲ ಇನಿಂಗ್ಸ್ ​ನಲ್ಲಿ ಭಾರತ  477 ರನ್ ಕಲೆಹಾಕಿ 259 ರನ್​ ಗಳ ಮುನ್ನಡೆ ಪಡೆಯಿತು.

259 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್ ಆಘಾತ ನೀಡಿದರು. ಪರಿಣಾಮ 103 ರನ್​ ಕಲೆಹಾಕುವಷ್ಟರಲ್ಲಿ ಇಂಗ್ಲೆಂಡ್ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ನಿಂತು ಆಡಿದ ಜೋ ರೂಟ್ (84) ಅರ್ಧಶತಕ ಬಾರಿಸಿ ಮಿಮಚಿದರು.

ಆದರೆ ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್ ತಂಡವು 195 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನಿಂಗ್ಸ್ ಹಾಗೂ 64 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

Key words: Big win – India-against -England – 5th Test match- series -win..