ಮೀಸಲಾತಿ ಚಾಕೊಲೆಟ್ ಕೊಟ್ಟು ವಿಶ್ವಾಸ ದ್ರೋಹ: ಒಕ್ಕಲಿಗರು ಹಾಗೂ ಲಿಂಗಾಯತರೇನು ಭಿಕ್ಷುಕರಾ..?- ಡಿ.ಕೆ ಶಿವಕುಮಾರ್ ಕಿಡಿ.

ಮೈಸೂರು,ಏಪ್ರಿಲ್,26,2023(www.justkannada.in): ಬಿಜೆಪಿ ಸರ್ಕಾರ ಮೀಸಲಾತಿ ಚಾಕೊಲೆಟ್ ಕೊಟ್ಟು ವಿಶ್ವಾಸ ದ್ರೋಹ ಮಾಡಿದೆ. ಚುನಾವಣೆ ಸಮಯದಲ್ಲಿ ಬಿಜೆಪಿ ಸರ್ಕಾರ ಜೇನುಗೂಡಿಗೆ ಕೈ ಹಾಕಿದೆ. ಮೀಸಲಾತಿ ಹಂಚಲು ಒಕ್ಕಲಿಗರು ಹಾಗೂ ಲಿಂಗಾಯತರು ಏನು ಭಿಕ್ಷುಕರಾ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್,  ಬಿಜೆಪಿ ಸರ್ಕಾರದ ನೂತನ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಬಿಜೆಪಿಯವರು ಬರೀ ಸುಳ್ಳು, ಮೋಸ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಇದನ್ನೆಲ್ಲಾ ನಂಬಲು ಕರ್ನಾಟಕದ ಜನರು ದಡ್ಡರಲ್ಲ. 4ಪರ್ಸೆಂಟ್ ಮೀಸಲಾತಿ ಕಿತ್ತುಕೊಂಡಿದ್ದೀರಲ್ಲ. ಅಲ್ಪಸಂಖ್ಯಾತರನ್ನು ಓಡಿಸಿ ಬಿಡುತ್ತೀರಾ..? ಎಂದು ವಾಗ್ದಾಳಿ ನಡೆಸಿದರು.

ಮೇ 13ರ ಚುನಾವಣಾ ಫಲಿತಾಂಶದ ದಿನ ಬಿಜೆಪಿ ಸರ್ಕಾರದ ಶವಯಾತ್ರೆ ನಡೆಯಲಿದೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಕೆಟ್ಟಿದೆ, ಡ್ಯಾಮ್ ಹೊಡೆದು ಹೋಗಿದೆ. ಕರ್ನಾಟಕ ದೇಶದ, ಭ್ರಷ್ಟಾಚಾರದ ರಾಜಧಾನಿ ಆಗಿದೆ. 40 ಪರ್ಸೆಂಟ್ ಬಿಜೆಪಿ ಸರ್ಕಾರಕ್ಕೆ 40  ಸೀಟ್ ಬರುತ್ತೆ. ನಾನು ರಕ್ತದಲ್ಲಿ ಬರೆದುಕೊಂಡುತ್ತೇನೆ. ಕಾಂಗ್ರೆಸ್ 150 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಸಮಯದಲ್ಲಿ ಪ್ರತಿದಿನ ನನ್ನ ವಿರುದ್ಧ ತಂತ್ರ, ಕುತಂತ್ರ ಮಾಡುತ್ತಿದ್ದಾರೆ. ನನ್ನ ಹಾಗೂ ಸಿದ್ದರಾಮಯ್ಯ ಕ್ಷೇತ್ರಕ್ಕೆ ಒಬ್ಬರಲ್ಲ, ಇಬ್ಬರಲ್ಲ, ಮೂವರನ್ನು ನೇಮಕ ಮಾಡಲಿ. ನಾವೇನು ಹೆದರುವುದಿಲ್ಲ, ಆ ತಂತ್ರ ಹಾಗೂ ಕುತಂತ್ರ ಭೇದಿಸಿ ಅಧಿಕಾರಕ್ಕೆ ಬರುತ್ತೇವೆ. ಈ ಸರ್ಕಾರದ ಆಯಸ್ಸು ಇನ್ನು 13 ದಿನ ಮಾತ್ರ ಇದೆ ಎಂದು ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

Key words: giving –reservation- chocolate- Okkaligas – Lingayats – DK Shivakumar