ಕನ್ನಡ ಕಲಿತವರಿಗೆ ‘ಕನ್ನಡ ಪಟ್ಟ’ ನೀಡುವ ಕೆಲಸ ಆಗಲಿ: ದಸರಾ ಉದ್ಘಾಟಿಸಿದ ಹಂಸಲೇಖ ಸಲಹೆ

ಮೈಸೂರು, ಅಕ್ಟೋಬರ್ 15, 2023(www.justkannada.in): ಪೂಜ್ಯ ಕನ್ನಡಿಗರಿಗೆ, ಪೂಜನೀಯ ಕನ್ನಡಕ್ಕೆ, ಕನ್ನಡದ ಗುಡಿಗೆ, ದೇವಾಲಯಕ್ಕೆ ಪ್ರೇಮಾಲಯಕ್ಕೆ ಸಾವಿರದ ಶರಣು…

ದಸರಾ ಉದ್ಘಾಟಕರಾದ ಹಂಸಲೇಖ ಅವರ ಉದ್ಘಾಟನಾ ಭಾಷಣದ ಮೊದಲ ಸಾಲುಗಳಿವು…

ಕನ್ನಡದ ಏಕೀಕರಣಕ್ಕೆ ಐದಶ ಅಂದರೆ ಐದು ದಶಕ ತುಂಬಿದೆ. ನನ್ನ ಕನ್ನಡ ಕಲಾ ಕಾಯಕಕ್ಕೂ ಐವತ್ತು ವರ್ಷ ತುಂಬಿದೆ. ದಸರಾ ಉದ್ಘಾಟನೆಗೆ ಸಿಕ್ಕ ಅವಕಾಶ ಬಹಳ ಬೆಲೆ ಬಾಳುವಂತಹದ್ದು, ಈ ಅವಕಾಶಕ್ಕಾಗಿ ನಾನು ಚಾಮುಂಡಿಬೆಟ್ಟದಂತೆ ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶ ನೀಡಿದ ಸರಕಾರಕ್ಕೆ ಧನ್ಯವಾದ ಸಲ್ಲಿಸಿದರು. ದಸರಾ ಸಂಭ್ರಮದ ಜೀವಂತ ಮಹಾಕಾವ್ಯ ಎಂದು ಬಣ್ಣಿಸಿದರು.

ಕನ್ನಡಕ್ಕೆ ಮಿತಿ ಇದೆ. ಕನ್ನಡದ ಭಾವಕ್ಕೆ ಎಲ್ಲಿ ಮಿತಿ ಇದೆ? ದೆಹಲಿಗೂ ಕನ್ನಡದ ಅಗತ್ಯವಿದೆ. ನಮ್ಮ ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಆಗಲೇ ನಮ್ಮ ರಾಷ್ಟ್ರದ ಜತೆಗೆ ಜಗತ್ತಿನಲ್ಲಿ ಕನ್ನಡ ಬೆಳೆಯಲು ಸಾಧ್ಯವಿದೆ. ಶಾಂತಿ ಮಂತ್ರ ಕನ್ನಡ… ಅಭಿವೃದ್ಧಿ ಕನ್ನಡ… ಇದು ಕನ್ನಡಿಗರ ಮಂತ್ರವಾಗಬೇಕು ಎಂದರು.

ಕನ್ನಡ ನಾಡಿನಲ್ಲಿರುವ ಎಲ್ಲರೂ ಕನ್ನಡಿಗರೇ. ಇದರಲ್ಲಿ ಕನ್ನಡ ಗೊತ್ತಿಲ್ಲ ಎನ್ನುವವರ, ಕನ್ನಡ ಅರ್ಥವಾಗಲ್ಲ ಎನ್ನುವವರ ಸಮೀಕ್ಷೆ ಆಗಬೇಕು. ಕನ್ನಡ ಕಲಿಬೇಕು ಎನ್ನುವವರಿಗೆ ಕನ್ನಡ ಕಲಿಸಬೇಕು. ಕನ್ನಡ ಕಲಿತವರಿಗೆ ‘ಕನ್ನಡ ಪಟ್ಟ’ ನೀಡಬೇಕು ಎಂದು ಕಾರ್ಪೋರೇಟ್ ಕನ್ನಡಿಗರ ತಂಡವೊಂದು ಸಲಹೆ ನೀಡಿದೆ. ಇದನ್ನು ಜಾರಿಗೆ ತರುವ ಕೆಲಸ ಮಾಡಬೇಕು ಎಂದರು.

ಕನ್ನಡಕ್ಕಾಗಿ ಕೆಲಸ ಮಾಡುವ ಕಾರ್ಪೋರೇಟ್ ಕನ್ನಡಿಗರ ತಂಡವೊಂದು ನನ್ನ ಜತೆಗಿದೆ. ಕನ್ನಡಕ್ಕಾಗಿ ಕೆಲಸ ಮಾಡಲು ಉತ್ಸಾಹಿಯಾಗಿರುವ ಈ ತಂಡದೊಂದಿಗೆ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.