ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ: ವರುಣನಿಗೆ ಅಭಿಮಾನಿಗಳ ಪ್ರಾರ್ಥನೆ !

ಲಂಡನ್, ಜೂನ್16, 2019 (www.justkannada.in): ಇಂದು ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ವಿಶ್ವಕಪ್ ನ ಹೈವೋಲ್ಟೇಜ್ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈ ಪಂದ್ಯಕ್ಕಾಗಿ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ವರುಣ ಇದಕ್ಕೆ ತೊಡಕುಂಟು ಮಾಡುವ ಸಾಧ್ಯತೆ ಇದೆ. ಅಂದಹಾಗೆ ವಿಶ್ವಕಪ್ ನಲ್ಲಿ ಭಾರತ ತಂಡ ಈವರೆಗೆ ಆರು ಪಂದ್ಯಗಳಲ್ಲಿ ಪಾಕಿಸ್ತಾನದೊಂದಿಗೆ ಮುಖಾಮುಖಿಯಾಗಿದ್ದು, ಒಂದು ಪಂದ್ಯವನ್ನೂ ಸೋತಿಲ್ಲ. ಹೀಗಾಗಿ ಈ ಬಾರಿಯೂ ಗೆಲುವು ಟೀಮ್ ಇಂಡಿಯಾದ್ದೇ ಎಂಬ ನಿರೀಕ್ಷೆ ಭಾರತ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿರುವ ಕಾರಣ ಕನ್ನಡಿಗ ಕೆ.ಎಲ್. ರಾಹುಲ್ ಆರಂಭಿಕ ಸ್ಥಾನಕ್ಕೆ ಬಡ್ತಿ ಪಡೆಯುವ ನಿರೀಕ್ಷೆಯಿದೆ. ಇಂದು ಮಧ್ಯಾಹ್ನ 3 ಗಂಟೆಯಿಂದ ಪಂದ್ಯ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಹಾಗೂ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ.