ಈ ವರ್ಷ ಈ ಮಕ್ಕಳಿಗೆ ವಿಶೇಷ ದೀಪಾವಳಿ..

ಬೆಂಗಳೂರು, ಅಕ್ಟೋಬರ್,24,2022 (www.justkannada.in): ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಓದುತ್ತಿರುವ ಸುಮಾರು 84 ವಿದ್ಯಾರ್ಥಿಗಳಿಗೆ ಈ ಬಾರಿಯ ದೀಪಾವಳಿ ಬಹಳ ವಿಶೇಷ. ಏಕೆಂದರೆ ಇವರೆಲ್ಲರ ಪೋಷಕರು ಕಲಬುರಗಿಯಲ್ಲಿರುವ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು ಈ ಮಕ್ಕಳಿಗೆ ಹಬ್ಬ ಆಚರಿಸುವುದು ಸಾಧ್ಯವಿಲ್ಲದಂತಾಗಿದೆ. ಇಷ್ಟೂ ಮಕ್ಕಳು 7ರಿಂದ 19 ವರ್ಷ ವಯಸ್ಸಿನ ನಡುವಿನ ಮಕ್ಕಳಾಗಿದ್ದು, ಹಲವು ವರ್ಷಗಳಿಂದಲೂ ಬಹುತೇಕ ಎಲ್ಲಾ ಹಬ್ಬಗಳು ಮತ್ತು ಇತರೆ ಎಲ್ಲಾ ಸಂದರ್ಭಗಳನ್ನೂ ತಪ್ಪಿಸಿಕೊಳ್ಳುವಂತಾಗಿದೆ.

ಶನಿವಾರ ಮತ್ತು ಭಾನುವಾರ, ಈ ವಿದ್ಯಾರ್ಥಿಗಳು ಮುಂಚಿತವಾಗಿಯೇ ದೀಪಾವಳಿ ಹಬ್ಬ ಆಚರಿಸುವಂತಾಯಿತು. ಬೆಂಗಳೂರಿನ ಕೆಲವು ನಾಗರಿಕರು ಈ ವಿದ್ಯಾರ್ಥಿಗಳ ದಿನವನ್ನು ವಿಶೇಷವನ್ನಾಗಿಲು ತೆಗೆದುಕೊಂಡ ನಿರ್ಧಾರದಿಂದ ಈ ಮಕ್ಕಳಿಗೆ ಹಬ್ಬ ಆಚರಿಸುವ ಅವಕಾಶ ಲಭಿಸಿದಂತಾಯಿತು.

ಅರವಿಂದ್ ದ್ವಾರಕಾನಾಥ್ ಎಂಬ ಓರ್ವ ಟೆಕಿ ಈ ಸಂಬಂಧ ಮಾತನಾಡುತ್ತಾ, “ನನಗೆ ಈ ಮಕ್ಕಳ ಕುರಿತು ತಿಳಿದಾಗ ಅವರು ತಮ್ಮ ಕುಟುಂಬಸ್ಥರೊಂದಿಗೆ ಹಬ್ಬ ಆಚರಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ ಎಂದು ತಿಳಿದು ಬಂದಾಗ ತುಂಬಾ ದುಃಖವಾಯಿತು. ಹಾಗಾಗಿ ಸಮಾನ ಮನಸ್ಕರ ಸ್ನೇಹಿತರ ಜೊತೆಗೂಡಿ ಈ ಮಕ್ಕಳಿಗೆ ಕನಿಷ್ಠ ಎರಡು ದಿನಗಳ ಮಟ್ಟಿಗಾದರು ಅವರ ಕುಟುಂಬಸ್ಥರಂತೆ ಅವರ ಜೊತೆಗೂಡಿ ‘ಸೋಕೇರ್ ಇಂಡಿಯಾ’ದಲ್ಲಿ ಹಬ್ಬವನ್ನು ಆಚರಿಸಲು ನಿರ್ಧರಿಸಿದೆವು. ದೀಪಗಳು ಹಾಗೂ ಹಸಿರು ಪಟಾಕಿಗಳೊಂದಿಗೆ ತೆರಳಿದೆವು. ಆ ವಿದ್ಯಾರ್ಥಿಗಳೆಲ್ಲರು ನಮಗಾಗಿ ಬಹಳ ಕಾತುರದಿಂದ ಕಾಯುತ್ತಿದ್ದರು. ದೀಪಗಳನ್ನು ಹಚ್ಚಿದಂತೆ ಅವರೆಲ್ಲರ ಮುಖಗಳು ಹೂವಿನಂತೆ ಅರಳಿದವು. ನಿಜಕ್ಕೂ ದೀಪಾವಳಿ ಹಬ್ಬವನ್ನು ಅವರೊಂದಿಗೆ ಆಚರಿಸಿದ್ದು ಬಹಳ ಅರ್ಥಪೂರ್ಣವಾಗಿದೆ,” ಎಂದರು.

ನಮ್ಮ ಸ್ನೇಹಿತರ ಗುಂಪಿನ ಪೈಕಿ ಕೆಲವರು ಈ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಶಿವ ಕುಮಾರ್ ದೇವನ್ ಎಂಬ ಮತ್ತೋರ್ವ ಟೆಕಿ, “ಈ ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ನಮ್ಮ ಕೈಲಾದಷ್ಟು ನಾವು ಸಹಾಯ ಮಾಡುತ್ತಿದ್ದೇವೆ. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ನಿಜಕ್ಕೂ ತುಂಬಾ ಚೆನ್ನಾಗಿ ಓದುತ್ತಾರೆ ಹಾಗೂ ತಮ್ಮ ಸ್ವಂತ ಕಾಲ ಮೇಲೆ ನಿಲ್ಲಲು ಆಕಾಂಕ್ಷೆ ಹೊಂದಿದ್ದಾರೆ. ಆದರೆ ಅದಕ್ಕೆ ಅವರಿಗೆ ಜನರಿಂದ ಅಗತ್ಯ ನೆರವು ಬೇಕಾಗಿದೆ. ಈ ಸಂದರ್ಭದಲ್ಲಿ ನಾವು ಆ ಮಕ್ಕಳ ಜೊತೆ ತುಂಬಾ ಉತ್ತಮ ಸಮಯವನ್ನು ಕಳೆಯುವ ಅವಕಾಶ ಲಭಿಸಿತು,” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಅಶ್ವಿನಿ ಕೃಷ್ಣನ್ ಎಂಬ ಹೆಸರಿನ ಗೃಹಿಣಿ ಮತ್ತು ರಂಗೋಲಿ ಶಿಕ್ಷಕರು, “ದೀಪಾವಳಿ ಹಬ್ಬ ಬಂದರೆ ಉಡುಗೊರೆಗಳನ್ನು ಹಂಚಿಕೊಳ್ಳುತ್ತೇವೆ. ಹಾಗಾಗಿ ಈ ಮಕ್ಕಳಿಗೆ ಅವರು ನಮ್ಮಿಂದ ಯಾವ ಉಡುಗೊರೆ ನಿರೀಕ್ಷಿಸುತ್ತಾರೆ ಎಂದು ಕೇಳಿದೆವು. ಅದಕ್ಕೆ ವಿದ್ಯಾರ್ಥಿಗಳು ತಮಗೆ ಏನೂ ಬೇಡ, ಒಂದು ಪಕ್ಷ ಕೊಡುವುದೇ ಆದರೆ ಪೆನ್ನುಗಳು, ಪುಸ್ತಕಗಳು ಹಾಗೂ ನೀರಿನ ಬಾಟಲಿಗಳನ್ನು ಕೊಡಿ ಎಂದು ಕೋರಿದರು. ಹಾಗಾಗಿ, ಜಯರುದ್ರ ಫೌಂಡೇಷನ್‌ ನ ಪರವಾಗಿ ನಾವು ಈ ವಿದ್ಯಾರ್ಥಿಗಳಿಗಾಗಿ ಹಣವನ್ನು ಸಂಗ್ರಹಿಸಿ, ಅವರಿಗೆ ಉಡುಗೊರೆ ನೀಡಿದೆವು. ಈ ವಯಸ್ಸಿನ ಇತರೆ ಮಕ್ಕಳು ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಆಟಿಕೆಗಳನ್ನು ಕೇಳುತ್ತಾರೆ. ಆದರೆ ಈ ಮಕ್ಕಳು ಪುಸ್ತಕಗಳನ್ನುಕೇಳಿದರು. ಇದರಿಂದ ನಮಗೆ ತುಂಬಾನೇ ಸಂತೋಷವಾಯಿತು. ಹಾಗಾಗಿ ನಾವು ಅವರಿಗೆ ಕೆಲವು ಉಡುಗೊರೆಗಳನ್ನು ನೀಡಿದೆವು,” ಎಂದರು.

ಈ ಮಕ್ಕಳು ತಮ್ಮದಲ್ಲದ ತಪ್ಪಿಗಾಗಿ ಅವರ ಪೋಷಕರಿಂದ ದೂರ ಉಳಿಯುವಂತಾಗಿದೆ. ಶಾಲಿನಿ ಎಂಬ ಹೆಸರಿನ ಓರ್ವ ಸ್ವಯಂಸೇವಕಿ ಈ ಸಂದರ್ಭದಲ್ಲಿ ಮಾತನಾಡಿ, “ಓರ್ವ ಪೋಷಕಿಯಾಗಿ ನಮಗೆ ನಮ್ಮ ಮಕ್ಕಳ ಜೊತೆ ಇರಬೇಕು ಎಂದನಿಸುತ್ತದೆ, ಅದರಲ್ಲಿಯೂ ವಿಶೇಷವಾಗಿ ಹಬ್ಬದ ದಿನಗಳಂದು. ಆದರೆ ಈ ಮಕ್ಕಳ ಮನದಾಳದ ನೋವನ್ನು ಅರ್ಥ ಮಾಡಿಕೊಳ್ಳಬೇಕು. ತಮ್ಮದಲ್ಲದ ತಪ್ಪಿಗಾಗಿ ಅವರು ಪೋಷಕರಿಂದ ದೂರವಿದ್ದಾರೆ. ‘ಸೋಕೇರ್ ಸಂಸ್ಥೆ ಈ ಮಕ್ಕಳಿಗೆ ವಸತಿ ಸೌಕರ್ಯ ಮತ್ತು ಶಿಕ್ಷಣ ಒದಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಜೊತೆಗೆ, ಈ ಮಕ್ಕಳಿಗೆ ಅಗತ್ಯ ಬೆಂಬಲ ನೀಡುವುದು ಸಮಾಜದ ಜವಾಬ್ದಾರಿಯೂ ಹೌದು. ಈ ರೀತಿ ಬೆಂಬಲ ದೊರೆತರೆ, ನಿಜಕ್ಕೂ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಈ ಮಕ್ಕಳ ಮುಖಗಳನ್ನು ನೋಡಿದಾಗ, ಅವರು ಎಂದಿಗೂ ತಮ್ಮ ಪ್ರಯತ್ನವನ್ನು ಬಿಡುವುದಿಲ್ಲ ಎಂಬ ಮನೋಸ್ಥೈರ್ಯ ಹೊಂದಿರುವುದು ಕಾಣಿಸುತ್ತದೆ. ಜೊತೆಗೆ ಶೈಕ್ಷಣಿಕವಾಗಿ ಸಾಧನೆ ಮಾಡುವ ಉತ್ಕಟ ಬಯಕೆ ಹೊಂದಿದ್ದಾರೆ,” ಎಂದು ತಿಳಿಸಿದರು.

ಸುಬೋಧ್ ಎಂಬ ಹೆಸರಿನ ಮತ್ತೋವ್ ಸ್ವಯಂಸೇವಕರು ಮಾತನಾಡಿ, “ಅನೇಕ ಬಾರಿ ನಾವು ನಮಗೆ ಬೇಡದೇ ಇರುವಂತಹ ವಸ್ತುಗಳನ್ನು ಖರೀದಿಸಲು ಹಣ ಖರ್ಚು ಮಾಡುತ್ತೇವೆ. ಅದರ ಬದಲಾಗಿ, ನಗರದಲ್ಲಿರುವ ಇಂತಹ ಮಕ್ಕಳಿಗೆ ಅಗತ್ಯ ಹಣಕಾಸು ಬೆಂಬಲ ನೀಡಿದರೆ ನಿಜಕ್ಕೂ ಅವರಿಗೆ ಎಷ್ಟೊಂದು ಸಹಾಯವಾಗುತ್ತದೆ. ಆದ್ದರಿಂದ ಅನಗತ್ಯವಾಗಿ ಹಣ ಪೋಲು ಮಾಡುವ ಬದಲು, ನಾವೆಲ್ಲರೂ ಜೊತೆಗೂಡಿ ಮತ್ತೊಬ್ಬರ ಜೀವನವನ್ನು ಸಂತೋಷ ಪಡಿಸಲು ಪ್ರಯತ್ನಿಸೋಣ,” ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: special- Dipavali –these- children-bangalore