ಶಾಸಕ ಅನಿಲ್ ಚಿಕ್ಕಮಾದು ಕಾರಿಗೆ ರೈತರಿಂದ ದಿಗ್ಬಂಧನ.

ಮೈಸೂರು,ಅಕ್ಟೋಬರ್,24,2022(www.justkannada.in): ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಸ್ಥಳದಿಂದ ತೆರಳುತ್ತಿದ್ದ‌ ಹೆಚ್.ಡಿ ಕೋಟೆ ಶಾಸಕ  ಅನಿಲ್ ಚಿಕ್ಕಮಾದು ಅವರಿಗೆ ರೈತರು ದಿಗ್ಭಂಧನ ಹಾಕಿದ ಘಟನೆ ನಡೆಯಿತು.

ಸಾಗುವಳಿ ಪತ್ರಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧದ ಮುಖ್ಯ ದ್ವಾರದಲ್ಲಿ ರೈತರು  ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದರು.  ಈ ವೇಳೆ ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಸ್ಥಳದಿಂದ ತೆರಳಿದ‌ ಶಾಸಕರಿಗೆ ಕಾರಿನ ಸಮೇತ ಪ್ರತಿಭಟನಾನಿರತ ರೈತರು ದಿಗ್ಭಂಧನ ಹಾಕಿದರು.  ರೈತರು ಮತ್ತು ಶಾಸಕರ ನಡುವೆ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿ ಮಾತಿನ ಚಕಮಕಿ ನಡೆಯಿತು. ಈ ಸಮಯದಲ್ಲಿ ರೈತರು ಸರ್ಕಾರ ಮತ್ತು ಶಾಸಕರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ನಂತರ ಶಾಸಕ ಅನಿಲ್ ಚಿಕ್ಕಮಾದು ರೈತರ ಮನವೊಲಿಸಿದ್ದು,ಇದೇ ತಿಂಗಳ 29ಕ್ಕೆ ಸಾಗುವಳಿ ಪತ್ರ ನೀಡುವುದಾಗಿ ಭರವಸೆ ಕೊಟ್ಟರು. ಕಾರಣ ಹೇಳದೆ ಅ.29ಕ್ಕೆ ಸಾಗುವಳಿ ಪತ್ರ ಕಡ್ಡಾಯವಾಗಿ ವಿತರಿಸುವುದಾಗಿ ಹೇಳಿ ಬಳಿಕ ಶಾಸಕ ಅನಿಲ್ ಚಿಕ್ಕಮಾದು ಸ್ಥಳದಿಂದ ನಿರ್ಗಮಿಸಿದರು. ಅ.29ಕ್ಕೆ ಸಾಗುವಳಿ ಪತ್ರ ನೀಡದೇ ಇದ್ದರೆ ಮುಂದಿನ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.

Key words: Farmers –protest- MLA- Anil Chikkamadu- mysore