ಏಕಕಾಲಕ್ಕೆ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ, ಪರಿಶೀಲನೆ.

ಬೆಳಗಾವಿ,ಡಿಸೆಂಬರ್,14,2022(www.justkannada.in): ತೂಕ‌ ಮತ್ತು ಅಳತೆಯ ವ್ಯತ್ಯಾಸ ಪತ್ತೆ ಹಚ್ಚಲು ಸಕ್ಕರೆ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ‌ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.

ಸಕ್ಕರೆ ಇಲಾಖೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಏಕಕಾಲದಲ್ಲಿ ದಾಳಿ  ನಡೆಸಲಾಗಿದ್ದು ಮುಂಜಾನೆ 7 ಗಂಟೆಗೆ ಸರಿಯಾಗಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ಏಕಕಾಲಕ್ಕೆ ದಾಳಿಯಾಗಿದೆ. ಕೆಲವೊಂದು ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ವ್ಯತ್ಯಾಸ ಕಂಡುಬಂದಿದ್ದು ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿಯುತ್ತಿದೆ.

ಪ್ರಥಮ ಹಂತದಲ್ಲಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ‌ ಮಾಡಿದ್ದು, ಈ ಸಾಲಿನ ಕಬ್ಬು ಕಟಾವು ಹಂಗಾಮು ಮುಗಿಯುವವರೆಗೂ ನಿರಂತರವಾಗಿ ಗೌಪ್ಯತೆಯ ಮೂಲಕ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ‌ ಮೇಲೆ ದಾಳಿ ನಡೆಸಲು ಸರಕಾರ ತೀರ್ಮಾನ  ಮಾಡಿದೆ.

ಬೆಳಗಾವಿಯ ಎಂಟು, ಬಿಜಾಪುರ ಮತ್ತು ಬಾಗಲಕೋಟೆಯ 4 , ಬೀದರ್ ಮತ್ತು ಗುಲಬರ್ಗದ 2, ಕಾರವಾರದ ಒಂದು ಕಚೇರಿಗಳ ಮೇಲೆ ದಾಳಿಯಾಗಿದೆ.  ಸಕ್ಕರೆ ಇಲಾಖೆಯ ಆಯುಕ್ತರಾದ ಶಿವಾನಂದ್ ಹೆಚ್. ಕಲಕೇರಿ ಇವರ ನೇತೃತ್ವದಲ್ಲಿ  ಈ ದಾಳ ನಡೆಸಿದ್ದು, ದಾಳಿಯಲ್ಲಿ ಸಕ್ಕರೆ ಇಲಾಖೆಯ ಅಧಿಕಾರಿಗಳು, ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದರು.

ಹಲವು ರೈತ ಸಂಘಟನೆಗಳು ತೂಕದಲ್ಲಿ ವ್ಯತ್ಯಾಸ ಕಂಡುಬರುವ ಕುರಿತು ತನಿಖೆ ನಡೆಸುವಂತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಬಳಿ ಒತ್ತಾಯಿಸಿದ್ದರು. ಈ ಬಗ್ಗೆ ಶೀಘ್ರದಲ್ಲೇ ಸಿಹಿ‌ ಸುದ್ದಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು.

Key words: Simultaneous -attack – 21 sugar –factories- inspection