ರಾಜ್ಯದಲ್ಲಿ ಶೀಘ್ರದಲ್ಲೇ 11,133 ಪೌರ ಕಾರ್ಮಿಕರ ಖಾಯಂ ನೇಮಕಾತಿ- ಕೋಟೆ ಶಿವಣ್ಣ.

ಮೈಸೂರು,ಮಾರ್ಚ್,13,2023(www.justkannadain):  ರಾಜ್ಯದಲ್ಲಿ ಶೀಘ್ರದಲ್ಲೇ 11,133 ಪೌರ ಕಾರ್ಮಿಕರ ಖಾಯಂ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ನೇರಪಾವತಿ ಅಡಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಮೊದಲ ಆದ್ಯತೆ ಇರುತ್ತದೆ. ಎರಡನೇ ಹಂತದಲ್ಲಿ ಮತ್ತೆ 11867 ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಇದು ಒಂದು ಐತಿಹಾಸಿಕ ತೀರ್ಮಾನವಾಗಿದೆ ಎಂದು ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ತಿಳಿಸಿದರು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ  ಸಭೆ ನಡೆಸಿದರು. ಸಭೆಯಲ್ಲಿ ಪೌರಕಾರ್ಮಿಕರ ಕುಂದುಕೊರತೆ ಆಲಿಸಿದರು. ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ,  ಜಿಪಂ ಸಿಇಒ ಗಾಯತ್ರಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೋಟೆ ಶಿವಣ್ಣ. ಬೀದರ್ ನಿಂದ ಚಾಮರಾಜನಗರ ತನಕ ಪ್ರವಾಸ ಮಾಡಿದ್ದೇನೆ. ಪೌರಕಾರ್ಮಿಕರ ಕುಂದುಕೊರತೆ ಆಲಿಸಿದ್ದೇನೆ. ಅನೇಕರು ನಮಗೆ ಸಂಬಳ ನೀಡುತ್ತಿಲ್ಲ, ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂಬ ಸಮಸ್ಯೆಯನ್ನ ನನ್ನ ಬಳಿ ತಿಳಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತರಲು ಮುಂದಾಗುತ್ತೇನೆ. ಪೌರಕಾರ್ಮಿಕರಿಗೆ ಏಕ ಸಮವಸ್ತ್ರ ಜಾರಿಗೆ ತರಲು ತಯಾರಿ ನಡೆಸಿದ್ದೇವೆ. ಕೆಲಸದ ವೇಳೆ ವಿಶ್ರಾಂತಿ ಪಡೆಯಲು, ತಿಂಡಿ ತಿನ್ನಲು ವಿಶ್ರಾಂತಿ ಕೊಠಡಿ ಮಾಡಬೇಕೆಂಬ ಯೋಜನೆಯಲ್ಲಿದ್ದೇವೆ. ಜೊತೆಗೆ ದಿನ ನಿತ್ಯ ಪೌರಕಾರ್ಮಿಕರು ಕೆಲಸ ಮಾಡುತ್ತಿರುತ್ತಾರೆ. ಈ ವೇಳೆ ಸಾಮಾನ್ಯವಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತೆ. ಆಗಾಗಿ ಪೌರಕಾರ್ಮಿಕರ ಅರೋಗ್ಯದ ಕಡೆ ಗಮನಹರಿಸಲು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.

ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಚಾಲಕರನ್ನೂ ಕೂಡ ನೇರ ಪಾವತಿ ಅಡಿಯಲ್ಲಿ   ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲಾ ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಒಂದು ಕಮಿಟಿಯನ್ನೇ ರಚನೆ ಮಾಡಲು ಸಿಎಂ ಬೊಮ್ಮಾಯಿ ಅವರು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿರುವ ಪೌರ ಕಾರ್ಮಿಕರ ಸರ್ವೆ ಮಾಡಿಸಲು ಉದ್ದೇಶಿಸಿದ್ದೇವೆ. ಮೊದಲಿಗೆ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಯಿಂದ ಸರ್ವೆ ಕಾರ್ಯ ಆರಂಭವಾಗಲಿದೆ. ಉನ್ನತ ಶ್ರೇಣಿಯಲ್ಲಿ ಪಾಸಾದ ಪೌರ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲು ಕೂಡ ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನ ತೆರೆಯಲು ಉದ್ದೇಶಿಸಲಾಗಿದೆ. ಗುಜರಾತ್ ಮಾದರಿಯನ್ನ  ರಾಜ್ಯದಲ್ಲೂ ಅನುಷ್ಠಾನಕ್ಕೆ ತರಲು ವರದಿ ಸಲ್ಲಿಸಲಾಗಿದೆ. ರಾಜ್ಯದ ಎಲ್ಲಾ ಪೌರ ಕಾರ್ಮಿಕರಿಗೆ ಏಕರೂಪದ ಡ್ರೆಸ್ ಕೋಡ್ ತರಲು ಕೂಡ ತೀರ್ಮಾನಿಸಲಾಗಿದೆ ಎಂದು ಕೋಟೆ ಶಿವಣ್ಣ ತಿಳಿಸಿದರು.

ಯುಜಿಡಿ, ಕಸಗುಡಿಸುವವರು, ಲೋಡರ್ಸ್ ಗೆ ಪ್ರತ್ಯೇಕ ಉಡುಗೆ ಕೊಡಲು ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 7070 ಮ್ಯಾನುವಲ್ ಸ್ಕ್ಯಾವೆಂಜರ್ಸ್ ಗಳಿದ್ದಾರೆ. ಮ್ಯಾನುವಲ್ ಸ್ಕ್ಯಾವೆಂಜರ್ಸ್ ಪದ್ದತಿ ನಿಷೇಧವಿದ್ದರೂ ಕೆಲವರು ಹಣದ ಆಸೆಗೆ ಆ ಕೆಲಸ ಮಾಡುತ್ತಾರೋ ಅಂತವರಿಗೆ ಪುನರ್ವಸತಿಯನ್ನು ಕಲ್ಪಿಕೊಡಲು ಆಯೋಗ ಮುಂದಾಗಿದೆ. ಪೌರ ಕಾರ್ಮಿಕರಿಗಾಗಿಯೇ ಪ್ರತ್ಯೇಕ ಆ್ಯಕ್ಷನ್ ಪ್ಲಾನ್ ತಯಾರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಇ.ಎಸ್. ಐ, ಪಿಎಫ್ ಸೌಲಭ್ಯಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅವರ ಆರೋಗ್ಯಕರ ತಪಾಸಣೆ ಕಡ್ಡಾಯವಾಗಿ ಮಾಡಿಕೊಳ್ಳಲು ಕೂಡ ಸೂಚಿಸಲಾಗಿದೆ ಎಂದು ಕೋಟೆ ಶಿವಣ್ಣ ತಿಳಿಸಿದರು.

Key words: Permanent –work- 11,133 civic workers – state -soon- Kote Shivanna