ಮೈಸೂರು:  ಧಿಡೀರ್ ಕುಸಿದ ಶಿವನ ಮೂರ್ತಿ ಹೊತ್ತ ಗೋಪುರ: ಸ್ವಯಂ ಸೇವಕರು ಅಪಾಯದಿಂದ ಪಾರು.

ಮೈಸೂರು,ಮೇ,10,2022(www.justkannada.in): ಶಿವನ ಮೂರ್ತಿ ಹೊತ್ತ ಗೋಪುರ ಧಿಡೀರ್ ಆಗಿ ಕುಸಿದು ಬಿದ್ದಿರುವ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ರುಧ್ರಭೂಮಿಯಲ್ಲಿ  ನಡೆದಿದೆ.

ಚಾಮುಂಡಿ ಬೆಟ್ಟದ ತಪ್ಪಲಿನ ರುಧ್ರಭೂಮಿಯ ಪ್ರವೇಶದ್ವಾರದಲ್ಲಿರುವ ಪುರಾತನ ಕಲ್ಯಾಣಿಯಲ್ಲಿ ನಿರ್ಮಿಸಲಾಗಿದ್ದ ಶಿವನಮೂರ್ತಿ ಹೊತ್ತ ಗೋಪುರ ಕುಸಿದಿದೆ. ಸ್ಮಶಾನದ ಸುಮಾರು ಮೂವತ್ತು ವರ್ಷಗಳ ಹಿಂದೆ ಕಲ್ಯಾಣಿಯ ಮಧ್ಯಭಾಗದಲ್ಲಿ ಶಿವನಮೂರ್ತಿಯನ್ನ ಹೊತ್ತ ಗೋಪುರ ನಿರ್ಮಾಣ ಮಾಡಲಾಗಿತ್ತು.  ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಂಟೆಗಳಿಂದ ಕಲ್ಯಾಣಿ ಆವೃತ್ತವಾಗಿತ್ತು. ಜತೆಗೆ ಗೋಪುರವೂ ಶಿಥಿಲಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಕಲ್ಯಾಣಿಯನ್ನ ಸುಸ್ಥಿತಿಗೆ ತರಲು ಯುವಬ್ರಿಗೇಡ್ ನ ಸ್ವಯಂಸೇವಕರು ಮುಂದಾಗಿದ್ದರು. ಕಳೆದ ಎರಡು ದಿನಗಳಿಂದ 20 ಕ್ಕೂ ಹೆಚ್ಚು ಯುವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಗೋಪುರ ಕುಸಿದು ಬಿದ್ದಿದೆ. ಗೋಪುರ ಕುಸಿದು ಬಿದ್ದ ಪರಿಣಾಮ ಶಿವನ ಮೂರ್ತಿ ಭಗ್ನಗೊಂಡಿದ್ದು, ಕಲ್ಯಾಣಿ ದುರಸ್ತಿ ಮಾಡಲು ಬಂದಿದ್ದ ಯುವಬ್ರಿಗೇಡ್ ನ ಸ್ವಯಂಸೇವಕರು ಅಧೃಷ್ಟವಶಾತ್ ಪಾರಾಗಿದ್ದಾರೆ.

ಈ ನಡುವೆ ಸಂಬಂಧಿಸಿದ ಅಧಿಕಾರಿಗಳು ಪುರಾತನ ಕಲ್ಯಾಣಿ ಉಳಿಸಲು ಮುಂದಾಗಬೇಕಿದ್ದು, ಕುಸಿದು ಬಿದ್ದ ಗೋಪುರವನ್ನ ಪುನರ್ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

Key words: Mysore-Shiva gopura-collapses-Chamundi hills