ಮಂಗಳೂರು ಬಾಂಬ್ ವಿಚಾರದಲ್ಲಿ ಹೆಚ್‌ ಡಿಕೆ ಹೇಳಿಕೆಗೆ ತಿರುಗೇಟು: ರಾಜ್ಯದ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ –ಡಿಸಿಎಂ ಅಶ್ವಥ್ ನಾರಾಯಣ್ ಆರೋಪ…

ಮೈಸೂರು,ಜ,23,2020(www.justkannada.in):  ರಾಜ್ಯದ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕೋದು ಬಿಟ್ಟು ಪ್ರೋತ್ಸಾಹ ಕೊಟ್ಟಿದ್ದಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಆರೋಪಿಸಿದರು.

ಮೈಸೂರಿನಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಚಾಲನೆ ನೀಡಿದರು. ವೈದ್ಯಕೀಯ ಮಹಿಳಾ ಪಿ.ಜಿ ವಿದ್ಯಾರ್ಥಿನಿಯರ ವಸತಿ ನಿಲಯದ ಕಾಮಗಾರಿಗೆ ಡಿಸಿಎಂ ಅಶ್ವಥ್ ನಾರಾಯಣ್ ಗುದ್ದಲಿ ಪೂಜೆ ನೆರವೇರಿಸಿದರು.

ವಿನೋಭ ರಸ್ತೆಯ ವೈಧ್ಯಕೀಯ ಮಹಿಳಾ ಪಿಜಿ ಆವರಣದಲ್ಲಿ ಸುಮಾರು 9.5ಕೋಟಿ ವೆಚ್ಚದಲ್ಲಿ 68 ಕೊಠಡಿಗಳನ್ನ ನಿರ್ಮಾಣ ಮಾಡಲಾಗುತ್ತಿದೆ.  ಕಾಮಗಾರಿಗಳಿಗೆ ಚಾಲನೆ ನೀಡಿದ ಡಿಸಿಎಂಗೆ ಶಾಸಕ ಎಲ್.ನಾಗೇಂದ್ರ ಹಾಗೂ ಇನ್ನಿತರ ಅಧಿಕಾರಿಗಳು ಸಾಥ್ ನೀಡಿದರು.

ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ರಾಜ್ಯದ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕೋದು ಬಿಟ್ಟು ಪ್ರೋತ್ಸಾಹ ಕೊಟ್ಟಿದ್ದಾರೆ. ಅವರ ಮೇಲಿನ ಕೇಸ್‌ಗಳನ್ನ ವಾಪಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರೆಲ್ಲಾ ಕಾನೂನು ಮೀರಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಸೃಷ್ಟಿಯಾಗಿದೆ. ನಮ್ಮ ಸರ್ಕಾರ ಎಲ್ಲವನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡಿದೆ. ಅದೇಷ್ಟೋ ಘಟನೆಗಳು ನಡೆಯುವ ಮುನ್ನವೆ ತಡೆಹಿಡಿಯಲಾಗಿದೆ. ಬಾಂಬ್ ತಯಾರಿಕೆಯ ಕೆಲ ವಸ್ತುಗಳು ಕಾರ್ಖಾನೆ ಉಪಯೋಗಕ್ಕೆ ಸಿಗುತ್ತೆ. ಅವುಗಳನ್ನ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ. ಇಂತಹ ವಸ್ತುಗಳನ್ನ ಅವರ ಕೈಗೆ ಸಿಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಇನ್ನ ಮೇಲಾದ್ರು ಜವಾಬ್ದಾರಿಯಿಂದ ಹೇಳಿಕೆ ಕೊಡಲಿ‌ –ಹೆಚ್.ಡಿಕೆಗೆ ಟಾಂಗ್…

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್  ಪತ್ತೆ ಅಣುಕು ಪ್ರದರ್ಶನ ಎಂಬ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ  ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್, ನಾಲಿಗೆ ಇದೆ ಅಂತ ಏನು ಬೇಕಾದ್ರು ಮಾತನಾಡಬಹುದು. ಆದ್ರೆ ಅವರು ಆಡುವ ಮಾತಿಗೆ ಮಾನ್ಯತೆ ಇರಬೇಕು ಎಂದು ಟಾಂಗ್ ನೀಡಿದರು.

ಜವಬ್ದಾರಿಯುತ ಸ್ಥಾನದಲ್ಲಿರುವವರು ಏನು ಬೇಕಾದ್ರು ಮಾತನಾಡಬಹುದು. ಆದ್ರೆ ಅವರ ಮಾತುಗಳಲ್ಲಿ ಅರ್ಥ ಇರಬೇಕು. ಬಾಂಬ್ ಇಟ್ಟಿರುವವ ಹಿಂದೆ ಹುಸಿ ಬಾಂಬ್ ಕರೆ ಮಾಡಿದ್ದ. ಈ ಬಾರಿ ತಾನೆ ಬಾಂಬ್ ಇಟ್ಟಿದ್ದೀನಿ ಅಂತ ಒಪ್ಪಿಕೊಂಡಿದ್ದಾನೆ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಮಾಹಿತಿ ತಿಳಿದುಕೊಂಡು ಮಾತನಾಡಲಿ. ಇನ್ನಮೇಲಾದ್ರು ಜವಾಬ್ದಾರಿಯಿಂದ ಹೇಳಿಕೆ ಕೊಡಲಿ‌ ಎಂದು ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಸಮಾಜಘಾತುಕ ಸಂಘಟನೆಗಳನ್ನ ಬ್ಯಾನ್ ಮಾಡ್ತಿವಿ….

ಈ ರೀತಿಯ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಕೆಲ ಸಂಘಟನೆಗಳ ನಿಷೇಧಕ್ಕೆ ಕ್ರಮವಹಿಸಲಾಗುವುದು. ಸಮಾಜಘಾತುಕ ಸಂಘಟನೆಗಳನ್ನ ಬ್ಯಾನ್ ಮಾಡ್ತಿವಿ. ಈಗಾಗಲೇ ನಾವು ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದೇವೆ. ಇಂತಹ ಸಂಘಟನೆಗಳನ್ನ ಬೆಳೆಯಲು ಬಿಟ್ಟರೆ ತೊಂದರೆಯಾಗುತ್ತೆ‌ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಸದ್ಯಕ್ಕಿಲ್ಲ ಕನಕಪುರಕ್ಕೆ ಮೆಡಿಕಲ್ ಕಾಲೇಜು…

ಕನಕಪುರಕ್ಕೆ ಮೆಡಿಕಲ್ ಕಾಲೇಜು ವಿಚಾರ ಕುರಿತು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ಸದ್ಯ ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡುತ್ತಿದ್ದೇವೆ‌. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಜೊತೆ ಹೆಲ್ತಿ ಸಿಟಿ ಮಾಡಲಾಗುತ್ತೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಿರುವುದರಿಂದ ತಾಲ್ಲೂಕು ಕೇಂದ್ರ ಇಲ್ಲ‌. ಮಂಜೂರಾಗಿರುವ ನಾಲ್ಕು ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Key words: mysore- DCM-Ashwath narayan-mangalire airport –bomb-former cm- hd kumaraswamy