ಮೇಕೆದಾಟು ಯೋಜನೆ ವಿವಾದ: ವಿಚಾರಣೆ ಆ.10ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ,ಜುಲೈ,26,2022(www.justkannada.in):  ಮೇಕೆದಾಟು ನಿರ್ಮಾಣ ಯೋಜನೆ  ವಿವಾದಕ್ಕೆ ಸಂಬಂಧಿಸಿದಂತೆ  ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 10ಕ್ಕೆ ಮುಂದೂಡಿದೆ.

ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರ ಇಂದಿನ ವಿಚಾರಣೆ ವೇಳೆ ಹೆಚ್ಚುವರಿ ಲಿಖಿತ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತು. ಈ ಹಿನ್ನೆಲೆಯಲ್ಲಿ ಇದಕ್ಕೆ ಉತ್ತರಿಸಲು ಸಮಯ ಬೇಕು ಎಂದು ಕರ್ನಾಟಕ ಪರ ವಕೀಲ ಶಾಮ್ ದಿವಾನ್ ವಾದ ಮಂಡಿಸಿದರು. ಅಲ್ಲದೆ ಅರ್ಜಿಯ ಅಂತಿಮ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಸೂಚನೆ ನೀಡಿ  ವಿಚಾರಣೆಯನ್ನ ಸುಪ್ರೀಂಕೋರ್ಟ್ ಆಗಸ್ಟ್ 10ಕ್ಕೆ ಮುಂದೂಡಿದೆ. ಇನ್ನು  ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚಿಸದಂತೆ ತಮಿಳುನಾಡು ಮನವಿ ಮಾಡಿತ್ತು.

ಮೇಕೆದಾಟು ಅರ್ಜಿ ವಿಚಾರಣೆ ಹಂತದಲ್ಲಿದ್ದು, ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ಸಧ್ಯಕ್ಕೆ ಚರ್ಚೆಯಾಗಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Key words: mekedatu-scheme-Supreme Court -adjourned -hearing – August 10