ಮಂಗಳೂರಿನಲ್ಲಿ ಗೋಲಿಬಾರ್ ಮತ್ತು ಕಲ್ಲು ತೂರಾಟದ ವಿಡಿಯೋ ದೃಶ್ಯ ಬಿಡುಗಡೆ ವಿಚಾರ: ಬಿಜೆಪಿ ವಿರುದ್ದ ಮಾಜಿ ಸಚಿವ ಯು.ಟಿ ಖಾದರ್ ವಾಗ್ದಾಳಿ…

ಬೆಂಗಳೂರು,ಡಿ,24,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ. ಅವರಿಗೆ ಕಾಲವೇ ಉತ್ತರ ಕೊಡುತ್ತದೆ ಎಂದು ಮಾಜಿ ಸಚಿವ ಯುಟಿ ಖಾದರ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಮಂಗಳೂರು ಗೋಲಿಬಾರ್ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್, ದೇಶದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗೆ ಮುಂದುವರೆದರೇ ಬಿಜೆಪಿ ಮುಕ್ತವಾಗುತ್ತದೆ.  ಇದೇ ಕಾರಣಕ್ಕೆ  ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಪ್ರಯತ್ನಿಸುತ್ತಿದೆ. ಸಿಎಎ ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ವೋಟ್ ಬ್ಯಾಂಕ್ ಗಾಗಿ ಸಿಎಎ ಜಾರಿಗೆ ತಂದಿದ್ದಾರೆ.  ದೇಶದ ಸಂಪತ್ತನ್ನ ನಾಲ್ಕೈದು ಜನರಿಗೆ ನೀಡಲು ಬಿಡಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಇರುವ ಕಡೆ ಮಾತ್ರ  ಗೋಲಿಬಾರ್ ಆಗಿದೆ. ದೇಶದಲ್ಲಿ ಕಾಂಗ್ರೆಸ್ ಒಂದೇ ಪ್ರತಿಭಟನೆ ನಡೆಸುತ್ತಿಲ್ಲ.ಅವರ ಮಿತ್ರಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.  ತ್ರಿಪುರ ಬಿಹಾರ, ಕೇರಳಾ, ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆಯಾ…? ಇವರ ಮಿತ್ರಪಕ್ಷಗಳು ಮೊದಲು ಪ್ರತಿಭಟನೆಯಿಂದ ಹೊರಬರಲಿ. ನಾವು ಅಂಬೇಡ್ಕರ್ ಗಾಂಧಿ ಭಾರತ ಉಳಿಸಲು ಹೋರಾಡುತ್ತಿದ್ದೇವೆ. ಕಾಂಗ್ರೆಸ್ ಮೇಲೆ ಸುಮ್ಮನೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಗಲಭೆಗೆ ಬಿಜೆಪಿ ನೇರ ಕಾರಣ  ಎಂದು ಯು.ಟಿ ಖಾದರ್ ತಿಳಿಸಿದರು.

ಪ್ರತಿಭಟನೆ ವೇಳೆ ಕಲ್ಲುತೂರಾಟದ ದೃಶ್ಯವನ್ನ ಪೊಲೀಸರು ಬಿಡುಗಡೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಯುಟಿ ಖಾದರ್,  ಸರ್ಕಾರ ಮಂಗಳೂರು ಗಲಭೆಯನ್ನು ತನಿಖೆಗೆ ಆದೇಶಿಸಿದ ತಕ್ಷಣವೇ ಫೋಲೀಸರು ಗಲಭೆಯ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಯಾರ ಸೂಚನೆ ಮೇಲೆ ನಡೆದಿದೆ, ಇದರ ಹಿಂದಿನ ಉದ್ದೇಶ ಏನು ಎಂಬುದು ಪ್ರಶ್ನಾರ್ಹವಾಗಿದೆ ಎಂದರು.

Key words: mangalore-Golibar -Former Minister -UT Khadar- against -bjp