ಅಮಾಯಕ ವಿಧವೆಯರೇ ಈತನಿಗೆ ಟಾರ್ಗೆಟ್: ಬಾಳು ಕೊಡುವ ನೆಪದಲ್ಲಿ ಹೀನಕೃತ್ಯವೆಸಗುತ್ತಿದ್ದ ವಂಚಕ ಅಂದರ್….

ಮೈಸೂರು,ಡಿ,24,2019(www.justkannada.in): ಮದುವೆ ಆಗುವ ಆಮಿಷವೊಡ್ಡಿ ವಿಧವೆಯರನ್ನ ಯಾಮಾರಿಸಿದ್ದ ವಂಚಕನನ್ನ ನಗರದ ಕೆ.ಆರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೊಯಮತ್ತೂರಿನ ಯುವರಾಜ್.ಆ.ವಿನೀತ್ ರಾಜ್ (45)  ಬಂಧಿತ ಆರೋಪಿ. ಈತ  ಎಂಕಾಂ ಓದಿದ್ದು, ಈತನಿಗೆ ವಿಧವೆಯರೇ ಟಾರ್ಗೆಟ್ ಆಗಿದ್ದರು.  ಯುವರಾಜ್ ಮದುವೆ ಆಗುವ ಆಮಿಷವೊಡ್ಡಿ ವಿಧವೆಯರಿಂದ ಚಿನ್ನದ ಸರ ನಗದು ಲಪಟಾಯಿಸಿ ಕಣ್ಮರೆಯಾಗುತ್ತಿದ್ದ.

ಶಾದಿ.ಕಾಮ್ ಹಾಗೂ ಸಂಗಮ್ ಮೆಟ್ರಿಮೋನಿಯಲ್ ನಲ್ಲಿ ಮೆಂಬರ್ ಆಗಿರುವ ಕಿಲಾಡಿ ಯುವರಾಜ್  ತಾನೂ ಆಟೋಮೊಬೈಲ್ ವ್ಯಾಪಾರ ನಡೆಸುತ್ತಿರುವುದಾಗಿ ನಂಬಿಸುತ್ತಿದ್ದ. ಶಾದಿ.ಕಾಮ್ ಮೆಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ವಿಧವೆಯರನ್ನ ಪರಿಚಯಿಸಿಕೊಂಡು ವಂಚನೆ ಮಾಡುತ್ತಿದ್ದ.

ಪತಿಯನ್ನ ಕಳೆದುಕೊಂಡ ವಿಧವೆಯರಿಗೆ ಬಾಳು ಕೊಡುವ ನೆಪದಲ್ಲಿ ಈತ ಹಾಸನ, ಮೈಸೂರು, ಬೆಂಗಳೂರಿನ ನಾಲ್ವರು ವಿಧವೆಯರಿಗೆ ವಂಚನೆ ಮಾಡಿದ್ದನು ಎನ್ನಲಾಗಿದೆ. ಮದುವೆ ಆಗಬೇಕಿದ್ರೆ ದೋಷ ನಿವಾರಣೆ ಕಾರಣ ಕೊಡುತ್ತಿದ್ದ ಯುವರಾಜ್, ದೋಷ ನಿವಾರಣೆಗೆ ಚಿನ್ನದ ಸರ ಬದಲಾಯಿಸಬೇಕೆಂದು ವಿಧವೆಯರಿಗೆ ಸಬೂಬು ನೀಡುತ್ತಿದ್ದ. ದೋಷ ನಿವಾರಣೆ ನೆಪದಲ್ಲಿ ನಕಲಿ ಚಿನ್ನದ ಸರ ಕೊಟ್ಟು ಅಸಲಿ ಚಿನ್ನದ ಸರ ಪಡೆದು ಆರೋಪಿ ಯುವರಾಜ ಎಸ್ಕೇಪ್ ಆಗುತ್ತಿದ್ದ.

ಆರೋಪಿ ಯುವರಾಜ್ ವಿಧವೆಯೊಬ್ಬರನ್ನ ಹಾಸನದಿಂದ ಮೈಸೂರಿಗೆ ಕರೆಸಿ ಚಾಮುಂಡಿಬೆಟ್ಟದಲ್ಲಿ ಚಿನ್ನದ ಸರ ಲಪಟಾಯಿಸಿದ್ದ. ಈ ಸಂಬಂಧ ವಂಚನೆಗೊಳಗಾಗಿದ್ದ ಹಾಸನದ ವಿಧವೆ ದೂರು ನೀಡಿದ್ದರು. ವಿಧವೆ  ಕೊಟ್ಟ ಕಂಪ್ಲೇಂಟ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕೆ.ಆರ್.ಠಾಣಾ ಇನ್ಸ್ ಪೆಕ್ಟರ್ ಶ್ರೀನಿವಾಸ್ ಆರೋಪಿ ಯುವರಾಜ್ ನನ್ನ ಬಂಧಿಸಿದ್ದಾರೆ.

ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು  ತನಿಖೆ ವೇಳೆಯಲ್ಲಿ ನಾಲ್ಕು ವಿಧವೆಯರಿಗೆ ವಂಚಿಸಿರುವ ಮಾಹಿತಿ ಬಯಲಾಗಿದೆ.  ಮತ್ತಷ್ಟು ಅಮಾಯಕರು ವಂಚನೆಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.

Key words:mysore- innocent- widows-cheater –arrest