ಲಾಕ್ ಡೌನ್ ಆರ್ಥಿಕ ಸಂಕಷ್ಟ: ಜನ ಸಾಮಾನ್ಯರ ನೆರವಿಗೆ ಮಾಜಿ ಸಿಎಂ‌ ಎಚ್ಡಿಕೆ ಸಲಹೆ

ಬೆಂಗಳೂರು, ಏಪ್ರಿಲ್ 27, 2020: ಲಾಕ್ ಡೌನ್ ನಿಂದ ಆರ್ಥಿಕ ಅಭಿವೃದ್ಧಿ ಕುಸಿದಿರುವ ಸಂದರ್ಭದಲ್ಲಿ ಸರಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕೆಲ ಸಲಹೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಎಚ್ಡಿಕೆ‌ ನೀಡಿರುವ ಸಲಹೆಗಳು ಇಂತಿವೆ…

ರಿಸರ್ವ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಸಾಮಾನ್ಯನ ಕಯ್ಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ‘ಕಾಸ್ಟ್ ಆಫ್ ಲಿವಿಂಗ್’ ಕಡಿಮೆ ಮಾಡುವುದು ಸರಕಾರಗಳ ಆದ್ಯತೆ ಆಗಲಿದೆ.

ಲಾಕ್ ಡೌನ್ ತಗೆದ ತಕ್ಷಣವೇ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಮರಳಲಾರದು. ಜಿಡಿಪಿ ಬೆಳವಣಿಗೆ ಈ ಹಿಂದೆ ಇದ್ದ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು.

ಈ ಹಠಾತ್ ಶಾಕ್ ನಿಂದ ಜನಸಾಮಾನ್ಯರು ಸುಧಾರಿಸಿಕೊಳ್ಳಲು ಅನುವಾಗುವಂತೆ ಬಾಡಿಗೆ ಮುಂದೂಡಿಕೆ ಬದಲಾಗಿ ಭಾಗಶಃ ಬಾಡಿಗೆ ವಿನಾಯಿತಿ, ಖಾಸಗಿ ಸ್ಕೂಲು/ಕಾಲೇಜುಗಳ ಫೀಸ್ ಕಡಿತ, ವಿದ್ಯುತ್ ಬಿಲ್ ಕಡಿತ, ಪೆಟ್ರೋಲ್/ಡೀಸೆಲ್ ದರ ಕಡಿತ ಘೋಷಣೆ ಮಾಡುವುದು ಸೂಕ್ತ.

ಅನೇಕ ಖಾಸಗಿ ಕಂಪನಿಗಳು ಈಗಾಗಲೇ ಸಿಬ್ಬಂದಿ ಕಡಿತ ಮತ್ತು ಸಂಬಳ ಕಡಿತ ಮಾಡುವ ತೀರ್ಮಾನ ತಗೆದುಕೊಂಡಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಹೀಗಾಗಿ ಸರಕಾರ ಜನಕಲ್ಯಾಣ ಯೋಜನೆಗಳ ಮೇಲೆ ಹೆಚ್ಚು ಖರ್ಚು ಮಾಡಬೇಕಾಗುವುದರರಿಂದ ಕುಬೇರ ಉದ್ಯೋಗಪತಿಗಳಿಂದ ಕರೋನ ತೆರಿಗೆಯನ್ನು ಸಂಗ್ರಹಿಸಲಿ.

ರೈತರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಗಳ ರಕ್ಷಣೆ ಮಾಡುವುದು ತುರ್ತಿನ ಆದ್ಯತೆಯಾಗಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು, ಗಾರ್ಮೆಂಟ್ ಕೆಲಸಗಾರರು, ಕಟ್ಟಡ ಕಾರ್ಮಿಕರು ಇತ್ಯಾದಿ ನಗರ ಪ್ರದೇಶದ ಬಡ ಸಮುದಾಯಕ್ಕೋಸ್ಕರ ಸರಕಾರ ಹೆಚ್ಚಿನ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ.