ಕೊಡವ ನ್ಯಾಷನಲ್ ಕೌನ್ಸಿಲ್ ಆರೋಪ ಸರಿಯಲ್ಲ, ಅವರಿಗೆ ಬೇಕಾದಂತೆ ವರದಿ ನೀಡಲು ಸಾಧ್ಯವಿಲ್ಲ: ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಟಿ.ಟಿ.ಬಸವನಗೌಡ ಸ್ಪಷ್ಟನೆ

ಮೈಸೂರು, ಅಕ್ಟೋಬರ್ 1, 2021 (www.justkannada.in): ಕೊಡವ ನ್ಯಾಷನಲ್ ಕೌನ್ಸಿಲ್ ಮಾಡಿದ್ದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಟಿ.ಟಿ.ಬಸವನಗೌಡ ಸರಕಾರದ ನೀತಿ-ನಿಯಮಾನುಸಾರವಾಗಿ ಕಾರ್ಯನಿರ್ವಹಿಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

‘ಜಸ್ಟ್ ಕನ್ನಡ’ದೊಂದಿಗೆ ಮಾತನಾಡಿದ ಅವರು, ಸರಕಾರಿ ಸಂಸ್ಥೆಗೆ ಅದರದ್ದೇ ಆದ ಮಾರ್ಗಸೂಚಿ, ನೀತಿ-ನಿಯಮಗಳಿರುತ್ತವೆ. ಅದರಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಕೊಡವ ಕುಲಶಾಸ್ತ್ರ ಅಧ್ಯಯನವನ್ನೂ ಅದೇ ಮಾದರಿಯಲ್ಲಿ ನಡೆಸಿದ್ದೇವೆ. ಆದರೆ ತಮಗೆ ಬೇಕಾದಂತೆ ವರದಿ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲವರು ಆರೋಪಗಳನ್ನು ಮಾಡಿದ್ದಾರೆ. ಆದರೆ ಸರಕಾರಿ ಅಧಿಕಾರಿಯಾಗಿ ಆ ಎಲ್ಲ ಆರೋಪಗಳಿಗೆ ಸ್ಪಷ್ಟನೆ, ಉತ್ತರ ನೀಡುತ್ತಾ ಕೂರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ನಡೆಸಿದ ಕೊಡವ ಕುಲಶಾಸ್ತ್ರ ಅಧ್ಯಯನ ಪೂರ್ವಗ್ರಹ ಪೀಡಿತವಾಗಿದ್ದು, ವಾಸ್ತವಕ್ಕೆ ದೂರ. ಈಗಿನ ಅಧ್ಯಯನ ವರದಿ ತಿರಸ್ಕರಿಸಿ, ಮರು ಅಧ್ಯಯನ ನಡೆಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸರಕಾರವನ್ನು ಆಗ್ರಹಿಸಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಟಿ.ಟಿ.ಬಸವನಗೌಡ ಅವರು, ಕೊಡವ ನ್ಯಾಷನಲ್ ಕೌನ್ಸಿಲ್’ನ ಎನ್.ಯು. ನಾಚಪ್ಪ ಅವರ ಸಲಹೆ, ಸಹಕಾರವನ್ನೂ ಅಧ್ಯಯನ ವೇಳೆ ತೆಗೆದುಕೊಳ್ಳಲಾಗಿತ್ತು. ಇದಾದ ಸ್ವಲ್ಪ ದಿನಗಳಲ್ಲಿ ವರದಿ ನಾವು ಕೇಳಿದ ರೀತಿ ಬರುವುದಿಲ್ಲ ಎಂಬ ಕಾರಣಕ್ಕೆ ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಸರಕಾರದ ಮಾರ್ಗದರ್ಶನದಂತೆ ಕೆಲಸ ಮಾಡಿದ್ದೇವೆ. ಎಲ್ಲ ನಿಯಮಗಳನ್ನು ಪಾಲಿಸಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಸರಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ.

ವಿಷಯವಾರು ತಜ್ಞರು ಅಧ್ಯಯನ ಕಾರ್ಯ ನಡೆಸಿದ್ದಾರೆ. ಇದನ್ನೆಲ್ಲ ಪರಿಗಣಿಸಿ ವರದಿ ನೀಡಿದ್ದೇವೆ. ಮುಂದಿನ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಳ್ಳುತ್ತದೆ. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಈ ಹಿಂದೆಯೂ ಹತ್ತರಿಂದ ಹದಿನೈದು ಸಮುದಾಯಗಳ ಕುರಿತು ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಸರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಆದರೆ ತಮಗೆ ಬೇಕಾದಂತೆ ವರದಿ ನೀಡಲಿಲ್ಲ ಎಂಬ ಕಾರಣಕ್ಕೆ ತಮ್ಮ ಮೂಗಿನ ನೇರಕ್ಕೆ ಮಾತನಾಡುವುದು ಸರಿಯಲ್ಲ. ಅವರ ಎಲ್ಲ ಆರೋಪಗಳಿಗೆ ಮುಂದೆ ಕಾನೂನಾತ್ಮಕವಾಗಿ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

key words: Kodava National Council alleges wrongdoing and cannot report as they want: State Tribal Research Institute Director