ಸಂವಿಧಾನದ 4 ನೇ ಅಂಗ ಇಂದು ಮಸುಕು..ಮಸುಕು, ಕಾರಣ ನಮ್ಮಲ್ಲೇ ಇದೇ ಹುಳುಕು..!

 

ಮೈಸೂರು, ಜೂ.16 , 2020 : (www.justkannada.in news) ಮೊನ್ನೆ ಪತ್ರಕರ್ತ ಸ್ನೇಹಿತರೊಬ್ಬರು ಸಿಕ್ಕರು. ಅವರು ಕೆಲಸ ಕಳೆದುಕೊಂಡಿರಲಿಲ್ಲ. ಆದರೆ ಕಳೆದುಕೊಳ್ಳುವ ಭೀತಿ ಅವರಲ್ಲಿತ್ತು.

ಸಿಇಒ ಮತ್ತು ಎಚ್ ಆರ್ ಎ ಒಬ್ಬೊಬ್ಬರನ್ನೇ ಕರೆದು ರಾಜೀನಾಮೆ ಕೊಟ್ಟು ಹೊರಡಿ ಎನ್ನುತ್ತಿದ್ದಾರೆ. ಅವರು ಹೇಳಿದಂತೆ ಕೇಳಿದರೆ ಎರಡು ತಿಂಗಳ ಸಂಬಳ ಹೆಚ್ಚುವರಿ ಕೊಟ್ಟು ಕಳುಹಿಸುತ್ತಾರೆ. ರಾಜೀನಾಮೆ ಕೊಡುವುದಿಲ್ಲ ಎಂದು ಕುಳಿತರೆ ಟರ್ಮಿನೇಟ್ ಮಾಡುತ್ತಾರೆ. ಕೋರ್ಟಿಗೆ ಹೋಗುತ್ತೇನೆ ಎಂದರೆ ಆಯಿತು ಹಾಗೇ ಮಾಡಿ, ಹತ್ತೋ ಇಪ್ಪತ್ತೋ ವರುಷ ಹೋರಾಡೋಣ ಎನ್ನುತ್ತಾರೆ. ಅಷ್ಟರಲ್ಲಿ ಬೆವರಿಳಿದು ಬನಿಯನ್ ಒದ್ದೆಯಾಗುತ್ತದೆ. ದೂಸರಾ ಮಾತೇ ಇಲ್ಲದೇ ಹೇಳಿದ ಪೇಪರ್ ಗೆ ಸಹಿ ಮಾಡಿ ಕೊಟ್ಟದ್ದನ್ನು ತೆಗೆದುಕೊಂಡು ಮನೆ ಸೇರಬೇಕು. ಮೊನ್ನೆ ಮೊನ್ನೆ ತನಕ ಸಂಬಳ ಕಡಿತ ಮಾಡಿದರು. ಈಗ ಕೆಲಸದಿಂದಲೇ ಕೀಳುತ್ತಿದ್ದಾರೆ. ಅರ್ಧ ಸಂಬಳ ಕೊಟ್ಟರೂ ಸಾಕಿತ್ತು, ಕೆಲಸ ಹೋಗದಿದ್ದರೆ ಸಾಕು ಎಂದು ಕೈ ಮುಗಿಯುತ್ತಿದ್ದೇನೆ ಎಂದರು.

kannada-journalist-media-fourth-estate-under-loss

ಅವರದ್ದು ತಪ್ಪೂ ಅಂತ ಹೇಳಲಾರೆ. ಅವರೂ ಕಷ್ಟದಲ್ಲಿದ್ದಾರೆ. ಪತ್ರಿಕೆ ಕೊಳ್ಳುವವರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಇನ್ನಿಲ್ಲದ ಹೊರೆಭಾರವನ್ನು ಅವರು ಹೊತ್ತುಕೊಳ್ಳುವುದಕ್ಕೂ ಆಗುವುದಿಲ್ಲ. ಅದೂ ನಿಜವೇ. ಆದರೆ… ಎಂದರು.
ಆದರೆ ಏನು ಎಂದು ನಾನು ಕೇಳಲಿಲ್ಲ.

ಬಹುಶಃ ಇನ್ನು ಒಂದೆರಡು ವರ್ಷಗಳಲ್ಲಿ ಜರ್ನಲಿಸಂ ಎನ್ನುವುದು ಇರುವುದಿಲ್ಲ. ಇದ್ದರೂ ಅದು ಯಾವ ಮೌಲ್ಯವನ್ನೂ ಹೊಂದಿರುವುದಿಲ್ಲ. ಅವರು ಮಾತನಾಡಿದ ಸುದ್ದಿ, ಇವರು ಬಡಿದಾಡಿದ ಸುದ್ದಿ, ರೂಮರ್ ಗಾಸಿಪ್ ಗಳ ವಿಲೇವಾರಿ ಇಷ್ಟು ಬಿಟ್ಟರೆ ಒಪಿನೀಯನ್ ಮೇಕರ್ ಆಗಿ ಪತ್ರಿಕೆಗಳು ಸತ್ವ ಉಳಿಸಿಕೊಳ್ಳುತ್ತವೆ ಎಂಬ ಯಾವ ನಂಬಿಕೆಯೂ ನನ್ನಲ್ಲಿ ಇಲ್ಲ ಎಂದರು.

ಸಮಾಜದ ಕನ್ನಡಿ ಎಂದೋ ಒಡೆದು ಹೋಗಿದೆ. ಒಡೆದ ಕನ್ನಡಿಯಲ್ಲಿ ಮುಖ ನೋಡಬಾರದು ಅಲ್ಲವೇ ಎಂದು ಹೇಳಿ ಅವರು ಹೋದರು.
ಅವರು ಹೋದ ಬಳಿಕ ನಾನು ಅವರು ಸಾಗಿದ ಆ ರಸ್ತೆಯನ್ನೇ ನೋಡುತ್ತಿದ್ದೆ. ಕಾರಲ್ಲಿ ಕುಳಿತವನು ಕಂಬದಂತಾಗಿದ್ದೆ. ನಾನೂ ಬಹಳ ಕಾಲ ಈ ಕನ್ನಡಿ ಹಿಡಿದುಕೊಂಡು ಅಡ್ಡಾಡಿದ ದಿನಗಳು ನೆನಪಾದವು. ಕನ್ನಡಿ ಮಸುಕಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ನಾನು ಹೊರಗೆ ಬಂದಿದ್ದೆ.

ಹೀಗೇಕಾಯಿತು ಎಂದು ಮೊದಲ ಬಾರಿಗೆ ಸುಮ್ಮನೇ ಯೋಚಿಸಿದೆ.

kannada-journalist-media-fourth-estate-under-loss

ಭಾರತದಲ್ಲಿ ಸುಮಾರು ಹದಿನೆಂಟು ಸಾವಿರ ದಿನಪತ್ರಿಕೆಗಳಿವೆ. ಸುಮಾರು 20,500 ಕೋಟಿ ರೂಪಾಯಿ ಜಾಹೀರಾತು ಮಾರ್ಕೆಟಿಂಗ್ ಇದೆ ಎಂದು ಮೊನ್ನೆ ಮೊನ್ನೆ ಓದಿದ್ದೆ.
ಮೊದಲಿಗೆ ಪತ್ರಿಕೆಗಳ ಉದ್ದೇಶ ಲಾಭ ಮಾಡುವುದು ಆಗಿರಲಿಲ್ಲ. ಪತ್ರಕರ್ತ ಎಂದರೆ ಊಟಕ್ಕೇನು ಮಾಡುತ್ತೀರಿ ಎಂದು ಕೇಳುತ್ತಾರೆ ಎಂಬ ಜೋಕ್ ಪ್ರಚಲಿತದಲ್ಲಿತ್ತು. ಜಾಗತೀಕರಣದ ಬಳಿಕ ಎಲ್ಲ ವರಸೆಗಳೂ ಬದಲಾದವು.ಪತ್ರಿಕೆಗಳ ವೈಖರಿಯೂ ಬದಲಾದವು. ಒಂದೊಂದೂ ಪತ್ರಿಕೆಯೂ ಕಾರ್ಪೋರೇಟ್ ತೆಕ್ಕೆಗೆ ಬಂದವು. ಬಾರದವುಗಳು ಕೂಡಾ ತಮ್ಮ ಶೈಲಿಯನ್ನು ಕಾರ್ಪೋರೇಟ್ ಶೈಲಿಗೆ ಬದಲಾಯಿಸಿಕೊಂಡವು. ಸಂಪಾದಕನ ಮೇಲೊಂದು ಕುರ್ಚಿ ಬಂತು. ಅದರಲ್ಲಿ ಕುಳಿತ ಸಿಇಒ ಪತ್ರಿಕೆಯ ಭಾಷ್ಯವನ್ನೂ ಭವಿಷ್ಯವನ್ನೂ ಒಟ್ಟಿಗೇ ಬರೆಯಲಾರಂಭಿಸಿದ. ಇದು ಸೇವೆಯಲ್ಲ ವ್ಯಾಪಾರ. ನನಗೆ ಲಾಭ ತೋರಿಸಬೇಕು ಅಷ್ಟೇ ಎಂದ. ಲಾಭ ಬರುವುದಾದರೆ ನೀನು ಹೇಳಿದಂತೆ, ಲಾಭ ಬಾರದಿದ್ದರೆ ನಾನು ಹೇಳಿದಂತೆ ಎಂದ.

ಅಲ್ಲಿಂದ ಪತ್ರಿಕೆಗಳ ಪ್ರತಿಯೊಂದು ಸುದ್ದಿಗಳೂ ಸರಕುಗಳಾದವು. ಇವತ್ತಿನ ಪೇಪರ್ ಅನ್ನುವುದು ಇವತ್ತಿನ ಪ್ರಾಡಕ್ಟ್ ಅಂತ ಕರೆಯಲ್ಪಟ್ಟಿತು. ಪ್ರತಿ ಕಾಲಂ ಪ್ರತಿ ಸೆಂಟಿಮೀಟರ್ ಎಷ್ಟು ಫಾಯಿದೆ ಎಂದುಕೊಡುತ್ತದೆ ಎಂಬ ಲೆಕ್ಕ ಶುರುವಾಯಿತು. ಜನರನ್ನು ತಲುಪುತ್ತೇವೆ, ಜನರಿಗಾಗಿ ಮಾಡುತ್ತೇವೆ ಎಂದು ಹೇಳಿಕೊಂಡವರು ಜನರಿಂದ ದೂರವಾಗುತ್ತಾ ಹೋದರು. ನಮ್ಮ ಪತ್ರಿಕೆ ಜನ ಸಾಮಾನ್ಯರ ಅಂತರ್ಯದ ಧ್ವನಿ ಆಗಿದೆಯೋ ಎಂದು ಯಾವತ್ತೂ ಯಾರೂ ಕೇಳಲಿಲ್ಲ. ಫ್ಯಾಶನ್ ಪುಟ ಹಾಕಿದರೆ ಯೂತ್ ಓದುತ್ತಾರೆ, ಕೃಷಿ ಪುಟದಲ್ಲಿ ನಾಲ್ಕು ಲೇಖನ ಹಾಕಿದರೆ ರೈತರು ಕೊಳ್ಳುತ್ತಾರೆ,ಧಾರ್ಮಿಕ ಲೇಖನ ಬರೆದರೆ ಹಿರಿಯರು ಓಡಿ ಬರುತ್ತಾರೆ ಎಂದುಕೊಳ್ಳಲಾಗಿತ್ತು.

ಆದರೆ ಜನ ಆಗಲೇ ಬಹಳ ಮುಂದೆ ಸಾಗಿದ್ದರು. ಇದೂ ಒಂದು ಉದ್ಯಮವಷ್ಟೇ ಬೇರೇನೂ ಇಲ್ಲ ಎಂದು ಗೊತ್ತು ಮಾಡಿಕೊಂಡಿದ್ದರು. ಪತ್ರಿಕೆಗಳಿಂದ ಏನಾದರೂ ಬದಲಾವಣೆ ಆಗುತ್ತದೆ ಎಂದು ನಂಬುವುದನ್ನು ಯಾವತ್ತೋ ಬಿಟ್ಟಿದ್ದರು. ಶಾಸಕ ಸಚಿವರ ಠೊಳ್ಳು ಭಾಷಣಗಳನ್ನು ಇವರು ಖರೀದಿ ಮಾಡಿ ಮುದ್ರಿಸುತ್ತಿದ್ದಾರೆ ಎಂದು ಭಾವಿಸುತ್ತಿದ್ದರು.

kannada-journalist-media-fourth-estate-under-loss

Read between lines ಹೋಗಿ Read between pages ಪರಂಪರೆ ಆಗಲೇ ಶುರುವಾಗಿತ್ತು.
ಈ ಮಾಧ್ಯಮಗಳು ನಮ್ಮ ಪ್ರತಿನಿಧಿಗಳಲ್ಲ, ನಮ್ಮ ಕನಸುಗಳನ್ನು ಇವರ ಹೊಲದಲ್ಲಿ ಬಿತ್ತಿ ಏನೂ ಫಲವಿಲ್ಲ ಎಂದು ಜನಸಾಮಾನ್ಯರು ಹೇಳುತ್ತಿದ್ದರು.

ಹಾಗಾಗಿ ಪತ್ರಿಕೆಗಳ ಯಾವ ವೇಷಗಳನ್ನೂ ಜನರು ಒಪ್ಪಲಿಲ್ಲ. ನಿಧಾನವಾಗಿ ಒಬ್ಬೊಬ್ಬರೇ ಪತ್ರಿಕೆಗಳ ಸಹವಾಸವನ್ನು ತೊರೆಯುತ್ತಾ ಬಂದರು.
ಇಷ್ಟರ ನಡುವೆ ಸೋಶಿಯಲ್ ಮೀಡಿಯಾಗಳ ಪಾರುಪತ್ಯ ಶುರುವಾಗಿತ್ತು. ನನಗೆ ಅನಿಸಿದ್ದನ್ನು ನಾನು ಹೇಳಬಲ್ಲೆ, ನನಗೆ ಬೇಕಾದುದನ್ನು ನಾನು ಹೆಕ್ಕಿ ತೆಗೆಯಬಲ್ಲೆ ಎಂದು ಗೊತ್ತಾಗಿತ್ತು.

ಈ ಕೊರೊನಾ ಕಾಲದಲ್ಲಿ ಆಗಿದ್ದು ಈ ಎಲ್ಲದರ ಕೊನೆಯ ಅವತರಣಿಕೆ.

ನನಗೆ ಪತ್ರಕರ್ತ ಕಣ್ಣಿಗೆ ಕಟ್ಟುತ್ತಾನೆ. ಯಾರದ್ದೆಲ್ಲಾ ನೋವಿಗೆ ಧ್ವನಿಯಾಗಿದ್ದವರು ಈಗ ನಿರುದ್ಯೋಗಿಗಳಾಗಿ ಮನೆ ಸೇರುವಾಗ ಬೆನ್ನ ಹಿಂದೆ ನಿಲ್ಲುವವರು ಬಿಡಿ, ಒಂದು ಸಾಂತ್ವನವನ್ನು ಹೇಳುವವರು ಯಾರೂ ಕಾಣುತ್ತಿಲ್ಲ.
ಕೆಲಸ ಕಳೆದುಕೊಂಡು ಬಂದ ಪತ್ರಕರ್ತನ ಮುಂದೊಂದು ಬಾಗಿಲಿದೆ, ಆ ಬೀಗಕ್ಕೆ ಕೈಯಿಲ್ಲ, ಹಿಂದೆ ತೆರೆಯಿದೆ ಅದನ್ನು ಎತ್ತಿ ನೋಡಲಾಗುವುದಿಲ್ಲ.
ಇದು ಕೊನೆಗೂ Thank Less Job!

( ಕೃಪೆ : ವಾಟ್ಸ್ ಅಪ್ )

 

oooooo

key words : kannada-journalist-media-fourth-estate-under-loss