ರಾಜ್ಯದಲ್ಲಿ ಎಚ್1ಎನ್1 ಹಾವಳಿ ಹೆಚ್ಚಳ

ಬೆಂಗಳೂರು:ಜುಲೈ-25: ಹವಾಮಾನ ಬದಲಾವಣೆ, ಮಳೆಯಿಂದಾಗಿ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳತೊಡಗಿವೆ. ಎಲ್ಲೆಡೆ ಡೆಂಘ, ಚಿಕೂನ್​ಗುನ್ಯಾ ಹೆಚ್ಚಾಗುತ್ತಿದ್ದು, ಜನರು ಜ್ವರದಿಂದ ಕಂಗೆಟ್ಟಿದ್ದಾರೆ. ಇದರ ನಡುವೆ ಮಹಾಮಾರಿ ಎಚ್1ಎನ್1 ಕೂಡ ಹಾವಳಿ ಇಡುತ್ತಿದೆ.

ರಾಜ್ಯದಲ್ಲಿ ಈವರೆಗೆ 1,792 ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ಉಡುಪಿ (321), ಬೆಂಗಳೂರು ನಗರ (244), ದ. ಕನ್ನಡ (204), ಶಿವಮೊಗ್ಗ (158), ಮೈಸೂರು (138) ಮತ್ತು ದಾವಣಗೆರೆಯಲ್ಲಿ 74 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉ.ಕನ್ನಡ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟಾರೆ 88 ಮಂದಿ ಎಚ್1ಎನ್1ಗೆ ಬಲಿಯಾಗಿದ್ದಾರೆ.

ವಾಯುಗಾಮಿ ಎಚ್1ಎನ್1: ‘ಇನ್​ಫ್ಲುಯೆಂಜಾ’ ವೈರಸ್​ನಿಂದ ಹರಡುವ ರೋಗ ವಾಯುಗಾಮಿಯಾಗಿದೆ. ಜ್ವರಪೀಡಿತ ರೋಗಿಯ ಸೀನು, ಕೆಮ್ಮಿನಿಂದ ಹೊರಬರುವ ರೋಗಾಣುಗಳ ಮೂಲಕ ಪರಿಸರಕ್ಕೆ ಹರಡುತ್ತದೆ. ಇದು ಪರಿಸರಲ್ಲಿ ಎರಡು ಗಂಟೆ ಜೀವಿಸಬಲ್ಲದು. ಈ ವೇಳೆ ಇತರರ ಮೂಗು ಅಥವಾ ಬಾಯಿಯಿಂದ ದೇಹ ಪ್ರವೇಶಿಸಿ ಜ್ವರಪೀಡಿತರನ್ನಾಗಿಸುತ್ತದೆ.

ಮೊದಲಿಗೆ ಶ್ವಾಸಕೋಶದ ಮೇಲೆ ದಾಳಿ ಮಾಡುವ ವೈರಸ್ ರಕ್ತದಲ್ಲಿ ಅದರ ಸಂತಾನಾಭಿವೃದ್ಧಿ ಮಾಡುತ್ತದೆ. ಈ ರೋಗವು ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಬೇಗ ಹರಡುತ್ತದೆ. ಪ್ರಾರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಪಡೆದಿದ್ದರೆ ಸಾವು ಸಂಭವಿಸಲಿದೆ. 2009ರಲ್ಲಿ ವಿಶ್ವದೆಲ್ಲೆಡೆ ಕಾಣಿಸಿಕೊಂಡ ಎಚ್1ಎನ್1ಗೆ ರಾಜ್ಯದಲ್ಲಿ 135 ಮಂದಿ ಮೃತಪಟ್ಟಿದ್ದರು. 2018ರ ವೇಳೆಗೆ 87 ಜನರು ಬಲಿಯಾಗಿದ್ದರು. ಪ್ರಸ್ತುತ ದಿನಗಳಲ್ಲೂ ರೋಗದ ತೀವ್ರತೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಮತ್ತು ನಿಯಂತ್ರಿಸುವಲ್ಲಿ ವಿಫಲಗೊಂಡಿದೆ.

ಲಕ್ಷಣ ಮತ್ತು ಮುಂಜಾಗ್ರತೆ ಕ್ರಮ

100 ಡಿಗ್ರಿಗಿಂತಲೂ ಅಧಿಕ ಜ್ವರ, ಕೆಮ್ಮು, ಶೀತ, ಸ್ನಾಯು, ದೇಹಬಾಧೆ, ಗಂಟಲು ನೋವು, ದೇಹ ನಿರ್ಜಲೀಕರಣ, ವಾಂತಿ, ಭೇದಿ, ಹಸಿವಿಲ್ಲದಿರುವುದು ಎಚ್1ಎನ್1ನ ಲಕ್ಷಣಗಳು. ಇದರಿಂದ ಪಾರಾಗಲು ಮುಂಜಾಗ್ರತೆಯೇ ಮೊದಲ ಮದ್ದು. ಮೂಗು ಮತ್ತು ಬಾಯಿಗೆ ಮಾಸ್ಕ್ ಧರಿಸುವುದು, ರೋಗಿ ಬಳಸಿದ ಲೋಟ, ತಟ್ಟೆ ಇತ್ಯಾದಿ ಮುಟ್ಟಿದ ನಂತರ ಬಿಸಿನೀರಿನಲ್ಲಿ ಕೈತೊಳೆದುಕೊಳ್ಳುವುದು, ರೋಗಿಗಳಿಗೆ ಹಸ್ತಲಾಘವ, ಅಪು್ಪಗೆ ನೀಡದೆ ಮುಂಜಾಗ್ರತೆ ಅನುಸರಿಸಬೇಕು.
ಕೃಪೆ:ವಿಜಯವಾಣಿ

ರಾಜ್ಯದಲ್ಲಿ ಎಚ್1ಎನ್1 ಹಾವಳಿ ಹೆಚ್ಚಳ

increase-of-h1n1-plague-in-the-state