ಶಾಲಾ ಶಿಕ್ಷಕರ ಪ್ರತಿಭಟನೆ : ಇಂದು 50,066 ಶಾಲೆ ಬಂದ್

ಬೆಂಗಳೂರು:ಜುಲೈ-9: ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳು ಮಂಗಳವಾರ ಬಂದ್ ಆಗಲಿವೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯದಲ್ಲಿರುವ 50,066 ಶಾಲೆಗಳನ್ನು ಬಂದ್ ಮಾಡಲಿದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ, ಕಾಲಕಾಲಕ್ಕೆ ವರ್ಗಾವಣೆ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಲಾ ಶಿಕ್ಷಕರು ಶಾಲೆಗಳನ್ನು ಮುಚ್ಚಿ ಬೆಳಗ್ಗೆ 10.30ಕ್ಕೆ ಆಯಾ ಜಿಲ್ಲಾ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಿದ್ದಾರೆ.

ಇದೇ ರೀತಿ ಬೆಂಗಳೂರಿನಲ್ಲಿ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಯಲಿದ್ದು, ಮೂರು ಸಾವಿರಕ್ಕೂ ಹೆಚ್ಚಿನ ಶಿಕ್ಷಕರು ಭಾಗವಹಿಸಲಿದ್ದಾರೆ. 1ರಿಂದ 8ನೇ ತರತಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇತ್ತೀಚೆಗೆ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳೊಂದಿಗೆ ಪ್ರಾಥಮಿಕ ಶಿಕ್ಷಣ ಸಚಿವರವನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ, ಸಭೆಯಲ್ಲಿ ಸಚಿವರು ಸಕರಾತ್ಮಕವಾಗಿ ಸ್ಪಂದಿಸದ್ದರಿಂದ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

ಪ್ರಮುಖ ಬೇಡಿಕೆ: 2014ಕ್ಕಿಂತ ಮೊದಲು ನೇಮಕವಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಬಡ್ತಿ ನೀಡಬೇಕು. ಇಲ್ಲವಾದಲ್ಲಿ ಸರ್ಕಾರದ ನೂತನ ನಿಯಮದಿಂದ 10ರಿಂದ 15 ವರ್ಷಗಳಿಂದ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಅನುಭವ-ಅರ್ಹತೆ ಇರುವವರು ಅವಕಾಶ ವಂಚಿತರಾಗುತ್ತಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು ಎಂಬುದೂ ಸೇರಿ ಹಲವಾರು ಬೇಡಿಕೆಗಳಿವೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

ಪತ್ರಿಭಟನೆಗೆ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಕೂಡ ಬೆಂಬಲ ಸೂಚಿಸಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು. 2008ರ ನಂತರ ನೇಮಕವಾಗಿರುವ ಶಿಕ್ಷಕರಿಗೆ ವಾರ್ಷಿಕ ಒಂದು ವಿಶೇಷ ವೇತನ ಬಡ್ತಿ ನೀಡಬೇಕು ಎಂಬುದು ಪ್ರಮುಖ ಒತ್ತಾಯ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಹೇಳಿದ್ದಾರೆ.

ಏಕಕಾಲಕ್ಕೆ ಸಾಂರ್ದಭಿಕ ರಜೆ

ಚಿತ್ರದುರ್ಗ: ಪದವೀಧರ ಶಿಕ್ಷಕರೆಂದು ಪರಿಗಣಿಸಿ, ವೇತನ ಶ್ರೇಣಿ ನಿಗದಿಗೊಳಿಸುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರು ಜುಲೈ 9ರಂದು ನಗರದಲ್ಲಿ ಪ್ರತಿಭಟಿಸಲಿದ್ದಾರೆ. ಜಿಲ್ಲೆಯ 6,866 ಶಿಕ್ಷಕರು ಏಕಕಾಲಕ್ಕೆ ಸಾಂರ್ದಭಿಕ ರಜೆ ಹಾಕಿ ಮುಷ್ಕರದಲ್ಲಿ ಭಾಗವಹಿಸಲಿರುವುದರಿಂದ ಜಿಲ್ಲೆಯ 1649 ಶಾಲೆಗಳು ಬಹುತೇಕ ಬಂದ್ ಆಗುವ ಸಾಧ್ಯತೆಗಳಿವೆ. ಚಳ್ಳಕೆರೆಯಿಂದ ಸಾವಿರ ಶಿಕ್ಷಕರು ಪಾದಯಾತ್ರೆ ಮೂಲಕ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ.

ಪ್ರಮುಖ ಬೇಡಿಕೆಯ ಅಂಶಗಳು

* ಕಾಲಕಾಲಕ್ಕೆ ವರ್ಗಾವಣೆ ನಡೆಸುವುದು
* ಪದವೀಧರ ಶಿಕ್ಷಕರಿಗೆ ಆರರಿಂದ ಎಂಟನೇ ತರಗತಿಗೆ ಬಡ್ತಿ ನೀಡುವುದು
* ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ 50:1ಕ್ಕೆ ನಿಗದಿ ಮಾಡುವುದು
* ಎನ್​ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವುದು
* ಕೃಪಾಂಕ ಶಿಕ್ಷಕರಿಗಾದ ಅನ್ಯಾಯ ಸರಿಪಡಿಸುವುದು
ಕೃಪೆ:ವಿಜಯವಾಣಿ

 

ಶಾಲಾ ಶಿಕ್ಷಕರ ಪ್ರತಿಭಟನೆ : ಇಂದು 50,066 ಶಾಲೆ ಬಂದ್
government-school-teachers-protesting-today