ಜಿ.ಎನ್ ಮೋಹನ್ ಸ್ಪೆಷಲ್ : ‘ಎಲ್ಲಿದ್ದೆ ಇಲ್ಲೀ ತನಕಾ ಎಲ್ಲಿಂದ ಬಂದ್ಯವ್ವಾ..’

‘ಎಲ್ಲಿದ್ದೆ ಇಲ್ಲೀ ತನಕಾ
ಎಲ್ಲಿಂದ ಬಂದ್ಯವ್ವಾ..’
—–

ಬೆಳಕು ಹರಿಯಲು ಇನ್ನೂ ಸಾಕಷ್ಟು ಸಮಯವಿತ್ತು. ಗೂಡಿನಿಂದ ಹಕ್ಕಿಗಳು ಹೊರಬಿದ್ದಿದ್ದವೋ ಏನೋ ಗೊತ್ತಿಲ್ಲ. ಆದರೆ ಆ ವೇಳೆಗೆ ಇವರಂತೂ ಹೊಲದ ಬದುಗಳ ಮೇಲೆ ಹೆಜ್ಜೆ ಹಾಕುತ್ತಾ ಸಾಗಿದ್ದರು.jk-logo-justkannada-logo

ತಲೆಯ ಮೇಲೆ ಮಂಕರಿ. ಹೆಗಲ ಮೇಲೆ ಹಾರೆ ಸನಿಕೆ.. ಆ ದಿನದ ದುಡಿತಕ್ಕೆ ಬೇಕಾದ ಸಲಕರಣೆಗಳೆಲ್ಲಾ ಇತ್ತು.

ನನಗೋ ಹೋರಾಟದ ಹಾಡುಗಳನ್ನು ಬರೆದವರ ನೆನಪು.

ಕೂಲಿಯವರು ನಾವಯ್ಯ ಕೇಳೋ..
ಕೂಳು ಕಾಣದವರು ನಾವಯ್ಯ ಕೇಳೋ…
ಹಾರೆ ಸನಿಕೆ ಮಟ್ಟುಗೋಲು ಭುಜದ ಮೇಲೆ ಹೊತ್ತುಕೊಂಡು,
ಕರಣಿ ಬಾಂಡ್ಲಿ ತೂಗುಗುಂಡು ನೆತ್ತಿ ಮೇಲೆ ಎತ್ತಿಕೊಂಡು..

ಥೇಟ್ ಎಲ್ಲಾ ಹಾಗಾಗೇ ಇತ್ತು.

ಆದರೆ ಅವರ ಮಂಕರಿಯಲ್ಲಿ ಕೇವಲ ಕರಣಿ ಬಾಂಡ್ಲಿ ತೂಗುಗುಂಡು ಮಾತ್ರ ಇರಲಿಲ್ಲ, ಅಲ್ಲಿ ಮೈಕ್ರೋಫೋನ್, ಕೇಬಲ್ ಸಹಾ ಇತ್ತು. ಹೆಗಲ ಮೇಲೆ ಹಾರೆ ಸನಿಕೆ ಮಾತ್ರ ಇರಲಿಲ್ಲ, ಕ್ಯಾಮೆರಾ, ಟ್ರೈಪಾಡ್ ಸ್ಟಾಂಡ್ ಸಹಾ ತೂಗುತ್ತಿತ್ತು.

ಇವರು ಕೂಲಿಗೆ ಮಾತ್ರ ಹೋಗುತ್ತಿರಲಿಲ್ಲ..ಬದಲಿಗೆ ಕೂಲಿಯವರ ಧಾರುಣ ಕಥೆಯನ್ನು ಸಾರಲೂ ಹೋಗುತ್ತಿದ್ದರು.

ಇದು ಆಂಧ್ರಪ್ರದೇಶದ ಮೇಡಕ್ ನಲ್ಲಿ ಮಾತ್ರ ಕಾಣುವ ದೃಶ್ಯ.

ಇಪ್ಪಳಪಲ್ಲಿ ಮಲ್ಲಮ್ಮ, ಜಹೀರಾಬಾದ್ ಪುಣ್ಯಮ್ಮ, ಹುಮ್ನಾಪುರ ಲಕ್ಷ್ಮಿ, ಪಾಸ್ತಾಪುರ ನರಸಮ್ಮ, ಬೋಪನಪಲ್ಲಿ ನಾಗಮ್ಮ, ಈಡುಲಪಲ್ಲಿ ಮಂಜುಳಾ.. ಇವರು ಕ್ಯಾಮೆರಾ ಹೆಗಲಿಗೇರಿಸಿ ಹೊರಟರೆ ಸಾಕು ಇವತ್ತು ಕೇವಲ ಇವರ ಊರವರು ಮಾತ್ರವಲ್ಲ, ಯುನೆಸ್ಕೋ ಸಹಾ ಇವರು ಹೊತ್ತು ತರುವ ಸುದ್ದಿಗಳನ್ನು ಕಾಯುತ್ತದೆ.

ಇವರು ಕ್ಯಾಮೆರಾ ಹೊತ್ತು ಹೊರಟರೆ ಕೇವಲ ಆಂಧ್ರ ಪ್ರದೇಶ ಮಾತ್ರವಲ್ಲ ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ… ಹೀಗೆ ಇವರ ಕ್ಯಾಮೆರಾ ಕಣ್ಣಿನ ಕಥೆ ಕೇಳಲು ಕಾತರದಿಂದ ಕಾಯುತ್ತವೆ.

ಇವರ ಕಥೆಯನ್ನು ಕೇವಲ ಒಂದು ಹಳ್ಳಿಯ ಹತ್ತಾರು ಜನರಲ್ಲ ದೇಶದ ನೀತಿ ರೂಪಕರು ನೋಡುತ್ತಾರೆ.

‘ನನ್ನ ಕಥೆ ನನ್ನದು’ ಎಂದು ಲಕ್ಷ್ಮಮ್ಮ ಜರ್ಮನಿಯ ಬಾನ್ ನಲ್ಲಿ ದೊಡ್ಡ ದನಿಯಲ್ಲಿ ಹೇಳಿದಾಗ ಇಡೀ ಸಭಾಂಗಣ ಬೆಚ್ಚಿ ಬಿತ್ತು.

ಎಲ್ಲಿಯ ಪಾಸ್ತಾಪುರದ ಲಕ್ಷ್ಮಮ್ಮ, ಎಲ್ಲಿಯ ಬಾನ್?.

ಹೊಲದಲ್ಲಿ ಕೂಲಿ ಸಿಗದೇ ನಿಟ್ಟುಸಿರಿಡುತ್ತಿದ್ದ ಲಕ್ಷ್ಮಮ್ಮ, ಮಲ್ಲಮ್ಮ, ನರಸಮ್ಮ ತಮ್ಮ ಕೈನಲ್ಲಿದ್ದ ಕುಡುಗೋಲನ್ನು ಪಕ್ಕಕ್ಕಿಟ್ಟವರೇ ಕ್ಯಾಮೆರಾ ಕೈಗೆತ್ತಿಕೊಂಡರು.

ಕಳೆ ಕೀಳುತ್ತಿದ್ದ ಕೈಗಳು ಈಗ ಮೈಕ್ರೋಫೋನ್ ಹಿಡಿದವು.

ತಮ್ಮ ಊರಿನ ನೋವಿನ ಕಥೆಗಳನ್ನು ತಾವೇ ಬಣ್ಣಿಸುತ್ತಾ ಹೋದರು.

ರೆಡಿ, ಆಕ್ಷನ್, ಕಟ್ದ ನಿಗಳೇ ಇರಲಿಲ್ಲ.

ಎಲ್ಲಾ ನರಸಮ್ಮಂದಿರಿಗೂ, ಎಲ್ಲಾ ನಾಗಮ್ಮಂದಿರಿಗೂ ಹೇಳಿಕೊಂಡರೂ ಮುಗಿಯಲಾಗದ ಕಥೆಗಳಿದ್ದವು.

ಹಾಗಾಗಿ ಅವರು ಹೊತ್ತು ತಂದ ನೋವಿನ ಕಥೆಗಳೇ ಸಾಕ್ಷ್ಯ ಚಿತ್ರಗಳಾದವು. ಹಾಗೆ ಅವರು ಹೇಳಿದ ಕಥೆಗಳು ಬಾನ್ ನ ತೆರೆಯ ಮೇಲೆ ಕಂಡದ್ದೇ ಜನ ನಿಟ್ಟುಸಿರಾದರು.

ನನ್ನ ಕಥೆಯನ್ನು ನಾನಲ್ಲದೇ ಯಾರು ಹೇಳಲು ಸಾಧ್ಯ? ಎಂದು ಲಕ್ಷ್ಮಮ್ಮ ಕೇಳಿದಾಗ ಅಲ್ಲ ಎನ್ನುವವರು ಅಲ್ಲಿರಲಿಲ್ಲ.

ಹಾಗೆ ಕೆಂಡದ ಮೇಲೆ ನಡೆದವರೇ ತಮ್ಮ ಕಥೆಗೆ ಬಾಯಿ ಕೊಡಬೇಕು ಎಂದು ಕಂಡುಕೊಂಡದ್ದು ‘ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ’

ಮೇಡಕ್ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯದ್ದೇ ಒಂದು ಯಶೋಗಾಥೆ.

ಕಳೆದ ಕಾಲು ಶತಮಾನಕ್ಕೂ ಹೆಚ್ಚು ಕಾಲದಿಂದ ಈ ಸಂಸ್ಥೆ ಆಂಧ್ರದ ಬಡ ಹಾಗೂ ದಲಿತ ಹೆಣ್ಣುಮಕ್ಕಳ ಜೊತೆ ದುಡಿಯುತ್ತಿದೆ. ಈ ಹೆಂಗಸರನ್ನು ಸೇರಿಸಿ ಸಂಘ ಹೆಸರಿನಲ್ಲಿ ಸಂಘಟನೆ ರೂಪಿಸಿದೆ.

ಈ ಸಂಘಟನೆಯ ಮೂಲ ಉದ್ಧೇಶ ಅಳಿಸಿ ಹೋಗುತ್ತಿರುವ ಪಾರಂಪರಿಕ ಬೆಳೆಗಳನ್ನು ಬದುಕುಳಿಸುವುದು. ಅಲ್ಲಿಂದ ಆರಂಭವಾದ ಕೆಲಸ ಈಗ ಹಾಳು ಬಿದ್ದ ನೆಲವನ್ನು ಸಂರಕ್ಷಿಸುವುದರಿಂದ ಹಿಡಿದು ಭೂ ಒಡೆತನದ ಪ್ರಶ್ನೆಗಳನ್ನೂ ಕೈಗೆತ್ತಿಕೊಂಡಿದೆ.

ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ ಈಗ ಹತ್ತು ಹಲವು ದಿಕ್ಕುಗಳಲ್ಲಿ ಹರಡಿ ನಿಂತಿದೆ. ಅದರ ಒಂದು ಭಾಗವೇ ಈ ‘ಕಮ್ಯುನಿಟಿ ಮೀಡಿಯಾ ಟ್ರಸ್ಟ್’.

ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ಹಿಂದಿನ ಚಾಲಕ ಶಕ್ತಿಯಾದ ಪಿ ವಿ ಸತೀಶ್ ಅವರಿಗೆ ಇದೆಲ್ಲಾ ಹೇಗೆ ಸಾಧ್ಯವಾಯಿತು? ಎಂದು ಕೇಳಿದರೆ ಅವರು ಬೊಟ್ಟು ಮಾಡುವುದೇ ಈಗಿನ ಮಾಧ್ಯಮ ವ್ಯವಸ್ಥೆಯನ್ನು.

ಮಾಧ್ಯಮ ಸ್ವಾತಂತ್ರ್ಯ ಇದೆ ಎನ್ನುವುದನ್ನೇ ಸತೀಶ್ ನಿರಾಕರಿಸುತ್ತಾರೆ.

ಈಗಿರುವುದು ಯಾರ ಮಾಧ್ಯಮ? ಯಾರ ಸ್ವಾತಂತ್ರ್ಯ?. ಇವತ್ತಿನ ಮಾಧ್ಯಮದಲ್ಲಿ ಸ್ಥಳೀಯರಿಗೆ, ಗ್ರಾಮೀಣ ಸಮುದಾಯಕ್ಕೆ, ಬಡವರಿಗೆ, ರೈತರಿಗೆ ಅವಕಾಶ ಎಲ್ಲಿದೆ? ಸುಮಾರು 650 ದಶಲಕ್ಷ ಮಂದಿ ಈ ವರ್ಗದವರಿದ್ದಾರೆ. ಇದಕ್ಕೆ ಮಹಿಳೆಯರನ್ನೂ ಸೇರಿಸಿಕೊಳ್ಳಿ ಅವರಿಗೆ ಮಾಧ್ಯಮದಲ್ಲಿ ಏನಾದರೂ ಬೆಳಕಿನ ಕಿರಣಗಳಿವೆಯೇ? ಎಂದು ಪ್ರಶ್ನಿಸುತ್ತಾರೆ.

ಇಂದಿನ ಮಾಧ್ಯಮಗಳಿಗೆ ಆ ಬೆಳಕಿನ ಕಿರಣಗಳನ್ನು ನೀಡುವ ಮನಸ್ಸಿಲ್ಲ ಎಂದಾಗ ತಾವೇ ಆ ಕಿರಣಗಳನ್ನು ಬೆನ್ನತ್ತಲು ಹುಟ್ಟಿಕೊಂಡದ್ದು  ಕಮ್ಯುನಿಟಿ ಮೀಡಿಯಾ ಟ್ರಸ್ಟ್

ಅಕ್ಷರ ಗೊತ್ತಿಲ್ಲದವರಿಗೆ ದೃಶ್ಯ ಮಾಧ್ಯಮ ಬಹುಬೇಗ ಕೈಗೆಟುಕುತ್ತದೆ ಎಂದು ಕಂಡುಕೊಂಡ ಸತೀಶ್ ತಮ್ಮ ಗೆಳೆಯರೊಂದಿಗೆ ಸೇರಿ ಒಂದು ವಿಡಿಯೋ ಕಾರ್ಯಾಗಾರ ನಡೆಸಿದರು.

ಕುತೂಹಲಕ್ಕಾಗಿ ಬಂದ ಮಹಿಳೆಯರ ಗುಂಪು ನಿಧಾನವಾಗಿ ಮೈಕ್ ಹಿಡಿಯಿತು, ನಂತರ ಕ್ಯಾಮೆರಾ ಮುಟ್ಟಿದರು, ಆ ನಂತರ ಶಾಟ್ ಗಳ ಬಗ್ಗೆ ಮಾತನಾಡಲು ಆರಂಭಿಸಿದರು. ಅಲ್ಲಿಗೆ ಹೊಸ ದಿಕ್ಕಿನತ್ತ ಪಯಣ ಆರಂಭವಾಗಿ ಹೋಗಿತ್ತು.

ಆ ವೇಳೆಗೆ ಊರಿನಲ್ಲಿ ಇನ್ನಿಲ್ಲದ ಅಕಾಲಿಕ ಮಳೆ ಇದ್ದ ಪೈರುಗಳೆಲ್ಲಾ ಕೊಚ್ಚಿ ಹೋದವು. ಆತಂಕಗೊಂಡ ರೈತರ ಕಥೆಯತ್ತ ಈ ಮಹಿಳೆಯರು ಕ್ಯಾಮೆರಾ ತಿರುಗಿಸಿದರು. ಅಕ್ಷರ ಗೊತ್ತಿಲ್ಲದಿರಬಹುದು ಆದರೆ ಇವರಿಗೆ ಮಾತು ಗೊತ್ತಿರಲಿಲ್ಲವೆ, ತಮ್ಮ ಕಥೆ ಹೇಳುತ್ತಾ ಹೋದರು.

ನಿಲ್ಲದು ನಿಲ್ಲದು ಪಯಣ.. ನಮ್ಮದು ಸುದೀರ್ಘ ಪಯಣ.. ಎನ್ನುವ ಹಾಡಿನಂತೆ ಇವರ ನಿಲ್ಲದ ಪಯಣವೂ ಆರಂಭವಾಗಿ ಹೋಯಿತು.

ಇವರ ಕಥೆ ಇವರಿಗೆ ಸೇರಿದ್ದು, ಕಥೆಯ ನಿರೂಪಣೆಯಲ್ಲಿ ಪ್ರಾಮಾಣಿಕತೆ ಇತ್ತು, ವ್ಯವಸ್ಥೆ ಬದಲಾಗಬೇಕೆಂಬ ನಿಜ ಕಳಕಳಿಯಿತ್ತು. ಸಮಸ್ಯೆ ಎಷ್ಟು ಆಳವಾದದ್ದು, ತೊಂದರೆ ಎಲ್ಲಿಂದ ಎನ್ನುವ ವಿಶ್ಲೇಷಣೆ ಇತ್ತು.

ಇದನ್ನು ಕಂಡುಕೊಂಡ ದೂರದರ್ಶನ ಹಾಗೂ ಈಟಿವಿ ಇವರ ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಲು ಮುಂದೆ ಬಂತು.

ಇದು ಈ ದೃಶ್ಯ ಚಳವಳಿಗೆ ಇನ್ನಿಲ್ಲದ ಕುಮ್ಮಕ್ಕು ನೀಡಿತು. ಚಿನ್ನನರಸಮ್ಮ, ಹುಮ್ನಾಪುರ ಲಕ್ಷ್ಮಮ್ಮ, ಮಸ್ಲಿಗಿರಿ ಕವಿತಾ, ಬೇಗಾರಿ ಮಲ್ಲಮ್ಮ.. ಹೀಗೆ ಇನ್ನಷ್ಟು ಮತ್ತಷ್ಟು ಬಡ, ಕೂಲಿಕಾರ ಮಹಿಳೆಯರು ಕ್ಯಾಮೆರಾ ಹಿಡಿದರು.

ರಾಗಿ ಬೀಸುವ ಕಡೆ, ನೇಜಿ ನೆಡುತ್ತಿದ್ದಲ್ಲಿ, ಬಾಲವಾಡಿಯಲ್ಲಿ ಮಕ್ಕಳು ಆಡುವಾಗ, ಕಣ ಮಾಡುವಾಗ, ಬೀಜ ಹಂಚಿಕೊಳ್ಳುವಾಗ, ಅಷ್ಟೇ ಅಲ್ಲ ಊರಿಗೆ ಅಧಿಕಾರಿಗಳು ಭೇಟಿ ಕೊಟ್ಟಾಗ, ದಾಖಲೆಗಳನ್ನು ಪರಿಶೀಲಿಸುವಾಗ, ಅಹವಾಲು ಕೇಳುವಾಗ.. ಇವರ ಕ್ಯಾಮೆರಾ ಸುತ್ತತೊಡಗಿತು.

ಬೀಜ ಸಂರಕ್ಷಣೆ, ಸಾವಯವ ಕೃಷಿ, ಬಿ ಟಿ ದಾಳಿ, ಸಿರಿ ಧಾನ್ಯ, ಪರ್ಯಾಯ ಬೆಳೆ, ಸಾರ್ವಜನಿಕ ಪಡಿತರ ವ್ಯವಸ್ಥೆ ಎಲ್ಲವೂ ಇವರ ಕಣ್ಣಲ್ಲಿ ಕಂಡಂತೆ ಹೊರಬರುತ್ತದೆ.

ಇದು ಕೇವಲ ಭಾರತದಲ್ಲಿನ ಅಚ್ಚರಿ ಮಾತ್ರವಲ್ಲ ಜಗತ್ತಿನ ಅಚ್ಚರಿ ಕೂಡಾ.GN Mohan Special.

ಹಾಗಾಗಿಯೇ ಇವರ ಸಾಕ್ಷ್ಯಚಿತ್ರ ಹಾಗೂ ಕೆಲಸವನ್ನು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಇವರು ತಯಾರಿಸಿದ 12 ಸಾಕ್ಷ್ಯ ಚಿತ್ರಗಳ ಗುಚ್ಚವನ್ನು ಬಿಡುಗಡೆ ಮಾಡಲು ಪೆರು, ಲಂಡನ್, ಫಿಲಿಫೈನ್ಸ್, ಕೆನ್ಯ, ಮಾಲಿ, ಜರ್ಮನಿ, ಇಂಡೋನೇಷಿಯಾ ಸಹಾ ನೆಲ ಒದಗಿಸಿದವು.

ಹೀಗೆ ಎಲ್ಲೆಡೆ ತಮ್ಮ ಸಾಕ್ಷ್ಯಚಿತ್ರ ಬಿಡುಗಡೆ ಮಾಡುತ್ತಾ, ತಮ್ಮ ಕಥೆ ಹೇಳುತ್ತಾ ಈ ಮಹಿಳೆಯರು ಬೆಂಗಳೂರಿಗೂ ಬಂದಿಳಿದರು.,

ಸಾಕ್ಷ್ಯ ಚಿತ್ರಗಳ ಬಿಡುಗಡೆಯಂತೆ ಎನ್ನುವ ಕಾರಣಕ್ಕೆ ಬೆಂಗಳೂರಿನ ಹಲವಾರು ಕಾಲೇಜುಗಳ ಎಲೆಕ್ಟ್ರಾನಿಕ್ ಮಾಧ್ಯಮದ ವಿದ್ಯಾರ್ಥಿಗಳು ಗುಂಪುಗಟ್ಟಿ ಬಂದರು.

ಅವರು ಕಾರ್ಯಕ್ರಮದ ಅಂಗಳಕ್ಕೆ ಬರುವ ವೇಳೆಗಾಗಲೇ ಲಕ್ಷ್ಮಮ್ಮ ತನ್ನ ಕೈನಲ್ಲಿ ಕ್ಯಾಮೆರಾ ಹಿಡಿದು ಆ ವಿದ್ಯಾರ್ಥಿಗಳನ್ನು ಸೆರೆ ಹಿಡಿಯುತ್ತಿದ್ದರು. ಒಳಗೆ ನರಸಮ್ಮ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಬೇಕಾದ ಪ್ರೊಜೆಕ್ಟರ್ ಹೊಂದಿಸುತ್ತಿದ್ದರು. ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿ ನಿಂತಿದ್ದರು.

ನಾಳಿನ ಟಿ ವಿ ಚಾನಲ್ ಗಳ ವರದಿಗಾರರು ತಮ್ಮ ಕಣ್ಣ ಮುಂದೆ ನಿಂತಿದ್ದ ಆ ರೈತ, ಕೂಲಿಕಾರ ಮಹಿಳೆಯರನ್ನು ಕಂಡು ನಿಬ್ಬೆರಗಾಗಿದ್ದರು.

ಆ ನಿಬ್ಬೆರಗಿನ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಲಕ್ಷ್ಮಮ್ಮ ಪಟ ಪಟನೆ ಉತ್ತರ ನೀಡುತ್ತಿದ್ದರು.

ಪ್ಯಾನ್, ಜೂಮ್, ಟಿಲ್ಟ್: ಎಲ್ಲವೂ ನಾಲ್ಕು ಗೋಡೆಯ ನಡುವಣ ಪಾಠ ಮಾತ್ರವಲ್ಲ ಎನ್ನುವುದು ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಗೊತ್ತಾಗಿತ್ತು.

ಅಲ್ಲಿ ಇನ್ನೂ ಒಂದು ಅಚ್ಚರಿಯಿತ್ತು. ಹಾಗೆ ಲಕ್ಷ್ಮಮ್ಮ ಆ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವುದನ್ನು 8 ವರ್ಷದ ಪುಟ್ಟ ಪೋರಿಯೊಬ್ಬಳು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಳು.

‘ಎಲ್ಲಿದ್ದೆ ಇಲ್ಲೀ ತನಕಾ ಎಲ್ಲಿಂದ ಬಂದ್ಯವ್ವಾ..’ ಎನ್ನುವ ಗೀತೆ ನನ್ನ ಕಿವಿಯಲ್ಲಿ…