ಸಿದ‍್ಧರಾಮಯ್ಯ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಮುಂದೆ ಓಪನ್ ಆಫರ್ ಇಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

 

ಮೈಸೂರು,ಜೂನ್,7,2022(www.justkannada.in): ಜೆಡಿಎಸ್ ಗೆ ನೈತಿಕತೆ ಇದ್ರೆ ಕಾಂಗ್ರೆಸ್ ಗೆ ಬೆಂಬಲ ನೀಡಲಿ ಎಂದು ಹೇಳಿಕೆ ನೀಡಿದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ  ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿ ರಾಜ್ಯಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ಮುಂದೆ ಓಪನ್ ಆಫರ್ ಇಟ್ಟಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಹೇಳಿಕೆ ಗಮನಿಸಿದ್ದೇನೆ. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನ ಚುನಾವಣಾ ಕಣದಿಂದ ನಿವೃತ್ತಿಗೊಳಿಸಿ. ಬಿಜೆಪಿ ಸೋಲಿಸಲು ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡಿ ಅಂದಿದ್ದಾರೆ. ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರಿಗೆ ಬೆಂಬಲ ಕೊಟ್ಟಿದ್ದವು. ದೇವೇಗೌಡರು ಪ್ರಧಾನಿಯಾದಾಗ, ನಾನು ಸಿಎಂ ಆದಾಗ ಬೆಂಬಲ ಕೊಟ್ಟಿದ್ದೆ ಅಂದಿದ್ದಾರೆ. ಅವರಿಗೆ ನಿಜಕ್ಕೂ ಬಿಜೆಪಿ ಸೋಲಬೇಕು ಅನ್ನುವುದಿದ್ದರೆ ಚುನಾವಣಾ ಪೂರ್ವದಲ್ಲೇ ಚರ್ಚೆ  ಮಾಡುತ್ತಿದ್ದರು.  ನಮ್ಮ ಜೊತೆ ಚರ್ಚೆ ಮಾಡದಿದ್ರೂ ನಮ್ಮಪಕ್ಷದ ಕೆಲವರ ಜೊತೆ ಚರ್ಚೆ ಮಾಡಬಹುದಿತ್ತು. ಆದರೆ ಯಾವ ಕಾಂಗ್ರೆಸ್ ನಾಯಕರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ನಮ್ಮಲ್ಲಿ 32 ಮತಗಳಿಗೆ ಹಾಗಾಗಿ ಅಭ್ಯರ್ಥಿ ಹಾಕಿದ್ದೇವೆ. ಹೆಚ್.ಡಿ.ದೇವೇಗೌಡರು ಸೋನಿಯಾಗಾಂಧಿ ಜೊತೆ ಮಾತನಾಡಿದ್ದಾರೆ. ಕುಪೇಂದ್ರ ರೆಡ್ಡಿ ಹಿಂದೆ ಸೋನಿಯಾ ಗಾಂಧಿಯವರ ಜೊತೆ ಸಹಕಾರ ಕೊಟ್ಟು ಕೆಲಸ ಮಾಡಿದ್ದಾರೆ. ಹಾಗಾಗಿ ದೇವೇಗೌಡ್ರು ಮನವಿ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಮುಂದೆ ಓಪನ್ ಆಫರ್ ಇಟ್ಟ ಹೆಚ್ ಡಿ ಕುಮಾರಸ್ವಾಮಿ

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸುವ ಪ್ರಶ್ನೆಯೇ ಇಲ್ಲ. ನಮ್ಮ ಬಳಿ 32 ಮತಗಳಿವೆ, ಕಾಂಗ್ರೆಸ್ ಬಳಿ ನಮಗಿಂತ ಕಡಿಮೆ ಮತಗಳಿವೆ. ಕಾಂಗ್ರೆಸ್ ಗಿಂತ ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಬೇಕಿದ್ದರೇ ನಮ್ಮ ಪಕ್ಷದ 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ ಎಂದು ಹೇಳುವ ಮೂಲಕ ಹೆಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಬಳಿ ಹೊಸ ಆಫರ್ ಮುಂದಿಟ್ಟರು.

ಕಾಂಗ್ರೆಸ್ ರಾಜ್ಯಸಭಾ ಚುನಾವಣೆಗೆ 2ನೇ ಅಭ್ಯರ್ಥಿ ನಿಲ್ಲಿಸದಿದ್ದರೆ ಬಿಜೆಪಿಯಿಂದ 3ನೇ ಅಭ್ಯರ್ಥಿ  ಹಾಕುತ್ತಿರಲಿಲ್ಲ. ದೇವೇಗೌಡರು ಹಿರಿಯರು, ನಿಮ್ಮಂತವರು ರಾಜ್ಯಸಭೆಗೆ ಬೇಕು ಅಂತಾ ಬಿಜೆಪಿ ಅವರೇ ಒತ್ತಾಯ ಮಾಡಿದ್ರು. ಬಿಜೆಪಿ ಅವರು ಅಭ್ಯರ್ಥಿ ಹಾಕಿಲ್ಲ ಅಂತಾ ಕಾಂಗ್ರೆಸ್  ನವರು ಅಭ್ಯರ್ಥಿ ಹಾಕಿಲ್ಲ. ಸುರ್ಜೆವಾಲ ಅವರು ಎರಡನೇ ಪ್ರಾಶಸ್ತ್ಯದ ಮತ ಕೊಡಿ ಅಂತಾ ಪೊನ್ ಕರೆ ಮಾಡಿ ಕೇಳಿದ್ರು ಎಂದು ವಿವರಿಸಿದರು.

ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ  ಕಾಂಗ್ರೆಸ್ ಪಾತ್ರ ಇಲ್ಲ. ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಅಷ್ಟೊಂದು ಗೌರವ ಇದ್ದಿದ್ದರೇ‌ ಅಲ್ಪ ಸಂಖ್ಯಾತರನ್ನೇ ಮೊದಲ ಅಭ್ಯರ್ಥಿ ಮಾಡಬೇಕಿತ್ತು. ಮೂರನೇ ಬಾರಿಗೆ ಹಾಕಿರೋ ಮೊದಲನೇ ಅಭ್ಯರ್ಥಿಯ ಕೊಡುಗೆ ಏನು…? ಓಟ್ ಬರೋಲ್ಲ ಅಂತಾ ಮನ್ಸೂರ್ ಅವರನ್ನ ಎರಡನೇ ಅಭ್ಯರ್ಥಿ ಮಾಡಿದ್ದೀರಿ. ಫಾರುಕ್ ಅವ್ರನ್ನ ನಾವು ನಿಲ್ಲಿಸಿದ್ದಾಗ. ನಮ್ಮವರನ್ನ ಏಳು ಮಂದಿಯನ್ನ ಹೈಜಾಕ್ ಮಾಡಿ 7 ಮತ ಹಾಕಿಸಿಕೊಂಡಿದ್ರಿ. ಇದು ಆತ್ಮಸಾಕ್ಷಿಯ ಮತಗಳೇ ಎಂದು ಹೆಚ್.ಡಿಕೆ ಪ್ರಶ್ನಿಸಿದರು.

ಮನ್ಸೂರ್ ಖಾನ್ ಅವರನ್ನ ಹಾಕುವ ಮೊದಲೇ ನಮ್ಮ ಜೊತೆ ಚರ್ಚೆ ಮಾಡಬೇಕಿತ್ತು. ನಾವು ನಿಮ್ಮ ಗುಲಾಮರಾ..? ಬಿಜೆಪಿ ಬಿ ಟೀಂ ಅಂತಾ ಹೇಳಿ ಹೇಳಿ ಬಿಜೆಪಿ ಅಧಿಕಾರಕ್ಕೆ ತಂದವರು ನೀವು. ಈ ಕಾರಣಕ್ಕಾಗಿಯೇ ನೀವು 70ಕ್ಕೆ ಇಳಿದಿದ್ದು. ನೀವೇನೋ ಸೆಕ್ಯೂಲರಿಜಂ ಉಳಿಸೋದು. ನಾವೇನು ಕಡುಬು ತಿಂತಿದ್ದಿವಾ?. ದೇವೇಗೌಡರು ಪ್ರಧಾನ ಮಂತ್ರಿ ಆಗಿದ್ದಾಗ ನೀವು ಎಲ್ಲಿದ್ರಿ ಎಂದು ಹೆಚ್.ಡಿಕೆ ಕಿಡಿಕಾರಿದರು.

ನಿನ್ನೆ ಬೆಂಗಳೂರಿನಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ,  ಯಾವ ಉದ್ದೇಶಕ್ಕಾಗಿ ನಿನ್ನೆ ಭೇಟಿ ಮಾಡಿದ್ರಿ. ಅದು ವಿಐಪಿ ರೂಂ ಅಲ್ಲಿ ಯಾರೂ ಹೋಗೋಕೆ ಸಾಧ್ಯವಿಲ್ಲ. ನಿಮ್ಮ ಹಿಂಬಾಲಕರ ಮೂಲಕವೇ ಪೋಟೋ ವಿಡಿಯೋ ರಿಲೀಸ್ ಮಾಡಿಸಿದ್ರಿ. ಇದು ಆತ್ಮಸಾಕ್ಷಿಯ ಮತ ಪಡೆಯುವ ಉದ್ದೇಶವೇ ಎಂದು ಹರಿಹಾಯ್ದರು.

ರೈತರ ಸಾಲ ಮನ್ನಾ ಮಾಡಿದ ಬಳಿಕ ಸಿಎಂ ಕುರ್ಚಿಯಿಂದ ಕೆಳಗಿಳಿದೆ. ಅದಕ್ಕಾಗಿಯೇ ಅಮೇರಿಕಾಗೆ ಹೋಗಿದ್ದೆ. ರೈತರ ಸಾಲಮನ್ನಾ ಮಾಡುವ ಗುರಿ ನನ್ನದಾಗಿತ್ತು. ರೈತರ 25 ಸಾವಿರ ಕೋಟಿ ಸಾಲ ಮಾಡಿದ ಬಳಿಕ ಕುರ್ಚಿಯಿಂದ ಕೆಳಗಿಳಿದೆ ಎಂದರು.

Key words: Former CM -HD Kumaraswamy-open offer- Congress-rajyasabha-election