ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಯುವತಿ ದೂರು: ದೂರಿನಲ್ಲೇನಿದೆ ಗೊತ್ತೆ..?

ಬೆಂಗಳೂರು,ಮಾರ್ಚ್,26,2021(www.justkannada.in):   ರಮೇಶ್​ ಜಾರಕಿಹೊಳಿ ಸಿಡಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ನೀಡಿದ್ದಾರೆ.jk

ವಕೀಲರಾದ ಜಗದೀಶ್ ಮೂಲಕ ಯುವತಿ ದೂರು ನೀಡಿದ್ದಾರೆ. ಯುವತಿ ರವಾನಿಸಿರುವ ದೂರಿನ ಪ್ರತಿಯನ್ನು ವಕೀಲ ಜಗದೀಶ್ ಇಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ನೀಡಿದ್ದಾರೆ.  ಇನ್ನು ರಮೇಶ್ ಜಾರಕಿಹೊಳಿ ಕೆಲಸ ಕೊಡಿಸುವುದಾಗಿ ತನ್ನ ಲೈಂಗಿಕವಾಗಿ ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಯುವತಿ ಪರವಾಗಿ ವಕೀಲ ಜಗದೀಶ್​ ಅವರು ಸಲ್ಲಿರುವ  ದೂರಿನ ಪ್ರತಿಯಲ್ಲಿ ಯುವತಿ ಉಲ್ಲೇಖಿಸಿರುವ ಅಂಶಗಳು ಈ ಕೆಳಕಂಡಂತಿದೆ.

ನಾನು ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದ್ದು, ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ. ಅವರು ನನ್ನ ಮೊಬೈಲ್ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದ್ದರು.

ನಂತರ ಕರೆ ಮಾಡಿ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ವಿಚಾರಿಸಿ ಸಲುಗೆಯಿಂದ ಮಾತನಾಡಲು ಆರಂಭಿಸಿದರು. ಸಚಿವರು ನನ್ನನ್ನು ಅಷ್ಟು ಕಾಳಜಿಯಿಂದ ಮಾತನಾಡಿಸಿದ್ದು ಕಂಡು ಖುಷಿಯಾಗಿ ಅವರನ್ನು ಗೌರವದಿಂದ ಮಾತನಾಡಿಸಿದ್ದೆ. ಹಾಗಾಗಿ ನನಗೆ ಕರೆ ಮಾಡಿ ಮಾತನಾಡಲು ಆರಂಭಿಸಿದರು. ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದ್ದರು. ಅದಕ್ಕೆ ಬದಲಾಗಿ ನೀನು ನನ್ನ ಜತೆ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಕೇಳಿದ್ದರು.

ಅವರನ್ನು ಟಿವಿಗಳಲ್ಲಿ ನೋಡಿದ್ದು, ಮಂತ್ರಿ ಹೇಳಿದ ಮೇಲೆ ಕೆಲಸ ಕೊಟ್ಟೆ ಕೊಡಿಸುತ್ತಾರೆ ಎಂದು ನಾನು ನಂಬಿದೆ. ನನ್ನ ಬಳಿ ಕೊಡಲು ಲಕ್ಷಾಂತರ ಹಣ ಇಲ್ಲದೇ ಇರುವುದನ್ನು ಮುಂಚಿತವಾಗಿ ತಿಳಿದು ಕೊಂಡು ಹಣದ ಬದಲು ಅವರ ಜತೆ ಸಹಕರಿಸಿ ಖುಷಿ ನೀಡಬೇಕೆಂದು ಕೇಳಿದ್ದರು.

ಅವರನ್ನು ನಂಬಿ ಅವರು ಹೇಳಿದಂತೆ ನಡೆದುಕೊಂಡೆ. ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೇನೆ ಎಂದು ಹೇಳಿ ವಿಡಿಯೋ ಕರೆ ಮಾಡಿ ನನ್ನೊಂದಿಗೆ ಅಶ್ಲೀಲವಾಗಿ ಲೈಂಗಿಕ ವಿಚಾರಗಳನ್ನು ಮಾತನಾಡಿದರು. ನಾನು ಅವರು ಹೇಳಿದಂತೆ ಮಾಡಿದೆ. ಪ್ರಭಾವಿ ವ್ಯಕ್ತಿಯಾಗಿದ್ದ ಕಾರಣಕ್ಕೆ ಅವರು ಹೇಳಿದಂತೆ ನಡೆದುಕೊಂಡೆ. cd case- Woman -complains -against -former minister- Ramesh jarakiholi.

ನಾನು ಬೆಂಗಳೂರಿಗೆ ಬಂದಾಗ ನಿನ್ನ ಕೆಲಸದ ವಿಷಯ ಮಾತನಾಡಬೇಕು ಮನೆಗೆ ಬಾ ಎಂದು ಕರೆದಿದ್ದರು. ಅವರು ಹೇಳಿದಂತೆ ಅಪಾರ್ಟ್‍ಮೆಂಟ್‍ಗೆ ಹೋದೆ. ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿ. ತಮ್ಮ ರೂಮ್‍ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.

ಈ ರೀತಿ ಎರಡು ಬಾರಿ ಅವರ ಅಪಾರ್ಟ್‍ಮೆಂಟ್‍ಗೆ ಕರೆಸಿ ಲೈಂಗಿಕವಾಗಿ ಬಳಸಿಕೊಂಡು ಅಶ್ಲೀಲವಾಗಿ ಮಾತನಾಡಿರುತ್ತಾರೆ. ಅವರ ವಿರುದ್ಧ ಮಾತನಾಡಲು ಬೆದರಿ ಅವರು ಹೇಳಿದಂತೆ ನಡೆದುಕೊಂಡಿದ್ದೇನೆ. ಸರ್ಕಾರಿ ಕೆಲಸ ಕೊಡಿಸಿ ಎಂದು ಕೇಳಿದಾಗ ಸದ್ಯಕ್ಕೆ ಹಣ ಬೇಕಾದರೆ ಕೇಳು. ಕೆಲಸ ಕಥೆ ಆ ಮೇಲೆ ನೋಡೋಣ ಎಂದು ಹೇಳಿದರು. ಅವರಿಗೆ ಬೇಕಾದಂತೆ ಬಳಸಿಕೊಂಡರು. ಕೆಲಸ ಏಕೆ ಕೊಡಿಸುತ್ತಿಲ್ಲ ಎಂದು ಕೇಳಿದಾಗ ಅಶ್ಲೀಲವಾಗಿ ಬೈದು ಕಳುಹಿಸಿದರು.

ನನಗೆ ಭದ್ರತೆ ಇಲ್ಲದ ಕಾರಣ ಕೈಯಲ್ಲಿ ಬರೆದ ಈ ದೂರನ್ನು ನನಗೆ ಪರಿಚಿತರಾದ ವಕೀಲರಾದ ಜಗದೀಶ್ ಅವರ ಮೂಲಕ ಕಳುಹಿಸುತ್ತಿದ್ದೇನೆ. ನನಗೆ ಆಗುತ್ತಿರುವ ಮಾನಸಿಕ ಹಿಂಸೆ ಮತ್ತು ನನ್ನ ಕುಟುಂಬದ ಸದಸ್ಯರು ಎದುರಿಸುತ್ತಿರುವ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳದಂತೆ ರಕ್ಷಣೆ ನೀಡಬೇಕು. ರಮೇಶ್ ಜಾರಕಿಹೊಳಿ ಮತ್ತು ಅವರ ಕಡೆಯವರಿಂದ ರಕ್ಷಣೆ ನೀಡಬೇಕೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಯುವತಿ ನೀಡಿರುವ ದೂರನ್ನ ಪೊಲೀಸ್ ಆಯುಕ್ತ ಕಮಲ್ ಪಂತ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ ಎನ್ನಲಾಗಿದೆ.

Key words: cd case- Woman -complains -against -former minister- Ramesh jarakiholi.