ಬಾಲಿವುಡ್’ನತ್ತ ಹೆಜ್ಜೆ ಇಟ್ಟ ಹೊಂಬಾಳೆ ಪ್ರೊಡಕ್ಷನ್

ಬೆಂಗಳೂರು, ಜೂನ್ 01, 2022 (www.justkannada.in): ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಗೆದ್ದಿರುವ ಹೊಂಬಾಳೆ ನಿರ್ಮಾಣ ಸಂಸ್ಥೆ ಈಗ ಬಾಲಿವುಡ್ ನತ್ತ ಹೆಜ್ಜೆ ಇಡುತ್ತಿದೆ.

ಹೊಂಬಾಳೆ ಸಂಸ್ಥೆ ಸದ್ಯ ಬಾಲಿವುಡ್‌ನಲ್ಲೂ ಶಾಖೆ ತೆರೆಯಲು ಮುಂದಾಗಿದ್ದು ಸ್ಟಾರ್ ಹೀರೋ ಜೊತೆಗೆ ಮಾತು ಕಥೆ ನಡೆಸಿದೆ ಎಂಬ ಸುದ್ದಿ ಹೊರಬಿದ್ದಿದೆ.

ಈ ವಿಚಾರವನ್ನು ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳನ್ನು ಮಾಡುತ್ತಿದ್ದೇವೆ. ಜೊತೆಗೆ ಹಿಂದಿ ಸಿನಿಮಾಗಳನ್ನು ಮಾಡುವ ಯೋಜನೆ ಇದ್ದು, ಎಲ್ಲವೂ ಅಂದುಕೊಂಡಂತೆ ಆದರೆ  ಮುಂದಿನ 3, 4 ತಿಂಗಳಲ್ಲಿ ಸಿನಿಮಾ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಕನ್ನಡದ ನಂತರ ತೆಲುಗಿನಲ್ಲಿ ನಟ ಪ್ರಭಾಸ್ ಸಿನಿಮಾ ನಿರ್ಮಾಣ ಮಾಡುತ್ತಿದೆ ಹೊಂಬಾಳೆ. ಜೊತೆಗೆ ತಮಿಳು, ಮಲಯಾಳಂನಲ್ಲೂ ಸಿನಿಮಾ ಮಾಡುತ್ತಿರುವ ಬಗ್ಗೆ ವಿಜಯ್ ಮಾಹಿತಿ ಹಂಚಿಕೊಂಡಿದ್ದಾರೆ.