ವಿಧಾನಸಭೆಯಲ್ಲಿ ಸಿಎಎ, ಎನ್ ಆರ್ ಸಿ ಪ್ರತಿಧ್ವನಿ: ಕಲಾಪ ಬಹಿಷ್ಕರಿಸಿ ಸಭಾತ್ಯಾಗ ಮಾಡಿದ ಕಾಂಗ್ರೆಸ್ ಸದಸ್ಯರು…

ಬೆಂಗಳೂರು,ಫೆ,18,2020(www.justkannada.in): ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್ ಆರ್ ಸಿ ವಿಚಾರ ಇಂದು ರಾಜ್ಯ ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿತು.

ವಿಧಾನಸಭೆ ಕಲಾಪದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ ಆರ್ ಸಿ ಮತ್ತು ಮಂಗಳೂರು ಗೋಲಿಬಾರ್ ಪ್ರಕರಣವನ್ನ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ಕಿಡಿಕಾರಿದರು.

ಸಿಎಎ ಎನ್ ಆರ್ ಸಿ ವಿರುದ್ದ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಸಿಎಎ ಎನ್ ಆರ್ ಸಿ ವಿರುದ್ದ ಒಂದೇ ವರ್ಗ ಪ್ರತಿಭಟನೆ ನಡೆಸುತ್ತಿಲ್ಲ. ಎಲ್ಲಾ ವರ್ಗವೂ ಪ್ರತಿಟನೆ ನಡೆಸುತ್ತಿವೆ. ಐಎಎಸ್ ಐಪಿಎಸ್ ಅಧಿಕಾರಿಗಳು ರಾಜೀನಾಮೆ ನೀಡಿ ಪ್ರತಿಭಟನೆಗೆ ಭಾಗಿಯಾಗುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

ಗೋಲಿಬಾರ್ ಪ್ರಕರಣ ಪ್ರಸ್ತಾಪಿಸಿದ ಸಿದ್ಧರಾಮಯ್ಯ, ಮಂಗಳೂರು  ಗೋಲಿಬಾರ್ ನಲ್ಲಿ ಇಬ್ಬರು ಅಮಾಯಕರು ಮೃತಪಟ್ಟಿದ್ದಾರೆ. ಸರ್ಕಾರದ ಕೈಗೊಂಬೆಯಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಆದೇಶವನ್ನ ಕಣ್ಮುಚ್ಚಿ ಪಾಲಿಸುತ್ತಿದ್ದಾರೆ. ಡಿ.18, 19, 20 ರಂದು 144 ಸೆಕ್ಷನ್ ಜಾರಿ ಮಾಡಿದ್ದರು. 144 ಸೆಕ್ಷೆನ್ ಜಾರಿ ಮಾಡಿದ್ದು ಕಾನೂನು ಉಲ್ಲಂಘನೆ. ಹೀಗೆ ಹೈಕೋರ್ಟ್ ಹೇಳಿದೆ.  ಸಿಎಎ ವಿರೋಧಿಸುವವರ ಮೇಲೆ ದೇಶದ್ರೋಹ ಕೇಸ್ ಹಾಕಲಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಪಟ್ಟು ಹಿಡಿದರು. ಆದರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಾಳೆ ಮಧ್ಯಾಹ್ನ 3ಗಂಟೆಗೆ ಚರ್ಚೆ ಮಾಡುವಂತೆ ಸೂಚನೆ ನೀಡಿದರು. ರಾಜ್ಯಪಾಲರ ಭಾಷಣದ ಮೇಲೆ ಚರ್ಚಿಸಲು ಸೂಚಿಸಿದರು.

ಹೀಗಾಗಿ ಇದಕ್ಕೆ ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿ ಕಲಾಪ ಬಹಿಷ್ಕರಿಸಿ ಸಭಾತ್ಯಾಗ ಮಾಡಿ ಹೊರನಡೆದರು. ನೀವೇ ಚರ್ಚೆ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿ ಹೊರನಡೆದರು. ನಂತರ ಕಲಾಪವನ್ನ ಮುಂದೂಡಲಾಯಿತು.

Key words: CAA- NRC -legislative Assembly-Congress Members -siddaramaiah