ಬಸ್ಸುಗಳ ಸಂಖ್ಯೆ 10 ಸಾವಿರಕ್ಕೆ ಹೆಚ್ಚಿಸಲು ಬಿಎಂಟಿಸಿ ಯೋಚನೆ: ಆದ್ರೆ ಸವಾಲಾಗಿದೆ ಮಾನವ ಸಂಪನ್ಮೂಲದ ಕೊರತೆ.

ಬೆಂಗಳೂರು, ನವೆಂಬರ್ 17, 2022 (www.justkannada.in): ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕ ವಾಹನಗಳಲ್ಲಿ ಓಡಾಡುವವರಿಗೆ ಇಲ್ಲೊಂದು ಒಳ್ಳೆಯ ಸುದ್ದಿಯಿದೆ. ಬಿಎಂಟಿಸಿ ಮುಂದಿನ ಕೆಲವು ವರ್ಷಗಳಲ್ಲಿ ತನ್ನ ಬಸ್ಸುಗಳ ಸಂಖ್ಯೆಯನ್ನು10 ಸಾವಿರಕ್ಕೆ ಹೆಚ್ಚಿಸಲು ಆಲೋಚಿಸುತ್ತಿದೆ. ಆದರೆ ಅಗತ್ಯ ಸಿಬ್ಬಂದಿ ಕೊರತೆ ಹಾಗೂ ಬಳಕೆದಾರರ ಕೊರತೆಗಳು ಬಿಎಂಟಿಸಿಗೆ ದೊಡ್ಡ ಸವಾಲುಗಳಾಗಿವೆಯಂತೆ.

ಪ್ರಸ್ತುತು ಬಿಎಂಟಿಸಿ ೬,೫೦೦ ಬಸ್ಸುಗಳನ್ನು ಹೊಂದಿದೆ. ಬಿಎಂಟಿಸಿ ನಿರ್ದೇಶಕ (ಐಟಿ) ಎ.ವಿ. ಸೂರ್ಯ ಸೇನ್ ಅವರು ಈ ಸಂಬಂಧ ಮಾಧ್ಯಮದ ಜೊತೆ ಮಾತನಾಡುತ್ತಾ, “ನಾವು ೨೦೨೪ರ ವೇಳೆಗೆ ಬಸ್ಸುಗಳ ಸಂಖ್ಯೆಯನ್ನು ೮,೦೦೦ಕ್ಕೆ ಹಾಗೂ ಮುಂದಿನ ವರ್ಷಗಳಲ್ಲಿ ೧೦,೦೦೦ಕ್ಕೆ ಹೆಚ್ಚಿಸಲು ಯೋಜನೆ ರೂಪಿಸುತ್ತಿದ್ದೇವೆ,” ಎಂದರು.

ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ನಗರದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ೧೦,೦೦೦ ಕ್ಕೆ ಹೆಚ್ಚಿಸುವುದು ಸೂಕ್ತವಾಗಿದೆ. ಇದಕ್ಕಾಗಿ ಬಿಎಂಟಿಸಿ ಎರಡು-ಆಯಾಮಗಳ ಕಾರ್ಯತಂತ್ರವೊಂದನ್ನು ರೂಪಿಸಿದೆ. ಇದರಲ್ಲಿ ಮೊದಲನೆಯ ಕಾರ್ಯತಂತ್ರವೇನೆಂದರೆ ಈಗಿರುವ ಡಿಪೋಗಳನ್ನು ವಿಸ್ತರಿಸಿ ಆಯಾ ಡಿಪೋಗಳಿಗೆ ಹಂಚಿಕೆ ಮಾಡಿರುವ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಎರಡನೆಯದಾಗಿ, ಡಿಪೋಗಳ ಸಂಖ್ಯೆಯನ್ನೇ ಹೆಚ್ಚಿಸುವುದಾಗಿದೆ. ಪ್ರಸ್ತುತ, ಬೆಂಗಳೂರು ನಗರದ ಹೊರವಲಯಗಳಲ್ಲಿ ಐದು ಡಿಪೋಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ ಅಗತ್ಯ ಸ್ಥಳಾವಕಾಶವನ್ನು ಹುಡುಕಲಾಗುತ್ತಿದೆ.

ಈ ಸಂಬಂಧ ಮಾತನಾಡಿದ ಸೂರ್ಯಸೇನ್ ಅವರು, “ಪ್ರಸ್ತುತ, ನಮ್ಮ ಮುಂದಿರುವ ಅತೀ ದೊಡ್ಡ ಸವಾಲೇನೆಂದರೆ ಸಿಬ್ಬಂದಿಗಳ ಕೊರತೆ. ಈ ಕೊರತೆಯಿಂದಾಗಿ ಸುಮಾರು 600 ರಿಂದ 700 ಬಸ್ಸುಗಳ ಸೇವೆ ನಿಂತಿದೆ. ಆದ್ದರಿಂದ, ಈಗ ಪ್ರತಿ ದಿನ ಕೇವಲ ೫,೬೦೦ ಬಸ್ಸುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದಂತೆ ಅಗತ್ಯ ಬೆಂಬಲ ಒದಗಿಸುವಂತೆ ನಾವು ರಾಜ್ಯ ಸರ್ಕಾರವನ್ನು ಕೋರಿದ್ದೇವೆ. ಸಿಬ್ಬಂದಿಗಳ ಕೊರತೆ ನೀಗದ ಹೊರತು, ಬಸ್ಸುಗಳ ಸಂಖ್ಯೆಯನ್ನು ೧೦,೦೦೦ಕ್ಕೆ ಹೆಚ್ಚಿಸುವುದು ಕನಸಾಗಲಿದೆ. ಹೊರಗುತ್ತಿಗೆ ಹಾಗೂ ನೇಮಕಾತಿ ಆಧಾರದ ಮೇಲೆ ಸಿಬ್ಬಂದಿಗಳ ಸೇವೆಗಳನ್ನು ಪಡೆಯುವ ಸಂಬಂಧ ಸಾಧ್ಯತೆಗಳನ್ನು ಅವಲೋಕಿಸಲಾಗುತ್ತಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಈ ನಡುವೆ, ಹೊಸ ಡಿಪೋಗಳಿಗಾಗಿ ಅಗತ್ಯ ಸ್ಥಳದ ಹುಡುಕಾಟವನ್ನೂ ನಡೆಸಲಾಗುತ್ತಿದೆ,” ಎಂದು ವಿವರಿಸಿದರು.

ಸರ್ಕಾರೇತರ ಸಂಸ್ಥೆ ಜನಾಗ್ರಹದ ಶ್ರೀನಿವಾಸ್ ಅಳವಳ್ಳಿ ಅವರು ಈ ಕುರಿತು ಮಾತನಾಡುತ್ತಾ, “ನಾವೂ ಸಹ ಬಿಎಂಟಿಸಿಯ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ನಾವೂ ಸಹ ಕೋರುತ್ತಿದ್ದೇವೆ. ಅದರ ಸಂಖ್ಯೆಯನ್ನು ೧೫ ಸಾವಿರಕ್ಕೆ ಹೆಚ್ಚಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಪ್ರಸ್ತುತ, ಇಡೀ ನಗರವನ್ನು ತಲುಪುವ ಏಕೈಕ ಸಂಚಾರ ವ್ಯವಸ್ಥೆ ಎಂದರೆ ಬಿಎಂಟಿಸಿ ಆಗಿದೆ. ಈ ರೀತಿ ಇಡೀ ನಗರವನ್ನು ವ್ಯಾಪಿಸಲು ಮೆಟ್ರೋಗೆ ಕನಿಷ್ಠ ಇನ್ನೂ ಐದು ವರ್ಷಗಳಾದರೂ ಬೇಕಾಗುತ್ತದೆ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸ್ಸುಗಳನ್ನು ಬಳಸುವವರ ಸಂಖ್ಯೆಯನ್ನು ಹೆಚ್ಚಿಸಲು ಇನ್ನೂ ಬಹಳ ಪ್ರಯತ್ನಗಳಾಗಬೇಕಿದೆ ಎನ್ನುವುದು ಶ್ರೀನಿವಾಸ್ ಅವರ ಅಭಿಪ್ರಾಯವಾಗಿದೆ. ಅವರ ಪ್ರಕಾರ, ಹೆಚ್ಚಿನ ಜನರು ಬಸ್ಸುಗಳನ್ನು ಬಳಸುವಂತಾಗಲು ಅವರಿಗೆ ಮುಂದಿನ ಬಸ್ಸು ನಿಖರವಾಗಿ ಯಾವ ಸಮಯಕ್ಕೆ ಬರುತ್ತದೆ ಎಂದು ಖಾತ್ರಿಯಾಗಬೇಕು. ಬಿಎಂಟಿಸಿ ಆ್ಯಪ್ ಬಹಳ ದೀರ್ಘ ಕಾಲದಿಂದ ಈಡೇರಿಕೆ ಆಗದೆ ಉಳಿದಿದೆ. ಇದು ನಿಜವಾದರೆ ಬಸ್ಸುಗಳನ್ನು ಬಳಸುವವರಿಗೆ ಮುಂದಿನ ಬಸ್ಸು ಬರುವ ಸಮಯ ನಿಖರವಾಗಿ ತಿಳಿಯಲು ಬಹಳ ಉಪಯೋಗವಾಗುತ್ತದೆ.

ಎರಡನೆಯದಾಗಿ, ಜನರು ತಮ್ಮ ಸ್ವಂತ ವಾಹನಗಳು ಅಥವಾ ಕ್ಯಾಬ್‌ ಗಳನ್ನು ಬಳಸುತ್ತಿರುವುದು ಏಕೆಂದರೆ ಅವರು ತಲುಪಬೇಕಾದ ಸ್ಥಳವನ್ನು ಸರಿಯಾದ ಸಮಯಕ್ಕೆ, ವೇಗವಾಗಿ ಹೋಗಬಹುದು ಎನ್ನುವ ಕಾರಣದಿಂದಾಗಿ. ಬಸ್ಸುಗಳಾದರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅಲ್ಲಲ್ಲಿ ನಿಲ್ಲುತ್ತವೆ. ಅದಕ್ಕಾಗಿ ರಸ್ತೆಗಳಲ್ಲಿ ಬಸ್ಸುಗಳಿಗಾಗಿಯೇ ಮೀಸಲಿರುವ ಪಥಗಳ ಅಗತ್ಯವಿದೆ. ನಗರದ ೧೨ ರಸ್ತೆಗಳಲ್ಲಿ ಬಸ್ ಲೇನ್‌ ಗಳನ್ನು ಪರಿಚಯಿಸಲು ಯೋಜನೆಯಿದೆ. ಜೊತೆಗೆ ಸರ್ಕಾರ ಆರು ಪಥಗಳಿರುವಂತಹ ರಸ್ತೆಗಳಲ್ಲಿಯೂ ಈ ರೀತಿ ಬಸ್ ಲೇನ್‌ ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಆಲೋಚಿಸಬಹುದು,” ಎಂದು ವಿವರಸಿದರು.

“ನಮ್ಮಲ್ಲಿ ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ ಹಾಗೂ ಅಹಮದಾಬಾದ್‌ನಲ್ಲಿ ಬಸ್ ರ್ಯಾಕಪಿಡ್ ಟ್ರಾನ್ಸಿಟ್ ವ್ಯವಸ್ಥೆ ಇದೆ. ಮೂರನೆಯದಾಗಿ, ಕಂಪನಿಗಳೂ ಸಹ ಸಾರ್ವಜನಿಕ ಸಾರಿಗೆಯನ್ನು ಬಳಸುವಂತಹ ಉದ್ಯೋಗಿಗಳನ್ನು ಪ್ರೋತ್ಸಾಹಿಸಬೇಕು. ಇದರಿಂದ ಹೆಚ್ಚಿನ ಉದ್ಯೋಗಿಗಳು ಸಾರ್ವಜನಿಕ ವಾಹನಗಳನ್ನು ಬಳಸಲು ಆರಂಭಿಸುತ್ತಾರೆ ಹಾಗೂ ಅವರಿಗೆ ಸರಿಯಾದ ಸಮಯಕ್ಕೆ ಕೆಲಸದ ಸ್ಥಳವನ್ನು ತಲುಪುವುದೂ ಸಾಧ್ಯವಾಗುತ್ತದೆ. ಇದರಿಂದಾಗಿ ಕೆಲಸದ ಸ್ಥಳಗಳಲ್ಲಿ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ,” ಎಂದರು.

ಈ ನಡುವೆ, ಸೂರ್ಯ ಸೇನ್ ಅವರು ಅಪ್‌ ಡೇಟ್ ಮಾಡಿರುವ ಬಿಎಂಟಿಸಿ ಆ್ಯಪ್ ಅನ್ನು ಇನ್ನೊಂದು ತಿಂಗಳ ಒಳಗಾಗಿ ಚಾಲನೆಗೊಳಿಸುವುದಾಗಿ ತಿಳಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: BMTC-plans – increase -number -buses – 10 thousand.