ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಬಿಎಸ್ ವೈ ನೇತೃತ್ವದಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ…

ಬೆಂಗಳೂರು, ಜೂ.14,2019(www.justkannada.in): ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ಮಾಡುವುದಕ್ಕೆ ವಿರೋಧ ಮತ್ತು ಸಾಲಮನ್ನಾ  ಬರನಿರ್ವಹಣೆಗೆ ಆಗ್ರಹಿಸಿ ಇಂದಿನಿಂದ 2 ದಿನಗಳ ಕಾಲ ರಾಜ್ಯ ಬಿಜೆಪಿ ಅಹೋರಾತ್ರಿ ಧರಣಿ ಆರಂಭಿಸಿದೆ.

ಜಿಂದಾಲ್ ಕಂಪನಿಗೆ ಭೂಮಿ ಹಸ್ತಾಂತರಿಸುವ ಮೂಲಕ ರಾಜ್ಯ ಸಮ್ಮಿಶ್ರ ಸರಕಾರ ಭಾರೀ ಭ್ರಷ್ಟಾಚಾರ ನಡೆಸಿದೆ ಹಾಗೂ ಬರ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ  ವಿಫಲವಾಗಿದೆ ಎಂದು ಆರೋಪಿಸಿ ನಗರದ ಆನಂದ ರಾವ್ ವೃತ್ತದ ಮೌರ್ಯ ಹೋಟೆಲ್ ಎದುರು ರಾಜ್ಯ ಬಿಜೆಪಿ ನಾಯಕರು ಇಂದು ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ನೇತೃತ್ವದಲ್ಲಿ  ಇಂದಿನಿಂದ ಎರಡು ದಿನಗಳ ಕಾಲ ಧರಣಿ ನಡೆಯುತ್ತಿದ್ದು ಪ್ರತಿಭಟನೆಯಲ್ಲಿ  ಪಕ್ಷದ ನಾಯಕರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಎನ್.ರವಿಕುಮಾರ್ ಸೇರಿ ಬಿಜೆಪಿ ಶಾಸಕರು ಸಂಸದರು, ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದಾರೆ.

ಧರಣಿಯ ವೇಳೆ ಮಾತನಾಡಿದ ಬಿಎಸ್ ಯಡಿಯೂರಪ್ಪ,  ಜಿಂದಾಲ್ ನಿಂದ ಸರ್ಕಾರಕ್ಕೆ ಕಿಕ್ ಬ್ಯಾಕ್ ಪಡೆದಿದೆ. ಕಮಿಷನ್ ಕೊಡುವವರು ಮಾತ್ರ ತಾಜ್ ಹೋಟೆಲ್ ಗೆ ಬರ್ತಾರೆ. ಜನಸಾಮಾನ್ಯರು ತಾಜ್ ಹೋಟಲ್ ಗೆ ಬರೋಕೆ ಆಗಲ್ಲ. ಸಿಎಂ ಹೆಚ್.ಡಿ ಕುಮಾರಸ್ವಾಮಿ ಒಂದು ವರ್ಷದಿಂದ ಜನ ಸಾಮಾನ್ಯರ ಕೈಗೆ ಸಿಕ್ಕಿಲ್ಲ.  ಸಮ್ಮಿಶ್ರ ಸರ್ಕಾರ  ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ ನಾವು ಸರ್ಕಾರದ ವಿರುದ್ದ ನಾವು ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.

Key words: BJP –protest -against -state -coalition government-bangalore