ತುಂಬಿ ಹರಿಯುತ್ತಿದೆ ಕೊಸಳ್ಳಿ ಜಲಪಾತ

ಉಡುಪಿ: ಇತ್ತೀಚೆಗೆ ಸುರಿದ ಬಿರುಸಿನ ಮಳೆ ಅನಂತರ ಕೊಸಳ್ಳಿ ಜಲಪಾತ ತುಂಬಿ ಹರಿಯುತ್ತಿದೆ. ಮೈತುಂಬಿ ಹರಿಯುವ ಜಲಧಾರೆಗೆ ಪ್ರವಾಸಿಗರ ಮನಸ್ಸು ಪುಳಕಿತವಾದರೆ, ಚಾರಣ ಪ್ರಿಯರು ಫುಲ್‌ಖುಷ್.

ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ನೈಸರ್ಗಿಕ ಸೊಬಗಿನಿಂದ ಗುರುತಿಸಿಕೊಂಡಿರುವ ಬೈಂದೂರು ತಾಲೂಕಿನ ಶಿರೂರು ಸಮೀಪದ ಕೊಸಳ್ಳಿ ಜಲಪಾತ ಆಕರ್ಷಕ ಸೌಂದರ್ಯ ಹೊಂದಿದೆ. ಮಳೆಗಾಲದಲ್ಲಿ ಈ ಜಲಪಾತ ಜೋಗದ ನೆನಪು ಮೂಡಿಸುತ್ತದೆ. ದಟ್ಟ ಕಾನನದ ಮಧ್ಯದ ನೈಸರ್ಗಿಕ ಸೊಬಗು ಪ್ರಕೃತಿಯ ವೈಶಿಷ್ಟೃವನ್ನು ಬಿಂಬಿಸುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯ ಅನುಭವಿಸಿಯೇ ನೋಡಬೇಕು. ಕಣ್ಣು ಹಾಯಿಸಿದಷ್ಟು ಹಚ್ಚ ಹಸಿರಿನ ಕಾಡು, ತೇಲಿಬರುವ ಇಬ್ಬನಿ, ಜಲಪಾತ ತಲುಪುವವರೆಗೆ ಸಿಗುವ ಹತ್ತಾರು ಕಿರು ತೊರೆಗಳು ಚಾರಣಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಇಲ್ಲಿದೆ ‘ಅಬ್ಬಿ’ ಜಲಪಾತ: ಉಡುಪಿಯಿಂದ ಉತ್ತರಕ್ಕೆ 80 ಕಿ.ಮೀ. ದೂರದಲ್ಲಿ ಶಿರೂರು ಎಂಬ ಗ್ರಾಮ. ಇಲ್ಲಿಂದ ತೂದಳ್ಳಿ ರಸ್ತೆಯಲ್ಲಿ 8 ಕಿ.ಮೀ. ಪೂರ್ವಾಭಿಮುಖವಾಗಿ ಸಾಗಬೇಕು. ಬಳಿಕ 4 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದಾಗ ಕೊಸಳ್ಳಿ ಜಲಪಾತ ಸಿಗುತ್ತದೆ. ನೀರವ ಕಾಡಿನ ಮಧ್ಯೆ ಜಲರಾಶಿಯ ಭೋರ್ಗರೆತ, ಪ್ರಾಣಿಪಕ್ಷಿಗಳ ಕಲರವ, ಆಗೊಮ್ಮೆ ಈಗೊಮ್ಮೆ ದರ್ಶನ ನೀಡಿ ಮಾಯವಾಗುವ ಸಾಧು ಪ್ರಾಣಿಗಳು ಉಲ್ಲಾಸದ ಅನುಭವ ನೀಡುತ್ತವೆ. ಈ ಜಲಪಾತವನ್ನು ಅಬ್ಬಿ ಜಲಪಾತವೆಂದು ಕರೆಯುತ್ತಾರೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿರುವುದರಿಂದ ‘ಮಿನಿ ಜೋಗ’ ಎಂದೇ ಪ್ರಸಿದ್ಧಿ.

ಪ್ರತಿವರ್ಷ ಸಾವಿರಾರು ಪ್ರವಾಸಿಗರು, ಚಾರಣಪ್ರಿಯರು ಆಗಮಿಸುತ್ತಿದ್ದು, ಸ್ಥಳೀಯರು ಅತ್ಯಂತ ಪ್ರೀತಿಯಿಂದ ಗೌರವ ನೀಡುತ್ತಾರೆ. ನೂರಾರು ಅಡಿ ಎತ್ತರದಿಂದ ಧುಮುಕುವ ಕೊಸಳ್ಳಿ ಅಬ್ಬಿ ಜಲಪಾತ ಎರಡು ಹಂತಗಳಲ್ಲಿ ಕಾಣಸಿಗುತ್ತದೆ. ಜಲಪಾತದಿಂದ ಹರಿಯುವ ನದಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಆಸರೆ ನೀಡಿ ಸಂಕದಗುಂಡಿ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಜಲಧಾರೆಯಿಂದಾಗಿ ಕೊಸಳ್ಳಿಯ ಅಬ್ಬಿ ಜಲಪಾತ ಇನ್ನಷ್ಟು ಸೌಂದರ‌್ಯ ವೃದ್ಧ್ದಿಸಿಕೊಂಡಿದೆ. ಹೀಗಾಗಿ ಪಿಕ್‌ನಿಕ್ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಚಾರಣ ಪ್ರಿಯರಲ್ಲಿರಲಿ ಜಾಗ್ರತೆ: ಮಳೆಗಾಲದಲ್ಲಿ ಜಲಪಾತದ ಸಮೀಪ ಹೋಗಲು ಸಾಧ್ಯವಿಲ್ಲ. ಆದರೆ ದೂರದಿಂದ ನೋಡಿ ಆನಂದಿಸಬಹುದು. ಜನವರಿ- ಫೆಬ್ರವರಿವರೆಗೆ ಜಲಧಾರೆ ಇದ್ದರೂ ಮಳೆಗಾಲದಲ್ಲಿ ಈ ಜಲಪಾತ ನೋಡುಗರನ್ನು ಪುಳಕಿತಗೊಳಿಸುತ್ತದೆ. ಜಲಪಾತಕ್ಕೆ ಸಾಗುವಾಗ ಕಲ್ಲುಗಳು ಜಾರುವುದರಿಂದ ಎಚ್ಚರಿಕೆ ವಹಿಸಬೇಕು. ಈಗಾಗಲೇ ಮೂರು ಜನ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಗುಂಪುಗುಂಪಾಗಿ ಬರುವುದರಿಂದ ಜಾಗರೂಕತೆ ವಹಿಸಬೇಕು. ಇಲಾಖೆ ವತಿಯಿಂದ ಎಚ್ಚರಿಕೆ ಫಲಕಗಳನ್ನು ಕೂಡ ಇಲ್ಲಿ ಅಳವಡಿಸಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ನನ್ನ ಮಿತ್ರನೋರ್ವ ಸಿಂಗಾಪುರ ಪ್ರವಾಸಕ್ಕೆ ಹೋದಾಗ ಭಾರತೀಯ ಮೌಲ್ಯದ ಪ್ರಕಾರ ಐದು ಸಾವಿರ ರೂ. ಪ್ರವೇಶ ಶುಲ್ಕ ನೀಡಿ ಅಲ್ಲಿ ಕೃತಕವಾಗಿ ನಿರ್ಮಿಸಿದ ಜಲಪಾತ ನೋಡಿಕೊಂಡು ಬಂದು ಇಲ್ಲಿ ಬೀಗುತ್ತಿದ್ದರು. ಆದರೆ ಅವರ ಊರಿನ ಪಕ್ಕದಲ್ಲೇ ಇರುವ ಪ್ರಾಕೃತಿಕವಾಗಿ ಹರಿಯುತ್ತಿರುವ ಸಮೃದ್ಧ ಜಲರಾಶಿಯ ಮೂಲದತ್ತ ಅವರ ದೃಷ್ಟಿ ಬೀಳಲೇ ಇಲ್ಲ. ಎಷ್ಟೆಂದರೂ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಲ್ಲವೇ?
ಮಂಜುನಾಥ ಬಿಲ್ಲವ ಗ್ರಾಮ ಕರಣಿಕರು ಶಿರೂರು
ಕೃಪೆ:ವಿಜಯವಾಣಿ

ತುಂಬಿ ಹರಿಯುತ್ತಿದೆ ಕೊಸಳ್ಳಿ ಜಲಪಾತ
beautiful-kosalli-falls