ಬೆಂಗಳೂರು ನಗರದ 36 ರಸ್ತೆಗಳು ಸ್ಮಾರ್ಟ್‌

ಬೆಂಗಳೂರು: ಜೂ-23:ಸ್ಮಾರ್ಟ್‌ಸಿಟಿ ಯೋಜನೆ ಅಡಿ 36ರಸ್ತೆಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಮುಂದಾಗಿದೆ. ಈಗಿರುವ ರಸ್ತೆಗಳ ಜತೆಗೆ ಮತ್ತಷ್ಟು ರಸ್ತೆಗಳು “ಸ್ಮಾರ್ಟ್‌’ ಪಟ್ಟಿಗೆ ಸೇಪರ್ಡೆಯಾಗಲಿವೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರಾಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದ್ದು, ಅದರಂತೆ ನಗರದ ಹೃದಯ ಭಾಗದಲ್ಲಿರುವ ಕಮರ್ಷಿಯಲ್‌ಸ್ಟ್ರೀಟ್‌, ಇನ್ಫೆಂಟ್ರಿ ರಸ್ತೆ, ರಾಜಭವನ ರಸ್ತೆ, ಕಾನ್ವೆಂಟ್‌ರಸ್ತೆ, ಕಸ್ತೂರಬಾ ರಸ್ತೆ ಸೇರಿದಂತೆ ಒಟ್ಟು 36 ರಸ್ತೆಗಳನ್ನು 2 ಹಂತಗಳಲ್ಲಿ ಟೆಂಡರ್‌ಶ್ಯೂರ್‌ ರಸ್ತೆಗಳಾಗಿ ಬದಲಾಗಲಿವೆ.

ಟೆಂಡರ್‌ ಶ್ಯೂರ್‌ಗೆ ಆಯ್ಕೆ ಮಾಡಿಕೊಂಡಿರುವ ರಸ್ತೆಗಳಿಗಾಗಿ ವಿಶೇಷ ಉದ್ದೇಶ ವಾಹಕ(ಎಸ್‌ಪಿವಿ)ರಚಿಸಲಾಗಿದೆ. ಈಗಾಗಲೇ ಗುರುತಿಸಿರುವ ರಸ್ತೆಗಳಿಗೆ ಪಾಲಿಕೆಯು ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಯನ್ನು ಸಿದ್ಧಪಡಿಸಲಾಗಿದ್ದು, 36ರಸ್ತೆಗಳ ಅಭಿವೃದ್ಧಿ ಟೆಂಡರ್‌ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.

ಮೊದಲ ಹಂತದಲ್ಲಿ 20 ಸ್ಮಾರ್ಟ್‌ ರಸ್ತೆಗಳು: “ಸ್ಮಾರ್ಟ್‌ಸಿಟಿ ಅಡಿ ಅಭಿವೃದ್ಧಿಯಾಗಲಿರುವ 36 ರಸ್ತೆಗಳಲ್ಲಿ ಮೊದಲ ಹಂತದಲ್ಲಿ 20 ರಸ್ತೆಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ಪತ್ರ ನೀಡಲಾಗಿದೆ. ಉಳಿದ16 ರಸ್ತೆಗಳ ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ಕಾಮಗಾರಿಗೆ ಮುನ್ನ ಗುತ್ತಿಗೆದಾರರಿಂದ ಸೆಕ್ಯೂರಿಟಿ ದಾಖಲೆಗಳನ್ನು ಕೇಳಲಾಗಿದ್ದು, ಇನ್ನೆರಡು ವಾರಗಳಲ್ಲಿ ಇಲ್ಲಿಯೂ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್‌ ಸುರೇಶ್‌ ಮಾಹಿತಿ ನೀಡಿದರು.

50 ರಸ್ತೆಗಳ ಆಯ್ಕೆ: ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿದಂತೆ ಬಿಬಿಎಂಪಿ ವ್ಯಾಪ್ತಿಯ 50 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ರಸ್ತೆಗಳನ್ನಾಗಿ ಪರಿವರ್ತಿಸುವುದಾಗಿ ತಿಳಿಸಿತ್ತು. ಅದರಲ್ಲಿ ಈವರೆಗೆ ಒಟ್ಟು 13 ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ರಸ್ತೆಗಳನ್ನಾಗಿ ಬದಲಾಯಿಲಾಗಿದೆ.

ಬಿಬಿಎಂಪಿ ಸಿದ್ಧಪಡಿಸಿರುವ ಯೋಜನೆಯಂತೆ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ನಗರದ ಪ್ರಮುಖ 36 ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಉನ್ನತೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದ ಕಾಮಗಾರಿಯನ್ನು 224 ಕೋಟಿ ರೂ. ಮತ್ತು ಎರಡನೇ ಹಂತದ ಕಾಮಗಾರಿಯನ್ನು 181.69 ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಸ್ಮಾರ್ಟ್‌ಸಿಟಿ ರಸ್ತೆಗಳ ವಿಶೇಷತೆ: ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ವಿಧಾನ ಇದಾಗಿದೆ. ಸ್ಮಾರ್ಟ್‌ಕಾರ್ಡ್‌ ಬಳಸುವ ಸೈಕಲ್‌ ಮತ್ತು ಇ-ಆಟೋ ನಿಲುಗಡೆ, ಇ-ಶೌಚಗೃಹ, ಕುಡಿಯುವ ನೀರಿನ ಘಟಕ ಮತ್ತು ಎಟಿಎಂ, ಸೆನ್ಸಾರ್‌ ಆಧರಿತ ಡಸ್ಟ್‌ಬಿನ್‌, ಸುಸಜ್ಜಿತ ಪಾದಚಾರಿ ಮಾರ್ಗ, ಪಾದಚಾರಿ ಮಾರ್ಗದಡಿ ಒಎಫ್‌ಸಿ, ನೀರಿನ ಪೈಪ್‌, ವಿದ್ಯುತ್‌ ತಂತಿಗಳ ಅಳವಡಿಕೆಗೆ ವ್ಯವಸ್ಥೆ, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಹಾಗೂ ಮಳೆ ನೀರು ರಸ್ತೆಯ ಮೇಲೆ ನಿಲ್ಲದ ರೀತಿಯಲ್ಲಿ ಎರಡೂ ಕಡೆ ಉತ್ತಮ ಚರಂಡಿ ವ್ಯವಸ್ಥೆ ರಸ್ತೆಗಳಲ್ಲಿ ಇರಲಿದೆ.
ಕೃಪೆ:ಉದಯವಾಣಿ

ಬೆಂಗಳೂರು ನಗರದ 36 ರಸ್ತೆಗಳು ಸ್ಮಾರ್ಟ್‌
Bangalore-citys-36-roads-are-smart