ಅಮೃತ ಸಿಂಚನ – 12 : ಯೋಗ – ಯೋಗ್ಯತೆ

 

ಅಮೃತ ಸಿಂಚನ – 12

ಯೋಗ – ಯೋಗ್ಯತೆ

ಮೈಸೂರು,ಡಿಸೆಂಬರ್,30,2020(www.justkannada.in):

ಉನ್ನತ ಸ್ಥಾನವೊಂದನ್ನು ಅಲಂಕರಿಸಲು ನಿಮಗೆ ಯೋಗ್ಯತೆಯೊಂದಿದ್ದರೆ ಮಾತ್ರ ಸಾಲದು, ಯೋಗವೂ ಬೇಕು.

ನೀವು ಗಮನಿಸಿಯೇ ಇರುತ್ತೀರಿ, ಸಂಸ್ಥೆಯೊಂದರಲ್ಲಿ ಮುಖ್ಯಸ್ಥನೊಬ್ಬನಿದ್ದಾನೆ. ಅವನಷ್ಟೇ ಯೋಗ್ಯತೆ ಇರುವವರು ಆ ಸಂಸ್ಥೆಯಲ್ಲಿ ಇನ್ನೂ ಹಲವರಿದ್ದಾರೆ. ಆದರೆ ಏನು ಮಾಡುವುದು? ಉನ್ನತ ಸ್ಥಾನ ಪಡೆಯುವ ಯೋಗವಿರುವುದು ಈಗ ಮುಖ್ಯಸ್ಥನ ಸ್ಥಾನದಲ್ಲಿರುವ ವ್ಯಕ್ತಿಗೆ ಮಾತ್ರ!

ಅತ್ಯಂತ ಮೇಧಾವಿಗಳೂ, ಬುದ್ಧಿವಂತರೂ ಆಗಿರುವ ಅದೆಷ್ಟೋ ಮಂದಿ ಒಂದೊಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಕಾಲಯಾಪನೆ ಮಾಡುತ್ತಿರುವುದನ್ನು ನೀವು ಕಂಡಿರಬಹುದು. ಹಾಗೆಯೇ ಶತ ಮೂರ್ಖ ನೊಬ್ಬ ವೈಭವೋಪೇತ ಜೀವನ ನಡೆಸುತ್ತಿರುವುದನ್ನು ನೀವು ಗಮನಿಸಿರಬಹುದು. ಇದು ಹೇಗೆ ಸಾಧ್ಯ ಅಂತ ನೀವು ಅಚ್ಚರಿಪಡುವ ಕಾರಣವಿಲ್ಲ. ಏಕೆಂದರೆ, ಇದು ಪೂರ್ವಾರ್ಜಿತ ಕರ್ಮ ಫಲದ ಕರಾಮತ್ತಲ್ಲದೆ ಬೇರಾವುದೂ ಅಲ್ಲ. ಹಿಂದಿನ ಜನ್ಮದಲ್ಲಿ ನೀವು ಸುಕರ್ಮಗಳನ್ನು ಮಾಡಿದ್ದ ಪಕ್ಷದಲ್ಲಿ ಈ ಜನ್ಮದಲ್ಲಿ ಆ ಕರ್ಮಫಲದ ಬಲದಿಂದ ನಿಮಗೆ ಯೋಗ್ಯತೆ ಇಲ್ಲದಿದ್ದರೂ ಉತ್ತಮ ಸ್ಥಿತಿಯಲ್ಲಿ ಬದುಕುವ ಯೋಗ ದೊರೆಯುತ್ತದೆ. ಈ ಸತ್ಯವನ್ನು ಅರ್ಥ ಮಾಡಿಕೊಂಡವನು ಇತರರು ಮೇಲೇರಿದಾಗ ಖಂಡಿತವಾಗಿಯೂ ಕರುಬುವುದಿಲ್ಲ.

ಈ ಕಾರಣದಿಂದ, ಸುಕರ್ಮಗಳನ್ನು ಮಾಡಲು ದೊರೆಯುವ ಒಂದು ಸಣ್ಣ ಅವಕಾಶವನ್ನೂ ಕಳೆದುಕೊಳ್ಳಬೇಡಿ. ಕಳೆದುಕೊಂಡು ಪೆದ್ದರಾಗಬೇಡಿ!

– ಜಿ. ವಿ. ಗಣೇಶಯ್ಯ.

Amrita sinchana – 12- Yoga – Aptitude.