ಸಹಕಾರ ಇಲಾಖೆ ಮೂಲಕ 5 ಸಾವಿರ ಉದ್ಯೋಗ ಸೃಷ್ಟಿ-ಸಚಿವ ಎಸ್.ಟಿ ಸೋಮಶೇಖರ್ …

Promotion

ಹೊಸಪೇಟೆ,ನವೆಂಬರ್,19,2020(www.justkannada.in):  ಸಹಕಾರ ಇಲಾಖೆ ಮೂಲಕ 5 ಸಾವಿರ ಉದ್ಯೋಗವನ್ನು ಸೃಷ್ಟಿ ಮಾಡಲಾಗುತ್ತಿದ್ದು, ಇದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಕೆಲವೇ ತಿಂಗಳಲ್ಲಿ ಗುರಿ ತಲುಪಲಾಗುವುದು ಎಂದು ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ಹೇಳಿದರು.5-thousand-job-creation-co-operative-department-minister-st-somashekhar

67ನೇ ಅಖಿಲ ಭಾರತ ಸಹಕಾರ ಸಪ್ತಾಹದ 6ನೇ ದಿನ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಉದ್ಘಾಟಿಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ 19ರ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಜೊತೆಗೆ ಉದ್ಯೋಗಕ್ಕೂ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಇಲಾಖೆಯು ಕರ್ನಾಟಕ ರಾಜ್ಯಾದ್ಯಂತ ಇರುವ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕೊಡುವ ಕೆಲಸವನ್ನು ಮಾಡುತ್ತೇವೆ. ಅಪೆಕ್ಸ್ ಬ್ಯಾಂಕ್, 21 ಡಿಸಿಸಿ ಬ್ಯಾಂಕ್ ಹಾಗೂ ಹಲವು ಸೊಸೈಟಿಗಳಿಂದ ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಡುತ್ತೇವೆ ಎಂದು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.

ಸಹಕಾರ ಇಲಾಖೆ ಜನರಿಗೆ ಸಾಕಷ್ಟು ಹತ್ತಿರವಾಗುತ್ತಿದೆ. ಇದರ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಮುಟ್ಟಿಸುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ದೊಡ್ಡದಿದೆ ಎಂದು ತಿಳಿಸಿದರು.

ಇಪ್ಪತ್ತೊಂದು ಡಿಸಿಸಿ ಬ್ಯಾಂಕ್ ಗಳಲ್ಲಿ 4 ಡಿಸಿಸಿ ಬ್ಯಾಂಕ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಬಳ್ಳಾರಿ  ಡಿಸಿಸಿ ಬ್ಯಾಂಕ್ ಕೂಡ ಒಂದಾಗಿದೆ. ಸುಮಾರು 300 ಕೋಟಿ ಸಾಲವನ್ನು ರೈತರಿಗೆ ಕೊಡುವ ವ್ಯವಸ್ಥೆಯನ್ನು ಬಳ್ಳಾರಿ ಡಿಸಿಸಿ ಬ್ಯಾಂಕ್ ಮುಖಾಂತರ ಮಾಡಲಾಗಿದೆ. 1780 ಕೋಟಿ ರೂಪಾಯಿಯು ನಬಾರ್ಡ್ ನಿಂದ ಬಂದಿದ್ದು, ಅದರಲ್ಲಿ 80 ಕೋಟಿ ರೂಪಾಯಿಯನ್ನು ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರ ಬೇಡಿಕೆ ಮೇರೆಗೆ ಬಳ್ಳಾರಿ ಡಿಸಿಸಿ ಬ್ಯಾಂಕ್ ಗೆ ಕೊಡಲಾಗಿದೆ. ಈ ಮೂಲಕ ಅನೇಕ ರೈತರಿಗೆ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಾಲ ನೀಡಿ ಸ್ವಾವಲಂಬನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಮಾರ್ಕೆಟಿಂಗ್ ಫೆಡರೇಷನ್ ಮೂಲಕ ಪ್ರಧಾನಮಂತ್ರಿಗಳ ಜನೌಷಧ ಮಾರಾಟ ಮಾಡಲು ಕೇಂದ್ರ ಸರ್ಕಾರದ ಜತೆ ಕೈ ಜೋಡಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಭಾರಿ ಪ್ರಮಾಣದಲ್ಲಿ ಅನುಕೂಲಗಳಾಗಿದ್ದು, ಹಣದ ಉಳಿತಾಯವೂ ಆಗುತ್ತಿದೆ. ಇದರಲ್ಲಿ ಕೇಂದ್ರದ ಸಚಿವರಾದ ಡಿ.ವಿ. ಸದಾನಂದಗೌಡರ ಪಾತ್ರ ಬಹಳ ದೊಡ್ಡದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಹುಬ್ಬಳ್ಳಿಯ ಜನೌಷಧ ಮಳಿಗೆಯೊಂದರ ವರ್ಚುವಲ್ ಉದ್ಘಾಟನೆ ಕಾರ್ಯಕ್ರಮವಿತ್ತು. ಆ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಸದಾನಂದ ಗೌಡ ಅವರಿಗೆ ವ್ಯಕ್ತಿಯೊಬ್ಬರು ಬರೆದಿದ್ದ ಪತ್ರವೊಂದನ್ನು ಅವರು ಓದುತ್ತಾರೆ. “ತಮ್ಮ ತಂದೆಗೆ ಪ್ರತಿ ತಿಂಗಳಿಗೆ ಔಷಧಕ್ಕಾಗಿ ಸುಮಾರು 3 ಸಾವಿರ ರೂಪಾಯಿಯನ್ನು ನಾನು ಖರ್ಚು ಮಾಡಬೇಕಿತ್ತು. ಆದರೆ ಜನೌಷಧ ಮಳಿಗೆ ಬಂದಮೇಲೆ ಕೇವಲ 250 ರೂಪಾಯಿಗೆ ನನ್ನ ತಂದೆಯವರ ಎಲ್ಲಾ ವೈದ್ಯಕೀಯ ಔಷಧ ವೆಚ್ಚಗಳು ಮುಗಿಯುತ್ತವೆ ಇದಕ್ಕಾಗಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು  ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಆತ್ಮನಿರ್ಭರದಲ್ಲಿ ಕರ್ನಾಟಕ ಮುಂದು

ಕರ್ನಾಟಕ ಸಹಕಾರಿ ಇಲಾಖೆ ದೇಶದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರವು ಆತ್ಮನಿರ್ಭರ ಯೋಜನೆಯಡಿ ದೇಶದ ಆರ್ಥಿಕ ಸ್ಥಿತಿ ಮೇಲೆತ್ತಲು ಘೋಷಿಸಿದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಮೂಲಕ ರಾಜ್ಯದ ಪಾಲಿನಲ್ಲಿ 670 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಸಹಕಾರ ಇಲಾಖೆಯು ಎಲ್ಲ ರಾಜ್ಯಗಳಿಗಿಂತ ಮೊದಲೇ ಕೇಳಿದ್ದು, ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರ ಸಹ ಮೆಚ್ಚುಗೆ ಸೂಚಿಸಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.5-thousand-job-creation-co-operative-department-minister-st-somashekhar

ಆರ್ಥಿಕ ಸ್ಪಂದನ ಮೂಲಕ ಎಲ್ಲರಿಗೂ ಸಾಲ-ಸೌಲಭ್ಯ

ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಾಲನೆ ನೀಡಿದರು. ಇದರ ಮೂಲಕ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಆರ್ಥಿಕ ಸ್ಪಂದನವನ್ನು 4 ವಿಭಾಗಗಳಾಗಿ ವಿಂಗಡಿಸಿ ಚಾಲನೆ ನೀಡಿದ್ದೇವೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳಲ್ಲಿ ಕಾರ್ಯಕ್ರಮವನ್ನು ನಡೆಸಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಯಾರಿಗೂ ಸಹ ಕೋವಿಡ್ ಸಂಕಷ್ಟದಿಂದ ಸಮಸ್ಯೆಯಾಗಬಾರದು. ಹೀಗಾಗಿ ಎಲ್ಲರಿಗೂ ಸಾಲ ಸಿಗುವಂತೆ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಗಳ ಮುಖಾಂತರ ಮಾಡಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಸಿಎಂ ಪರಿಹಾರನಿಧಿಗೆ 53 ಕೋಟಿ ರೂ.ದೇಣಿಗೆ

ಕೋವಿಡ್ 19ರ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ಹಾಗೂ ಎಪಿಎಂಸಿಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ. ಇನ್ನು ಕೊರೋನಾ ವಾರಿಯರ್ಸ್ ಗಳಾದ 42600 ಆಶಾ ಕಾರ್ಯಕರ್ತೆಯರಿಗೂ ಸಹ ತಲಾ 3000 ದಂತೆ ಒಟ್ಟು 12.75 ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಕ್ಕೆ ಸಂತಸವಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ…..

ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಗಳ ಮೂಲಕ 24.50 ಲಕ್ಷ ರೈತರಿಗೆ 15300 ಕೋಟಿ ರೂಪಾಯಿ ಸಾಲವನ್ನು ನೀಡಬೇಕೆಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರ್ಕಾರ ತೀರ್ಮಾನ ಮಾಡಿತ್ತು. ಕೋವಿಡ್ ನ ಕಷ್ಟದ ಪರಿಸ್ಥಿತಿಯಲ್ಲೂ ಸಹ ನಾವು ರೈತರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್ ಗಳ ಮುಖಾಂತರ ಸಾಲ ನೀಡುತ್ತಿದ್ದೇವೆ. ಕಳೆದ ಬಾರಿ 13,500 ಕೋಟಿಯನ್ನು ಕೊಡಲಾಗಿತ್ತು. ಆದರೆ, ಈ ಬಾರಿ 15,300 ಕೋಟಿ ಗುರಿಯನ್ನು ಹಾಕಿಕೊಂಡಿದ್ದು, ಈಗಾಗಲೇ ಇಲ್ಲಿಯವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲವನ್ನು ನೀಡಿದ್ದೇವೆ. ಶೀಘ್ರದಲ್ಲಿ ನಾವು ಹಾಕಿಕೊಂಡಿರುವ ಗುರಿಯನ್ನು ಮುಟ್ಟುತ್ತೇವೆ ಎಂದು ಸಚಿವರಾದ ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯನಗರ ಸಾಮ್ರಾಜ್ಯದ ಗತವೈಭವ ಮರಳಲಿದೆ..

ವಿಜಯನಗರ ಜಿಲ್ಲೆಯನ್ನಾಗಿ ರೂಪಿಸುವ ನಿರ್ಧಾರದ ಹಿಂದೆ ಸಚಿವರಾದ ಆನಂದ್ ಸಿಂಗ್ ಅವರ ಪಾತ್ರ ಬಹಳ ದೊಡ್ಡದಿದೆ. ಅವರು ಹಿಂದಿನ ಸರ್ಕಾರದಲ್ಲಿ ಈ ಕಾರಣಕ್ಕಾಗಿಯೇ ರಾಜೀನಾಮೆ ನೀಡಿದ್ದರು. ಇದೀಗ ಅವರ ಹೋರಾಟದ ಶ್ರಮವಾಗಿ ವಿಜಯನಗರ ಸಾಮ್ರಾಜ್ಯದ ಗತವೈಭವ ಮರಳಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ್ ನಿಜವಾದ ಮಣ್ಣಿನ ಮಗ

ಇನ್ನು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರು ನಿಜವಾದ ಮಣ್ಣಿನ ಮಗ ಆಗಿದ್ದಾರೆ. ಮಣ್ಣಿನ ಮಗ ಎಂದು ಹೇಳಿಕೊಳ್ಳುವ ರಾಜಕಾರಣಿಗಳು ದೊಡ್ಡ ದೊಡ್ಡ ಖಾತೆಗಳನ್ನು ಹೊಂದುತ್ತಾರೆ. ಇವಾರ್ಯಾರೂ ಸಹ ಕೃಷಿ ಖಾತೆಯನ್ನು ಎಂದೂ ಪಡೆದಿಲ್ಲ. ಈ ಮೂಲಕ ರೈತರ ಸೇವೆಯನ್ನು ಮಾಡಿಲ್ಲ. ಆದರೆ ಬಿ. ಸಿ. ಪಾಟೀಲರು ತಮಗೆ ಕೊಟ್ಟ ಖಾತೆಯನ್ನು ಬದಲಾಯಿಸಿ ರೈತರ ಸೇವೆಗೋಸ್ಕರ ಕೃಷಿ ಖಾತೆಯನ್ನೇ ಕೇಳಿ ಪಡೆದು ಇಂದು ಮೂವತ್ತು ಜಿಲ್ಲೆಗಳಿಗೆ ಎರಡೆರಡು ಬಾರಿ ಪ್ರವಾಸ ಮಾಡಿ ರೈತರಿಗೆ ಧ್ವನಿಯಾಗಿದ್ದಾರೆ ಎಂದು ಸಚಿವರಾದ ಸೋಮಶೇಖರ್ ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್, ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಸೇರಿದಂತೆ ಬಳ್ಳಾರಿ ಭಾಗದ ಶಾಸಕರು ಹಾಗೂ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Key words: 5 thousand –job- creation – co-operative –department-Minister -ST Somashekhar.