ಹೋರಾಟಕ್ಕೆ ಮತ್ತೊಂದು ಹೆಸರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ

ಬೆಂಗಳೂರು:ಜುಲೈ-27: ದೇಶದ ಯಾವುದೇ ಪ್ರಮುಖ ವಿಷಯ ಚರ್ಚೆಗೆ ಎತ್ತಿಕೊಂಡರೂ ಅಲ್ಲಿ ಕರ್ನಾಟಕದ ಪಾತ್ರ ಪ್ರಮುಖ. ಹೋರಾಟವನ್ನೇ ಉಸಿರಾಗಿಸಿ ಕೊಂಡು, ಹೋರಾಟದ ಮೂಲಕ ಜನರ ಸಮಸ್ಯೆಗಳನ್ನು ಪರಿ ಹರಿಸುತ್ತ, ಜನನಾಯಕರಾಗಿ ಬೆಳೆದ ಹುಟ್ಟು ಹೋರಾಟಗಾರ ಯಡಿಯೂರಪ್ಪ. ಗಾಡ್​ಫಾದರ್​ಗಳಿಲ್ಲದೆ ಹೋರಾಟದ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಈ ನಾಡಿನ ಮುಖ್ಯಮಂತ್ರಿ ಹುದ್ದೆಯನ್ನೂ ಏರಿದ ಅಪರೂಪದ ಜನನಾಯಕ ಬಿಎಸ್​ವೈ.

ಯಡಿಯೂರಪ್ಪ ಎಂದರೆ ಮುಂಗೋಪ, ಹಠ, ಛಲ, ನಿಷ್ಠುರವಾದಿ… ಎಂಬುದು ಸಾರ್ವಜನಿಕ ವಲಯದಲ್ಲಿರುವ ಮಾತು. ಜತೆಗೆ ಅವರ ಹೋರಾಟದ ಹಿನ್ನೆಲೆ, ಜನರಿಗೆ ತಂದುಕೊಟ್ಟ ನ್ಯಾಯ ಇವೆಲ್ಲದರ ವಿವರ ಎಲ್ಲರಿಗೂ ಗೊತ್ತಿಲ್ಲ. ಸಾಮಾನ್ಯ ರೈತಕುಟುಂಬದಲ್ಲಿ ಜನಿಸಿದ ಯಡಿಯೂರಪ್ಪ ಬಾಲ್ಯದಲ್ಲೇ ಸಂಘ ಪರಿವಾರದ ಚಟುವಟಿಕೆಯಲ್ಲಿ ಆಕರ್ಷಿತರಾಗಿದ್ದವರು. ಬಿಎ ಪದವಿ ನಂತರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತರಾಗಿದ್ದರು. ವೃತ್ತಿಯಲ್ಲಿ ಮುಂದುವರಿಯದೆ ಶಿವಮೊಗ್ಗದ ಶಿಕಾರಿಪುರಕ್ಕೆ ಆಗಮಿಸಿದ್ದೇ ಹೋರಾಟದ ಬದುಕಿನ ಬಹುದೊಡ್ಡ ತಿರುವು.

ಮಹಾನ್ ದೈವಭಕ್ತ, ಸಂಸ್ಕಾರವಂತರೂ ಆಗಿದ್ದ ಪ್ರಸಿದ್ಧ ವರ್ತಕರಾದ ಶಿಕಾರಿಪುರದ ಶ್ರೀವೀರಭದ್ರ ಶಾಸ್ತ್ರಿಗಳ ಒಡೆತನದ ರೈಸ್ ಮಿಲ್​ನಲ್ಲಿ ಕೆಲಸಕ್ಕೆ ಸೇರಿದರು. ಅವರ ಕ್ರಿಯಾಶೀಲತೆ ಮತ್ತು ಕೆಲಸದ ಮೇಲಿನ ಛಲವನ್ನು ಮನಗಂಡು ಶಾಸ್ತ್ರಿಗಳು ಪುತ್ರಿ ಮೈತ್ರಾದೇವಿ ಅವರನ್ನು ಮದುವೆ ಮಾಡಿಕೊಡುತ್ತಾರೆ. ನೋಡುಗರಿಗೆ ಇದು ಆಶ್ಚರ್ಯವೆನಿಸಿದರೂ ಯಡಿಯೂರಪ್ಪ ಭವಿಷ್ಯದಲ್ಲಿ ದೊಡ್ಡ ನಾಯಕರಾಗುತ್ತಾರೆಂಬುದನ್ನು ಶಾಸ್ತ್ರಿಗಳು ಅಂದೇ ಮನಗಂಡಿದ್ದರೆನಿಸುತ್ತದೆ. ಇವರಲ್ಲಿದ್ದ ಸಂಘಟನಾ ಚತುರತೆ ಮತ್ತು ಹೋರಾಟದ ಮನೋಭಾವವನ್ನು ಸೂಕ್ಷ್ಮವಾಗಿ ಗಮನಿಸಿದ ನಾಯಕರು, 1972ರಲ್ಲಿ ಭಾರತೀಯ ಜನಸಂಘದ ತಾಲೂಕು ಅಧ್ಯಕ್ಷರನ್ನಾಗಿಸುತ್ತಾರೆ. ಇಲ್ಲಿಂದ ಯಡಿಯೂರಪ್ಪ ರಾಜಕೀಯ ಪಯಣ ಅಧಿಕೃತವಾಗಿ ಆರಂಭವಾಗುತ್ತದೆ. ಇಂದಿರಾ ಗಾಂಧಿ ಪ್ರಭಾವದ ಕಾಲವದು. ಕಾಂಗ್ರೆಸ್​ನಿಂದ ಯಾರು ಸ್ಪರ್ಧಿಸಿದರೂ ಗೆಲ್ಲುತ್ತಾರೆಂಬ ವಾತಾವರಣದಲ್ಲಿ ಮೊದಲ ಬಾರಿ ಪುರಸಭೆ ಚುನಾವಣೆಗೆ ಬಿಎಸ್​ವೈ ಸ್ಪರ್ಧಿಸುತ್ತಾರೆ. ಚುನಾವಣಾ ವೆಚ್ಚಕ್ಕೆ ಹಣವಿಲ್ಲದಿದ್ದ ಸಂದರ್ಭದಲ್ಲಿ ಪಕ್ಷ ಇವರ ಜತೆಗೆ ಮೈತ್ರಾದೇವಿಗೂ ಪುರಸಭೆಗೆ ಟಿಕೆಟ್ ನೀಡಿತು. ಪ್ರಬಲ ಕಾಂಗ್ರೆಸ್ ಅಭ್ಯರ್ಥಿಗಳ ಎದುರು ದಂಪತಿ ಜಯಿಸಿದರು.

ಪುರಸಭೆ ಸದಸ್ಯರಾದ ಕೆಲವೇ ದಿನದಲ್ಲಿ (1975ರಲ್ಲಿ) ದೇಶದಲ್ಲಿ ತುರ್ತಪರಿಸ್ಥಿತಿ ಘೊಷಿಸಲಾಯಿತು. ಯಡಿಯೂರಪ್ಪರನ್ನು ಬಂಧಿಸಿ ಶಿವಮೊಗ್ಗ ನಂತರ ಬಳ್ಳಾರಿ ಜೈಲಿಗೆ ಹಾಕಲಾಗಿತ್ತು. ಜೈಲಿನಲ್ಲಿದ್ದ ಅವ್ಯವಸ್ಥೆ, ಕಳಪೆ ಆಹಾರ ಮತ್ತಿತರ ಸಮಸ್ಯೆಗಳನ್ನು ವಿರೋಧಿಸಿ ಅಲ್ಲೇ ಸತ್ಯಾಗ್ರಹ ನಡೆಸಿದರು. ಕೆಲ ಜೀವಾವಧಿ ಕೈದಿಗಳು ನೀಡುತ್ತಿದ್ದ ಕಿರುಕುಳದ ವಿರುದ್ಧ ಸಿಡಿದೆದ್ದು, ದಾದಾಗಿರಿಗೆ ಇತಿಶ್ರೀ ಹಾಡಿದರು. ಇದು ರಾಜ್ಯಾದ್ಯಂತ ಸುದ್ದಿಯಾಯಿತು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಿಕಾರಿಪುರ ಪುರಸಭೆ ಅಧ್ಯಕ್ಷ ಸ್ಥಾನವೇರಿದ ಯಡಿಯೂರಪ್ಪ ಸಮಸ್ಯೆಗಳ ನಿವಾರಣೆಗೆ ಟೊಂಕ ಕಟ್ಟಿ ನಿಂತರು. ಕುಮಧ್ವತಿ ನದಿಯಿಂದ ಶಿಕಾರಿಪುರ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ, ರಸ್ತೆ, ಬೀದಿದೀಪ ಇತ್ಯಾದಿ ಅಭಿವೃದ್ಧಿಯ ಪರ್ವವನ್ನು ಆರಂಭಿಸುತ್ತಾರೆ. 1978ರಲ್ಲಿ ದುಷ್ಕರ್ವಿುಗಳಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗುತ್ತಾರೆ. ಸ್ವಲ್ಪವೂ ಕುಗ್ಗದೆ ಮತ್ತಷ್ಟು ಯೋಜಿತ ಹೋರಾಟಗಳಿಗೆ ಅಣಿಯಾಗುತ್ತಾರೆ. ರಸ್ತೆತಡೆ, ರೈಲುತಡೆ, ಪಾದಯಾತ್ರೆ, ಜಾಥಾ ಹೀಗೆ ಯಡಿಯೂರಪ್ಪ ಹೋರಾಟಗಳಿಗೆ ಸರಿಸಾಟಿ ಯಾರಿಲ್ಲ ಎಂದೆನಿಸಿಕೊಳ್ಳುತ್ತಾರೆ.

ಜನತಾ ಪಕ್ಷದ ಸರ್ಕಾರದಲ್ಲಿ ಅರಣ್ಯಮಂತ್ರಿಗಳಾಗಿದ್ದ ಬಿ.ರಾಚಯ್ಯ ಬಗರ್​ಹುಕುಂ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿಕೊಳ್ಳುವ ಮಸೂದೆ ಮಂಡಿಸಿದಾಗ, ಸಣ್ಣ ಹಿಡುವಳಿದಾರರು ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾವಿರಾರು ರೈತರು ಬೀದಿಗೆ ಬೀಳುತ್ತಾರೆಂಬ ಕಾರಣಕ್ಕೆ ಅದನ್ನು ವಿರೋಧಿಸಿ ಏಕಾಂಗಿಯಾಗಿ ಹೋರಾಟ ನಡೆಸುತ್ತಾರೆ. ಬಹುಮತವಿರುವ ಸರ್ಕಾರದ ಮಸೂದೆ ಅಂಗೀಕಾರವಾಗುವುದು ಖಚಿತ ಎಂದರಿತು ಪ್ರಬಲ ವಿರೋಧಪಕ್ಷವಾಗಿದ್ದ ಕಾಂಗ್ರೆಸ್ ಕೈಕಟ್ಟಿ ಕುಳಿತರೆ ಬಿಜೆಪಿಯ ಏಕಾಂಗಿ ಶಾಸಕ ಯಡಿಯೂರಪ್ಪ ಸಭಾಧ್ಯಕ್ಷರ ಆಸನದ ಮುಂಭಾಗ ಸತ್ಯಾಗ್ರಹ ಮಾಡುತ್ತಾರೆ. ಅಂತಿಮವಾಗಿ ಅಂದಿನ ಸಭಾಧ್ಯಕ್ಷರಾಗಿದ್ದ ಬಿ.ಜಿ.ಬಣಕಾರ್, ಸ್ಥಾನಕ್ಕೆ ಬಂದು ಮಾತನಾಡುವಂತೆ ಅವಕಾಶ ನೀಡುತ್ತಾರೆ. ‘ಹಿಂದುಳಿದ ವರ್ಗದಿಂದ ಆಯ್ಕೆಯಾಗಿ ಬಂದಿರುವ ರಾಚಯ್ಯ ಆ ವರ್ಗಕ್ಕೆ ಮೋಸ ಮಾಡುತ್ತಿರುವ ಮಸೂದೆ ಮಂಡಿಸಿರುವುದು ನೋವು ತಂದಿದೆ. ಮಾತ್ರವಲ್ಲ, ಇದಕ್ಕೆ ನಾನು ಮೂಕ ಸಾಕ್ಷಿಯಾಗಿರುವುದು ನನ್ನ ದುರಾದೃಷ್ಟ’ ಎಂದು ಬಿಎಸ್​ವೈ ಭಾವನಾತ್ಮಕವಾಗಿ ಆಡಳಿತಾರೂಢರ ಕಣ್ಣು ತೆರೆಸುವ ಯತ್ನ ಮಾಡುತ್ತಾರೆ. ಅಂತಿಮವಾಗಿ ರಾಚಯ್ಯ ಮಸೂದೆಯನ್ನು ಹಿಂದಕ್ಕೆ ಪಡೆಯುವ ಮೂಲಕ ಸದನದ ಇತಿಹಾಸದಲ್ಲೊಂದು ದಾಖಲೆ ನಿರ್ವಣವಾಗುತ್ತದೆ.

ಯಡಿಯೂರಪ್ಪ ಮಾಡಿದ ಮತ್ತೊಂದು ಬಹುದೊಡ್ಡ ಹೋರಾಟ, ಜೀತಪದ್ಧತಿ ವಿರುದ್ಧ. ಅಸಂಘಟಿತ ಸಾವಿರಾರು ಕಾರ್ವಿುಕರನ್ನು ಕರೆದುಕೊಂಡು ಶಿಕಾರಿಪುರದಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಸಿದ ಪಾದಯಾತ್ರೆ ಅತಿದೊಡ್ಡ ಸುದ್ದಿಯಾಯಿತು. ಸರ್ಕಾರದ ವೈಫಲ್ಯಗಳ ವಿರುದ್ಧ ಯಾವುದೇ ಹೋರಾಟ ಆರಂಭಿಸಿ ದರೂ ಅದಕ್ಕೊಂದು ರ್ತಾಕ ಅಂತ್ಯ ಕಾಣಿಸುವ ವ್ಯಕ್ತಿತ್ವ ಯಡಿಯೂರಪ್ಪ ಅವರದು. ಪ್ರಚಾರಕ್ಕಾಗಿ ಯಾವುದೇ ಹೋರಾಟ ಮಾಡುತ್ತಿರಲಿಲ್ಲ. ಆದರೆ ಅವರ ಪ್ರತಿಭಟನೆ, ಹೋರಾಟಗಳೆಲ್ಲವೂ ವ್ಯಾಪಕ ಪ್ರಚಾರ ಪಡೆದುಕೊಂಡು ರಾಜ್ಯದಾದ್ಯಂತ ಅವರೊಬ್ಬ ಜನನಾಯಕರಾಗಿ ಹೊರಹೊಮ್ಮಲು ಕಾರಣವಾಯಿತು. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಕಾರಣವೇ ಆ ಜನಪ್ರಿಯತೆ.

ಸತ್ಯಾಗ್ರಹ ವಿಧಾನಸೌಧಕ್ಕೆ ಶಿಫ್ಟ್…

1983ರಲ್ಲಿ ಶಾಸಕರಾಗಿ ಆಯ್ಕೆಯಾದ ಯಡಿಯೂರಪ್ಪ ಹೋರಾಟಕ್ಕೆ ಹೊಸ ವೇದಿಕೆಯಾಗಿದ್ದು ವಿಧಾನಸೌಧ. 1985ರಲ್ಲಿ ರಾಜ್ಯ ರಾಜಕೀಯ ಸ್ಥಿತ್ಯಂತರದಿಂದಾಗಿ 2 ವರ್ಷದಲ್ಲೇ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮರು ಆಯ್ಕೆಗೊಂಡು ಏಕಾಂಗಿಯಾಗಿ ವಿಧಾನಸೌಧದಲ್ಲಿ ನಡೆಸಿದ ಸತ್ಯಾಗ್ರಹ ಮತ್ತು ಹೋರಾಟಗಳು ರಾಜ್ಯದ ಗಮನ ಸೆಳೆದಿದ್ದಷ್ಟೇ ಅಲ್ಲ, ಜನಪರ ಕಾಳಜಿ ಏನೆಂಬುದು ತಿಳಿಯಲ್ಪಟ್ಟಿತು. ವಿಷಯಾಧಾರಿತ ಹೋರಾಟಕ್ಕೆ ಧುಮುಕುತ್ತಿದ್ದ ಬಿಎಸ್​ವೈ, ಇಚ್ಛಾಶಕ್ತಿಯಿದ್ದರೆ ಬಹುಮತ ಇಲ್ಲದೆಯೂ ಜನಪರ ಕೆಲಸ ಮಾಡಬಹುದೆಂಬುದನ್ನು ಸಾಬೀತುಪಡಿಸಿ ವಿಧಾನಸಭೆ ಇತಿಹಾಸದಲ್ಲೇ ದಾಖಲೆ ನಿರ್ವಿುಸುತ್ತಾರೆ.
ಕೃಪೆ:ವಿಜಯವಾಣಿ

ಹೋರಾಟಕ್ಕೆ ಮತ್ತೊಂದು ಹೆಸರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ
bs-yediyurappa-is-famous-for-his-protests