ಡಿಸೆಂಬರ್ ನಲ್ಲಿ ಶಾಲೆ ಮತ್ತು ಪಿಯು ಕಾಲೇಜು ಪುನಾರಂಭ ಇಲ್ಲ- ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ನವೆಂಬರ್ 23,2020(www.justkannada.in): ಕೋವಿಡ್ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನರಾರಂಭಿಸುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.no-school-and-pu-college-reopening-december-minister-dr-k-sudhakar

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಇಂದು ನಡೆದ ಶಿಕ್ಷಣ ಇಲಾಖೆಯ ಸಭೆಯಲ್ಲಿ, ಡಿಸೆಂಬರ್ ನಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನರಾರಂಭ ಬೇಡ ಎಂದು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಆನ್ ಲೈನ್ ಮೂಲಕ ಪಾಲ್ಗೊಂಡ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸು ಹಾಗೂ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಡಿಸೆಂಬರ್ ನ ಚಳಿಗಾಲ ಸೋಂಕು ಹರಡಲು ಅನುಕೂಲ ಮಾಡಿಕೊಡಬಹುದು. ಕೊರೊನಾದ ಎರಡನೇ ಅಲೆಯೂ ಬರಲಿದೆ ಎಂಬ ಸುದ್ದಿಯೂ ಇರುವುದರಿಂದ ಮುಂದಾಲೋಚನೆ ಮಾಡಬೇಕಿದೆ. ಈ ಕುರಿತು ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಕೂಡ ಚರ್ಚೆಯಾಗಿದ್ದು, ಈಗಾಗಲೇ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ತೆರೆಯುವುದು ಬೇಡ ಎಂದು ಸಚಿವರು ಸಲಹೆ ನೀಡಿದರು.no-school-and-pu-college-reopening-december-minister-dr-k-sudhakar

ಶಾಲೆ ಪುನರಾರಂಭಕ್ಕೆ ಸಂಬಂಧಿಸಿದಂತೆ, ಡಿಸೆಂಬರ್ 3 ನೇ ವಾರದಲ್ಲಿ ಸಭೆ ನಡೆಸಿ, ಅವಲೋಕನ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದು. ಆ ಸಮಯದಲ್ಲಿ ಕೋವಿಡ್ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಬಹುದು ಎಂದು ಸಚಿವರು ಸಭೆಗೆ ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

Key words: no- school and PU college- reopening – December-Minister -Dr. K. Sudhakar.