ಕ್ಯಾಮರಾಮನ್  ಮೇಲಿನ ಹಲ್ಲೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಖಂಡನೆ: ದೂರು ದಾಖಲು.

ಮೈಸೂರು,ಡಿಸೆಂಬರ್,9,2021(www.justkananda.in):  ಮೈಸೂರಿನ ಇಂಡಿಯನ್ ಟಿವಿ ಕ್ಯಾಮರಾಮನ್ ಎಲ್ ಸತೀಶ್ ಅವರ ಮೇಲೆ ಪೊಲೀಸ್ ಪೇದೆ ಹಲ್ಲೆ ನಡೆಸಿರುವುದನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ.

ಗುರುವಾರ ಬೆಳಿಗ್ಗೆ ಸಿದ್ದಲಿಂಗಪುರದ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುತ್ತಿದ್ದ ಷಷ್ಟಿ ಪೂಜೆಯ ವರದಿ ಮಾಡಲು ತೆರಳಿದ್ದ ಸತೀಶ್ ಅವರನ್ನು ದೇಗುಲದ ಹೊರಗೆ ಅಡ್ಡ ಹಾಕಿದ ನರಸಿಂಹರಾಜ ಠಾಣೆಯ ಪೇದೆ ಲೋಕೇಶ್ ಎಂಬಾತ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಲಾಠಿಯಿಂದ ಮನಸೋ ಇಚ್ಛೆ ಥಳಿಸಿ ನೆಲಕ್ಕೆ ಬೀಳಿಸಿ ತೀವ್ರತರವಾಗಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನುಷವಾಗಿದೆ ಎಂದು ಸಂಘ ಖಂಡಿಸಿದೆ.

ಹಲ್ಲೆ ನಡೆಸಿರುವುದರ ಜೊತೆಗೆ ಮಾಧ್ಯಮ ವೃತ್ತಿಯ ಬಗ್ಗೆಯೂ ಕೇವಲವಾಗಿ ಮಾತನಾಡಿರುವ ಪೇದೆ ಲೋಕೇಶ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ  ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಅವರು ಮೈಸೂರು ನಗರ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ದೂರು ದಾಖಲು:

ಕ್ಯಾಮರಾಮನ್ ಸತೀಶ್ ಮೇಲೆ ಹಲ್ಲೆ ನಡೆಸಿರುವ ಸಂಬಂಧ ಪೇದೆ ಲೋಕೇಶ್ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ಪಿ.ರಂಗಸ್ವಾಮಿ ಹಾಗೂ ಇತರ ಪತ್ರಕರ್ತರ ಸಮ್ಮುಖದಲ್ಲಿ ಲಿಖಿತ ದೂರು ನೀಡಲಾಗಿದೆ.

Key words: Mysore- District- Journalists -Association -condemns -attack – cameraman-Complaint